Covid Outbreaks : ಶಾಲೆಗಳಲ್ಲಿ ಸೋಂಕು ತಡೆಗೆ ಸಿಎಂ ನೇತೃತ್ವದ ಸಭೆ :ಭಾರೀ ಬದಲಾವಣೆ ಸಾಧ್ಯತೆ

By Kannadaprabha NewsFirst Published Dec 8, 2021, 6:21 AM IST
Highlights
  • ಶಾಲೆಗಳಲ್ಲಿ ಸೋಂಕು ತಡೆಗೆ ಸಿಎಂ ನೇತೃತ್ವದ ಸಭೆ :ಭಾರೀ ಬದಲಾವಣೆ ಸಾಧ್ಯತೆ
  • ವಸತಿ ಶಾಲೆಗಳಲ್ಲಿ ಕೋವಿಡ್‌ ಹೆಚ್ಚುತ್ತಿರುವ ಬಗ್ಗೆ ತಜ್ಞರ ಜತೆ ಚರ್ಚೆ: ಸಚಿವ ನಾಗೇಶ್‌
  • ಶಾಲೆ-ಕಾಲೇಜು ಬಂದ್‌ ಇಲ್ಲ, ಶಿಕ್ಷಣ ಸಂಸ್ಥೆಗಳ ಮಾರ್ಗಸೂಚಿ 

ಬೆಂಗಳೂರು (ಡಿ.08): ವಸತಿ ಶಾಲೆ ಸೇರಿದಂತೆ ಶಾಲಾ (School) ಮಕ್ಕಳಲ್ಲಿ ಕೊರೋನಾ ಸೋಂಕು (Covid) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರೊಂದಿಗೆ ಡಿ.9ರಂದು ಸಭೆ ನಡೆಸಲಿದ್ದು, ಈ ಸಭೆಯ ನಂತರ ವಸತಿ ಶಾಲೆಗಳ ಮಾರ್ಗಸೂಚಿ ಬದಲಾವಣೆ ಕುರಿತು ನಿರ್ಧಾರ ಹೊರಬೀಳಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಹಾಗೂ ಆರೋಗ್ಯ (Health) ಇಲಾಖೆಯ ತಜ್ಞರು ಪಾಲ್ಗೊಳ್ಳಲಿದ್ದಾರೆ. ಶಾಲೆಗಳ ಕುರಿತು ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯನ್ನು ಬದಲಾದ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ವಿಶೇಷವಾಗಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಾಣಿಸಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಒಂದೆರಡು ದಿನದಲ್ಲಿ ಬರಲಿರುವ ವರದಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

"

ಶಾಲಾ-ಕಾಲೇಜು ಬಂದ್‌ ಇಲ್ಲ:

ರಾಜ್ಯದ 130 ಶಾಲಾ ಮಕ್ಕಳಲ್ಲಿ ಕೊರೋನಾ (Corona) ಸೋಂಕು ಕಾಣಿಸಿಕೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹಬ್ಬುವಿಕೆ ಬಗ್ಗೆ ಪೋಷಕರಿಗೆ ಆತಂಕ ಬೇಡ. ಒಮಿಕ್ರೋನ್‌ ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಜತೆಗೆ, ಸರ್ಕಾರವೂ ಸಾಕಷ್ಟುಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ ಎಂದರು.

ಸೋಂಕು ಭೀತಿಯಿಂದ ಈ ತಕ್ಷಣ ಶಾಲಾ- ಕಾಲೇಜು ಬಂದ್‌ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ, ಆತಂಕ ಹುಟ್ಟುವಷ್ಟುಸೋಂಕು ಹಬ್ಬಿದರೆ ಶಾಲೆ-ಕಾಲೇಜು ಬಂದ್‌ ಮಾಡಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಶಾಲಾ- ಕಾಲೇಜುಗಳಲ್ಲಿ (School)  1.25 ಕೋಟಿ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಸೋಂಕಿತ 130 ಮಕ್ಕಳಲ್ಲಿ 110 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಇರುವವರು. ಉಳಿದ 20 ಮಕ್ಕಳು ಬೇರೆ ಬೇರೆ ಕಡೆ ಓದುತ್ತಿದ್ದಾರೆ. ಒಟ್ಟಾರೆ ಮಕ್ಕಳ ಸಂಖ್ಯೆ ಗಣನೆಗೆ ತೆಗೆದುಕೊಂಡರೆ ಭಾರೀ ಪ್ರಮಾಣದ ಸೋಂಕು ಎಂದು ಹೇಳಲು ಆಗುವುದಿಲ್ಲ. ಸೋಂಕು ಶಾಲೆಯಲ್ಲಿ ಹರಡಿಲ್ಲ, ಬಹುತೇಕ ಮಕ್ಕಳ ಮನೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಶಿಕ್ಷಕರಿಗೆ ಮಾತ್ರ ಸೋಂಕಿನ ಲಕ್ಷಣ ಕಾಣಿಸಿದೆ, ಬಹುತೇಕ ಮಕ್ಕಳಲ್ಲಿ ಲಕ್ಷಣ ರಹಿತ ಸೋಂಕು ಇದೆ. ಈ ಹಿನ್ನೆಲೆಯಲ್ಲಿ ಪೋಷಕರು ಲಸಿಕೆ ತೆಗೆದುಕೊಳ್ಳುವ ಜೊತೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲಾಧಿಕಾರಿಗಳಿಂದ ಮಾಹಿತಿ:

ಸೋಂಕು ಹರಡದಂತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಖುದ್ದು ಜಿಲ್ಲಾಧಿಕಾರಿಗಳೇ (DC) ಎಲ್ಲ ವಸತಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಸೋಂಕು ಪರೀಕ್ಷೆ ಮಾಡುವಂತೆ ತಿಳಿಸಿದ್ದೇವೆ. ಒಂದರೆಡು ದಿನಗಳಲ್ಲಿ ಎಲ್ಲ ವಸತಿ ಶಾಲೆಗಳ ಮಾಹಿತಿ ಕಳುಹಿಸಲಿದ್ದಾರೆ. ಈ ವರದಿ ಆಧರಿಸಿ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

130 ಶಾಲಾ ಮಕ್ಕಳಿಗೆ ಕೋವಿಡ್‌ ಸೋಂಕು

ರಾಜ್ಯದ 130 ಶಾಲಾ ಮಕ್ಕಳಿಗೆ ಕೊರೋನಾ ತಗಲಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರಿಗೆ ಆತಂಕ ಬೇಡ. ಒಮಿಕ್ರೋನ್‌ ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ತಕ್ಷಣಕ್ಕೆ ಶಾಲೆ, ಕಾಲೇಜು ಮುಚ್ಚುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಸೋಂಕು ಹೆಚ್ಚಿದರೆ ಶಾಲೆ ಬಂದ್‌ ಮಾಡಲು ಹಿಂಜರಿಯುವುದಿಲ್ಲ.

- ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವ

click me!