Ambedkar Mahaparinirvan Diwas: `ಬುದ್ಧನಂತೆ ದೈವತ್ವಕ್ಕೇರಿದ ಮಹಾನ್ ಸಾಧಕ ಅಂಬೇಡ್ಕರ್’

By Suvarna News  |  First Published Dec 6, 2021, 10:19 PM IST

`ಬುದ್ಧನಂತೆ ದೈವತ್ವಕ್ಕೇರಿದ ಮಹಾನ್ ಸಾಧಕ ಅಂಬೇಡ್ಕರ್’ 
65ನೇ ಮಹಾಪರಿನಿರ್ವಾಣ ದಿವಸದಲ್ಲಿ ಸಚಿವ ಅಶ್ವತ್ಥನಾರಾಯಣ ಬಣ್ಣನೆ 
ರಾಜ್ಯ ಬಿಜೆಪಿ ಎಸ್-ಎಸ್ಟಿ ಮೋರ್ಚಾ ಏರ್ಪಡಿಸಿದ್ದ ಸಮಾರಂಭ


ಬೆಂಗಳೂರು, (ಡಿ.06): ಜ್ಞಾನದ ಆಧಾರದ ಮೇಲೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ (Babasaheb Ambedkar ಅವರು ತಮ್ಮ ಸಾಧನೆ ಮತ್ತು ಕೊಡುಗೆಗಳ ಮೂಲಕ ಬುದ್ಧನಂತೆ ದೈವತ್ವಕ್ಕೆ ಏರಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath Narayan) ಗುಣಗಾನ ಮಾಡಿದ್ದಾರೆ. 

ಅಂಬೇಡ್ಕರ್ ಅವರ 65ನೇ ಮಹಾಪರಿನಿರ್ವಾಣ ದಿನದ(Mahaparinirvan Diwas ) ಅಂಗವಾಗಿ ರಾಜ್ಯ ಬಿಜೆಪಿ (BJP) ಎಸ್-ಎಸ್ಟಿ ಮೋರ್ಚಾ ಏರ್ಪಡಿಸಿದ್ದ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಅಂಬೇಡ್ಕರ್ ಅವರ ಆಶಯಗಳಿಗೆ ತಕ್ಕಂತೆ ಆಡಳಿತ ನಡೆಸುತ್ತಿದ್ದು, ದೀನದಲಿತರ ಸಮಗ್ರ ಏಳಿಗೆಯನ್ನು ನನಸು ಮಾಡುತ್ತಿದೆ. ಬಿಜೆಪಿ ದಲಿತರಿಗೆ ಅನ್ಯಾಯವಾಗಲು ಎಂದಿಗೂ ಅವಕಾಶ ಕೊಡುವುದಿಲ್ಲ ಎಂದರು. 

Latest Videos

undefined

Constitution: ಅಂಬೇಡ್ಕರ್‌ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ

ಬಿಜೆಪಿ ದಲಿತರ ಹಿತಾಸಕ್ತಿಗಳಿಗೆ ಪೂರಕವಾಗಿದ್ದು, ಮೀಸಲಾತಿ, ಮುಂಬಡ್ತಿ, ದೌರ್ಜನ್ಯ ತಡೆ, ಬ್ಯಾಂಕ್ ಖಾತೆ ಆರಂಭ, ಖಾತೆಗಳಿಗೆ ನೇರ ನಗದು ವರ್ಗಾವಣೆ ಮುಂತಾದ ವಿಚಾರಗಳಲ್ಲಿ ದಮನಿತರ ಪರವಾಗಿದೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಮೋದಿಯವರ ಸರಕಾರ ಅದಕ್ಕೆ ಅವಕಾಶ ನೀಡದೆ ಆ ಸಮುದಾಯಗಳ ಪರವಾಗಿ ನಿಂತಿರುವುದೇ ಈ ಬದ್ಧತೆಗೆ ಸಾಕ್ಷಿ ಎಂದು ಅವರು ನುಡಿದರು. 

ರಾಜ್ಯ ಸರಕಾರ ಕೂಡ ಬಾಬಾಸಾಹೇಬರ ಹೆಸರಿನಲ್ಲಿ `ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಯನ್ನು ನಿರ್ಮಿಸಿದ್ದು, ಇದು ಜಾಗತಿಕ ಗುಣಮಟ್ಟದೊಂದಿಗೆ ಕೆಲಸ ಮಾಡುತ್ತಿದೆ. ಇದು ರಾಜ್ಯ ಬಿಜೆಪಿ ಸರಕಾರವು ಅವರಿಗೆ ಸಲ್ಲಿಸಿರುವ ಪ್ರಾಮಾಣಿಕ ಗೌರವದ ಸಂಕೇತವಾಗಿದೆ. ಈಗ ದಲಿತರ ಪೈಕಿ ಶೇ.50ರಷ್ಟು ಜನ ಬಿಜೆಪಿ ಪರವಾಗಿದ್ದು, ಕೆಲವೇ ವರ್ಷಗಳಲ್ಲಿ ಈ ಪ್ರಮಾಣ ಶೇ.90ನ್ನು ಮುಟ್ಟಲಿದೆ  ಎಂದು ಅವರು ಅಭಿಪ್ರಾಯಪಟ್ಟರು. 

ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಮಾಸ್ಟರ್ಸ್ ಪದವಿ ಪಡೆದುಕೊಂಡಿದ್ದು, 21 ವರ್ಷಗಳ ಕಾಲ ವಿದೇಶಗಳಲ್ಲಿ ಅಧ್ಯಯನ ಮಾಡಿದ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದ್ದರು, ಶಾಸನ ಪರಿಣತಿ, ಆರ್ಥಿಕ ವಿಚಾರ, ಶಿಕ್ಷಣ, ಪತ್ರಿಕೋದ್ಯಮ ಮತ್ತು ದಲಿತ ಚಳವಳಿಗಳನ್ನು ಮುನ್ನಡೆಸುವ ಬಹುಮುಖ ಪ್ರತಿಭೆ ಅವರದಾಗಿತ್ತು. ದಲಿತರು ಈ ಹಾದಿಯಲ್ಲಿ ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವೆಂದು ಅಶ್ವತ್ಥನಾರಾಯಣ ಸಲಹೆ ನೀಡಿದರು. 

ಶಿಕ್ಷಣವೇ ದಲಿತರ ಪಾಲಿನ ನಿಜವಾದ ಶಕ್ತಿ. ಮೋದಿಯವರು ಇದನ್ನು ಮನಗಂಡೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಶಾಲೆಯಿಂದ ವಂಚಿತರಾಗುವ ದಮನಿತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಲಾಗಿದೆ. ರಾಜ್ಯದಲ್ಲೂ ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯ ಪೂರೈಕೆಗೆ ಆದ್ಯತೆ ಕೊಡಲಾಗಿದೆ ಎಂದು ಅವರು ತಿಳಿಸಿದರು. 

ಕೌಶಲ್ಯಾಭಿವೃದ್ಧಿ ಇಲಾಖೆಯ ಮೂಲಕ ಉನ್ನತಿ ಮತ್ತು ಎಲಿವೇಟ್ ಮುಂತಾದ ಯೋಜನೆಗಳನ್ನು ರೂಪಿಸಲಾಗಿದ್ದು, ದಮನಿತ ಸಮುದಾಯಗಳ ಆಸಕ್ತರು ಮುಂದೆ ಬಂದರೆ ನವೋದ್ಯಮಗಳ ಸ್ಥಾಪನೆಗೆ ಎಲ್ಲ ಸಹಕಾರಗಳನ್ನೂ ಕೊಡಲಾಗುವುದು ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಬಿಜೆಪಿ ಎಸ್-ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಭಾರಿ ಕುಮಾರ್, ಬಿಜೆಪಿ ಮುಖಂಡರಾದ ಶಂಕರ್, ಮಂಜುನಾಥ್, ಮುನಿರಾಜು ಮುಂತಾದವರು ಉಪಸ್ಥಿತರಿದ್ದರು.
 

click me!