ರಾಜ್ಯಪಾಲ ವಾಲಾಗೆ ಸಿಎಂ, ಸಚಿವರ ಬೀಳ್ಕೊಡುಗೆ

By Kannadaprabha NewsFirst Published Jul 9, 2021, 8:32 AM IST
Highlights

* ಸಭಾಪತಿ ಹೊರಟ್ಟಿ ಅವರಿಂದಲೂ ಶುಭಾಶಯ ವಿನಿಮಯ
* ಸದನದ ಕಲಾಪದ ಬಗ್ಗೆ ವಾಲಾ ಪ್ರಶಂಸೆ
* ಆರು ವರ್ಷ 10 ತಿಂಗಳ ಕಾಲ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ವಾಲಾ

ಬೆಂಗಳೂರು(ಜು.09): ರಾಜ್ಯದ ನಿರ್ಗಮಿತ ರಾಜ್ಯಪಾಲ ವಿ.ಆರ್‌.ವಾಲಾ ಅವರನ್ನು ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರೆ ಗಣ್ಯರು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.  

ಆರು ವರ್ಷ 10 ತಿಂಗಳ ಕಾಲ ರಾಜ್ಯದ ರಾಜ್ಯಪಾಲರಾಗಿ ವಿ.ಆರ್‌.ವಾಲಾ ಅವರು ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಥಾವರ್‌ಚಂದ್‌ ಗೆಹಲೋತ್‌ ಅವರು ರಾಜ್ಯದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿ.ಆರ್‌.ವಾಲಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾ ಹೊರಟ್ಟಿ ಸೇರಿದಂತೆ ಗಣ್ಯರು ಶುಭ ಹಾರೈಸಿದರು. ರಾಜ್ಯಪಾಲರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.

ಈ ವೇಳೆ ನಾಡಿನ ಗಣ್ಯರ ಕಾರ್ಯವೈಖರಿ ಅನುಕರಣೀಯವಾಗಿದ್ದು, ಎಲ್ಲಾ ಪೀಠಾಸೀನಾಧಿಕಾರಿಗಳಿಗೆ ಮಾದರಿಯಾಗಿದೆ ಎಂದು ನಿರ್ಗಮಿತ ರಾಜ್ಯಪಾಲ ವಿ.ಆರ್‌.ವಾಲಾ ಶ್ಲಾಘಿಸಿದ್ದಾರೆ. ಸದನ ಕಲಾಪ ನಡೆಸುವ ಕಾರ್ಯ ಪದ್ಧತಿಯನ್ನು ಕೊಂಡಾಡಿದರು.

ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರು!

ಸಭಾಪತಿ ಬಸವರಾಜ ಹೊರಟ್ಟಿ ಅವರ ಭೇಟಿ ವೇಳೆ ರಾಜ್ಯಪಾಲರು ನಾಲ್ಕು ದಶಕಗಳ ಸಮಾಜಮುಖಿ ಚಿಂತನೆಗಳು ಮತ್ತು ರಾಜಕೀಯ ಅನುಭವದಿಂದ ವಿಧಾನ ಪರಿಷತ್ತಿನ ಕಲಾಪಗಳು ಅರ್ಥಪೂರ್ಣವಾಗಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು. ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್ತಿನಲ್ಲಿ ವರ್ತಮಾನದ ಸಮಸ್ಯೆಗಳ ಕುರಿತು ಚಿಂತನ ಮಂಥನ ನಡೆಯುತ್ತಿರುವುದರ ಜೊತೆಗೆ ಹಲವಾರು ಮೌಲ್ವಿಕ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಇಡೀ ಸಮಾಜಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳ ಸಾರ್ಥಕ್ಯದ ಕುರಿತು ಸ್ಪಷ್ಟಸಂದೇಶ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಹಿರಿಯ ಸದಸ್ಯರ ಅನುಭವ, ವಿಚಾರಧಾರೆ ಹಾಗೂ ಸದನದ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿಅವರು ನಡೆಸುತ್ತಿರುವ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. 6 ವರ್ಷ 10 ತಿಂಗಳ ಕಾಲ ಕರ್ನಾಟಕದ ಜನತೆ ತಮಗೆ ನೀಡಿದ ಗೌರವ ಹಾಗೂ ಸಹಕಾರಕ್ಕೆ ರಾಜ್ಯಪಾಲರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.
 

click me!