
ಬೆಂಗಳೂರು(ನ.21): ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರು ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ಸಂಜೆ ಮಹತ್ವದ ಸಭೆ ನಡೆಯಲಿದ್ದು, ಹಾಲಿನ ದರವು ಪ್ರತಿ ಲೀಟರ್‌ಗೆ 2 ರಿಂದ 3 ರು. ಹೆಚ್ಚಳವಾಗುವ ಸಾಧ್ಯತೆಯಿದೆ. ಕೆಎಂಎಫ್ ಸಂಸ್ಥೆಯು ನ.14ರಂದು ಹೊರಡಿಸಿ ಹಿಂಪಡೆದಿದ್ದ ಆದೇಶದಲ್ಲಿ ಹಾಲು ಹಾಗೂ ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಿತ್ತು. ಈಗಲೂ ಕನಿಷ್ಠ ಅಷ್ಟು ಪ್ರಮಾಣದ ದರ ಹೆಚ್ಚಳ ಮಾಡಬೇಕು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಪದಾಧಿಕಾರಿಗಳು, ವಿವಿಧ ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಮನವಿಯನ್ನು ಯಥಾವತ್ತಾಗಿ ಪುರಸ್ಕರಿಸಿದರೆ ಲೀಟರ್‌ಗೆ 3 ರು. ಹೆಚ್ಚಾಗಲಿದೆ. ಇಲ್ಲದಿದ್ದರೆ ಕನಿಷ್ಠ 2 ರು.ಗಳಷ್ಟಾದರೂ ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಾಲಿನ ದರ ಹೆಚ್ಚಳಕ್ಕೆ ವಿವಿಧ ಹಾಲು ಒಕ್ಕೂಟಗಳಿಂದ ಕೆಎಂಎಫ್ ಮೇಲೆ ತೀವ್ರ ಒತ್ತಡವಿತ್ತು. ಹೀಗಾಗಿ ಹಲವು ತಿಂಗಳ ಹಿಂದೆಯೇ ಹಾಲಿನ ದರ ಪರಿಷ್ಕರಣೆಗೆ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿತ್ತು. ಸರ್ಕಾರ ಆಸಕ್ತಿ ತೋರದ ಹಿನ್ನೆಲೆಯಲ್ಲಿ ನ.14 ರಂದು ಹಾಲು ಹಾಗೂ ಮೊಸರಿನ ದರವನ್ನು ಲೀಟರ್‌ಗೆ 3 ರು.ಗಳಂತೆ ಹೆಚ್ಚಳ ಮಾಡಿ ಆದೇಶಿಸಿತ್ತು. ಮರು ದಿನದಿಂದಲೇ ಜಾರಿಯಾಗಬೇಕಿದ್ದ ಪರಿಷ್ಕೃತ ದರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ನೀಡಿ ನ.20 ರ ಬಳಿಕ ಸಭೆ ನಡೆಸಿ ನಿರ್ಧರಿಸುವುದಾಗಿ ಪ್ರಕಟಿಸಿದ್ದರು. ಅದರಂತೆ ಸೋಮವಾರ ಸಂಜೆ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಬೊಮ್ಮಾಯಿ ಅವರೇ ಪರಿಷ್ಕೃತ ದರ ಘೋಷಿಸುವ ಸಾಧ್ಯತೆಯಿದೆ.
Nandini Milk Price Hike: ಹಾಲಿನ ದರ ಏರಿಕೆಗೆ ಬ್ರೇಕ್, ಸಿಎಂ ಸೂಚನೆ ಬಳಿಕ ಆದೇಶ ವಾಪಸ್!
ಆದರೆ, ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಬೊಮ್ಮಾಯಿ ಅವರು ಆದಷ್ಟುಕಡಿಮೆ ಪ್ರಮಾಣದಲ್ಲಿ ದರ ಏರಿಕೆಗೆ ಕೆಎಂಎಫ್ ಮನವೊಲಿಸುವ ಪ್ರಯತ್ನ ಮಾಡುವ ಸಾಧ್ಯತೆಯಿದೆ. ಹೀಗಾಗಿ ಲೀಟರ್‌ಗೆ ತಲಾ 2 ರು.ಗಳಂತೆ ಹೆಚ್ಚಳ ಮಾಡಬಹುದು. ಹೆಚ್ಚಳವಾದ ಅಷ್ಟೂಪ್ರಮಾಣದ ಹಣವನ್ನು ರೈತರಿಗೆ ಪ್ರೋತ್ಸಾಹಧನದ ರೂಪದಲ್ಲಿ ವರ್ಗಾಯಿಸಬಹುದು ಎಂದು ಮೂಲಗಳು ತಿಳಿಸಿವೆ.
ನ.14ರಂದು ಕೆಎಂಎಫ್ ಹೊರಡಿಸಿದ್ದ ದರ ಪರಿಷ್ಕರಣೆ ಆದೇಶದಲ್ಲಿ ಟೋನ್‌್ಡ ಹಾಲಿನ ದರ 37 ರು.ಗಳಿಂದ 40 ರು., ಸ್ಪೆಷಲ್ ಹಾಲು 43 ರು. ಗಳಿಂದ 46ಕ್ಕೆ, ಶುಭಂ ಹಾಲು 43 ರು.ಗಳಿಂದ 46ಕ್ಕೆ, ಹೋಮೋಜಿನೈಸ್ಡ್ ಸ್ಟಾಂಡರ್ಡೈಸ್ಡ್ ಹಾಲು 44 ರು.ಗಳಿಂದ 47ಕ್ಕೆ, ಸಮೃದ್ಧಿ ಹಾಲಿನ ದರ 48 ರು.ಗಳಿಂದ 51 ರು., ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50 ರು.ಗಳಿಂದ 53 ರು.ಗಳಿಗೆ ಏರಿಕೆ ಮಾಡಲಾಗಿತ್ತು. ಇನ್ನು ಡಬಲ್ ಟೋನ್‌್ಡ ಹಾಲು 36 ರು.ಗಳಿಂದ 39, ಮೊಸರಿನ ಬೆಲೆ 45 ರು.ಗಳಿಂದ 48 ರು.ಗೆ ಏರಿಕೆ ಮಾಡಲಾಗಿತ್ತು. ಕೆಎಂಎಫ್ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರೆ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ