ಸೂರ್ಯ, ಚಂದ್ರ ಇರುವವರೆಗೆ ಕನ್ನಡಕ್ಕೆ ಆಪತ್ತಿಲ್ಲ; ಸಿಎಂ ಬೊಮ್ಮಾಯಿ

By Govindaraj S  |  First Published Nov 18, 2022, 6:38 AM IST

ಸಕಾರಾತ್ಮಕ ಚಿಂತನೆಯೊಂದಿಗೆ ಕನ್ನಡ ಭಾಷಾ ವಿಚಾರ ಕೊಂಡೊಯ್ಯಬೇಕಿದ್ದು, ಕನ್ನಡ ವಿಶ್ವದಲ್ಲಿ ಅತ್ಯಂತ ಗೌರವಯುತವಾಗಿ ಕಾಣುವ ಭಾಷೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಬೆಂಗಳೂರು (ನ.18): ಸಕಾರಾತ್ಮಕ ಚಿಂತನೆಯೊಂದಿಗೆ ಕನ್ನಡ ಭಾಷಾ ವಿಚಾರ ಕೊಂಡೊಯ್ಯಬೇಕಿದ್ದು, ಕನ್ನಡ ವಿಶ್ವದಲ್ಲಿ ಅತ್ಯಂತ ಗೌರವಯುತವಾಗಿ ಕಾಣುವ ಭಾಷೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ’ಕನ್ನಡ ತಾಯಿ ಭುವನೇಶ್ವರಿ’ಯ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು. ಕನ್ನಡ ಜೀವಂತ ಭಾಷೆ. ಕೇವಲ ಕನ್ನಡಕ್ಕೆ ಆಪತ್ತಿದೆ ಎಂಬ ಭಾವನೆ ಬದಲು ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳಬೇಕು. 

ಸೂರ್ಯ ಚಂದ್ರ ಇರುವವರೆಗೆ ಕನ್ನಡಕ್ಕೆ ಆಪತ್ತು ಬರುವುದಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆ ಆಗುವಂತೆ ಮಾಡಬೇಕಿದೆ. ಕನ್ನಡನಾಡನ್ನು ಒಂದುಗೂಡಿಸುವಲ್ಲಿ ದುಡಿದು ಅನಾಮಧೇಯರಾಗಿ ಉಳಿದಿರುವ ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡರು ಸೇರಿ ಇತರರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಗಾಂಧಿ, ಬಸವ, ಬುದ್ಧ ಸೇರಿ ಮಹನೀಯರ ಪುತ್ಥಳಿಯನ್ನು ಕೇವಲ ಪುತ್ಥಳಿಯಾಗಿ ನೋಡದೆ ಅವರನ್ನು ಜೀವಂತವಾಗಿ ಕಂಡು ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

Tap to resize

Latest Videos

Bengaluru Tech Summit: ಬಡತನ ವಿರುದ್ಧ ತಂತ್ರಜ್ಞಾನದ ಅಸ್ತ್ರ: ಪ್ರಧಾನಿ ಮೋದಿ

ಕನ್ನಡ ನಿಘಂಟುಕಾರ ಕಿಟ್ಟೆಲ್ ಮರಿಮೊಮ್ಮಗಳು ಅಲ್ಮತ್‌ ಕಿಟ್ಟೆಲ್‌ ಮಾತನಾಡಿ, ಕಿಟ್ಟೆಲ್‌ ಅವರು ಜರ್ಮನಿಯಿಂದ ಇಲ್ಲಿಗೆ ಬಂದು 40 ವರ್ಷ ಇಲ್ಲಿದ್ದರು. ಕನ್ನಡವನ್ನು ಹೃದಯಕ್ಕೆ ಹತ್ತಿರವಾಗಿ ಬಳಸಿದರು. ಅವರ ಕನ್ನಡ ಕಾರ್ಯದ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದರು. ‘ತರಂಗ’ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್‌.ಪೈ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ ಇದ್ದರು.

28ರಿಂದ ಕನ್ನಡ ಜ್ಯೋತಿ ರಥ: ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, 2023ರ ಹಾವೇರಿ ಜ.6, 7, 8ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನ.28ರಂದು ಉತ್ತರ ಕನ್ನಡ ಸಿದ್ದಾಪುರದ ಭುವನಗಿರಿ ಭುವನೇಶ್ವರಿ ದೇವಾಲಯದಿಂದ ಕನ್ನಡ ಜ್ಯೋತಿಗೆ ಚಾಲನೆ ನೀಡಲಾಗುವುದು. ಜ್ಯೋತಿ ಹೊತ್ತ ಈ ರಥವು ರಾಜ್ಯಾದ್ಯಂತ ಸಂಚರಿಸಿ ಹಾವೇರಿಗೆ ಆಗಮಿಸಲಿದೆ. ಇದೇ ಜ್ಯೋತಿಯಿಂದ ಜ.6ರಂದು ಸಮ್ಮೇಳನದ ಉದ್ಘಾಟನಾ ದೀಪ ಬೆಳಗಲಿದ್ದೇವೆ ಎಂದರು.

ಕನ್ನಡ ವಿಧೇಯಕದ ಲೋಪದೋಷವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಮಟ್ಟದ ‘ಅಧಿಕೃತ ಭಾಷಾ ಅನುಷ್ಠಾನ ಕಾರ್ಯ ವ್ಯವಸ್ಥೆ’ ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಕಸಾಪ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿಗಳು ವಿಧೇಯಕದಲ್ಲಿ ಕಸಾಪ ನೀಡಿರುವ ಶಿಫಾರಸು ಸೇರ್ಪಡೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ 6 ಹೊಸ ಟೆಕ್‌ ಸಿಟಿ ನಿರ್ಮಾಣ: ಸಿಎಂ ಬೊಮ್ಮಾಯಿ

ಭುವನೇಶ್ವರಿ ದೇವಿ ಪುತ್ಥಳಿ: ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಸ್ಥಾಪಿತವಾದ ಭುವನೇಶ್ವರಿಯ ಪುತ್ಥಳಿ 6.25 ಅಡಿ ಎತ್ತರವಿದೆ. ಪ್ರಭಾವಳಿ, ಚತುರ್ಭುಜ, ಹೊಂದಿ ಪದ್ಮಪೀಠದಲ್ಲಿ ಕುಳಿತಿದ್ದಾಳೆ. ಪಾಶಾಂಕುಶ, ಅಭಯವರದ ಮುದ್ರೆಯುಳ್ಳ ಕನ್ನಡ ಧ್ವಜವನ್ನು ಕೈಯಲ್ಲಿ ಹಿಡಿದಿದ್ದು, ಕನ್ನಡಿಗರ ಅಸ್ಮಿತೆಯ ಮೂರ್ತರೂಪದಂತಿದೆ. ಸ್ತಪತಿ ಕ್ರಿಯೇಶನ್‌ನ ಕಲಾನಿರ್ದೇಶಕ ಎನ್‌.ಶಿವದತ್ತ ನಿರ್ಮಿಸಿದ್ದಾರೆ.

click me!