
ಕಾರವಾರ(ಜು.29): ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತರುವಾಯ ಮೊಟ್ಟಮೊದಲು ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬೊಮ್ಮಾಯಿ ಆಗಮಿಸಲಿದ್ದು, ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಆಗಮಿಸಲು ಮೂರು ಬಾರಿ ನಿರ್ಧರಿಸಿದರೂ ಬೇರೆ ಬೇರೆ ಕಾರಣಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನೇಮಕಗೊಂಡ ಮೇಲೆ ತಮ್ಮ ಮೊದಲ ಪ್ರವಾಹ ಪೀಡಿತ ಪ್ರದೇಶದ ಪ್ರವಾಸವನ್ನಾಗಿ ಉತ್ತರ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಉತ್ತರ ಕನ್ನಡದಲ್ಲಿ 2019ರಲ್ಲಿ ಭಾರಿ ಪ್ರವಾಹ ಬಂದಿತ್ತು. ಕಾರವಾರದಲ್ಲಿ ಕಾಳಿ ನದಿ, ಅಂಕೋಲಾದಲ್ಲಿ ಗಂಗಾವಳಿ ನದಿ, ಕುಮಟಾದಲ್ಲಿ ಅಘನಾಶಿನಿ ನದಿಗೆ ಬಂದ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಆದಾದ ತರುವಾಯ ಈಚೆಗೆ ಮತ್ತೆ ಭಾರಿ ಪ್ರವಾಹ ಉಂಟಾಗಿದೆ. ಈ ಎರಡೂ ಪ್ರವಾಹದಲ್ಲಿ 10ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಅಪಾರ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದರು. ಈಗಲೂ ಸಾಕಷ್ಟುಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲೇ ಇದ್ದಾರೆ.
ಈ ಬಾರಿಯೂ ಕೂಡ ಕಾಳಿ ತೀರ, ಗಂಗಾವಳಿ ತೀರ ಹಾಗೂ ಅಘನಾಶಿನಿ ತೀರದಲ್ಲಿ ಜನರು ಸಂತ್ರಸ್ತರಾಗಿದ್ದಾರೆ. ಶಿರಸಿ, ಸಿದ್ಧಾಪುರ, ಯಲ್ಲಾಪುರದಲ್ಲೂ ಭಾರಿ ಹಾನಿ ಉಂಟಾಗಿದೆ. ಯಲ್ಲಾಪುರದ ಕಳಚೆಯಲ್ಲಿ ಭೂ ಕುಸಿತದಿಂದ ಜನತೆ ತತ್ತರಿಸಿದ್ದಾರೆ. ಗುಳ್ಳಾಪುರದ ಪ್ರಮುಖ ಸೇತುವೆಯೇ ಕೊಚ್ಚಿಹೋಗಿ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ಸಾವಿರಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಜು. 26ರಂದು ಜಿಲ್ಲೆಗೆ ಆಗಮಿಸಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ನಿರ್ಧರಿಸಿದ್ದರು. ಆದರೆ ರಾಜಕೀಯ ಬೆಳವಣಿಗೆಗಳಿಂದ ಸಾಧ್ಯವಾಗಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿ ಪ್ರವಾಹಪೀಡಿತ ಪ್ರದೇಶವನ್ನು ವೀಕ್ಷಿಸಲಿದ್ದಾರೆ. ಮುಖ್ಯಮಂತ್ರಿ ಆಗಮಿಸುತ್ತಿರುವುದರಿಂದ ಪ್ರವಾಹ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ, ಶಾಶ್ವತ ಪುನರ್ವಸತಿ ಸಿಗುವ ನಿರೀಕ್ಷೆ ಉಂಟಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಬೆಳಗ್ಗೆ 10.45ಕ್ಕೆ ಹುಬ್ಬಳ್ಳಿಯಿಂದ ಹೊರಟು ಬೆಳಗ್ಗೆ 11.45ಕ್ಕೆ ಯಲ್ಲಾಪುರಕ್ಕೆ ಆಗಮಿಸಲಿದ್ದಾರೆ. ಯಲ್ಲಾಪುರ ತಾಲೂಕಿನ ಕಳಚೆ, ಅರಬೈಲ್, ಗುಳ್ಳಾಪುರ, ಅಂಕೋಲಾ ಬಳಿಯ ಶಿರೂರು ಮತ್ತಿತರ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಲಿದ್ದಾರೆ. ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 3 ಗಂಟೆಗೆ ಅಂಕೋಲಾದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ