ಇಂದು ಸಿಎಂ ಜನ್ಮದಿನ: ಸಮಚಿತ್ತದ ಪ್ರಜ್ಞಾವಂತ ಆಡಳಿತಗಾರ ಬೊಮ್ಮಾಯಿ, ಸುಧಾಕರ್‌

By Kannadaprabha NewsFirst Published Jan 28, 2023, 9:28 AM IST
Highlights

ಬೊಮ್ಮಾಯಿಯವರು ಸಿಎಂ ಆದ ಕೂಡಲೇ ಮೊದಲು ಮಾಡಿದ್ದು, ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯ ಘೋಷಣೆ. ಬಳಿಕ ಅಶಕ್ತರು, ವೃದ್ಧರಿಗೆ ಪಿಂಚಣಿ ಹೆಚ್ಚಳದ ಘೋಷಣೆ. ನಂತರ, ಅನವಶ್ಯಕವಾದ ಪೊಲೀಸ್‌ ಗೌರವ ವಂದನೆ ಸ್ವೀಕಾರ ಸ್ಥಗಿತ, ಜೀರೋ ಟ್ರಾಫಿಕ್‌ ಸ್ಥಗಿತ, ನಮ್ಮ ಕ್ಲಿನಿಕ್‌, ಅಮೃತ ಯೋಜನೆಗಳು, ಹೀಗೆ ಮೊದಲಾದ ಸೂಕ್ಷ್ಮ ಕ್ರಮ, ಕಾರ್ಯಕ್ರಮಗಳನ್ನು ಕೈಗೊಂಡು ತಮ್ಮ ‘ಕಾಮನ್‌ ಮ್ಯಾನ್‌’ ದೃಷ್ಟಿಯನ್ನು ತೋರಿದರು. 

ಒಬ್ಬ ಯಶಸ್ವಿ ರಾಜಕಾರಿಣಿಗೆ ಚರಿತ್ರೆಯ ಅರಿವಿರಬೇಕು, ಅರ್ಥಶಾಸ್ತ್ರದ ಜ್ಞಾನವಿರಬೇಕು, ಕಲೆಯ ಬಗ್ಗೆ ಅಭಿರುಚಿ ಇರಬೇಕು, ನಾಡಿನ ಸಂಸ್ಕೃತಿ ಪರಂಪರೆಯ ಬಗ್ಗೆ ಗೌರವ ಅಭಿಮಾನವಿರಬೇಕು, ಅಧ್ಯಾತ್ಮದ ಅವಗಾಹನೆ ಇರಬೇಕು. ಆಗ ಮಾತ್ರ ವರ್ತಮಾನದ ಆಗುಹೋಗುಗಳನ್ನು ಇತಿಹಾಸದ ಬೆಳಕಿನಲ್ಲಿ, ಭವಿಷ್ಯದ ದೃಷ್ಟಿಯಲ್ಲಿ ಅವಲೋಕಿಸಿ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಾಧ್ಯ. ಇಂತಹ ಅಪರೂಪದ ರಾಜಕಾರಿಣಿಗಳ ಸಾಲಿನಲ್ಲಿ ನಿಲ್ಲುವ ನಮ್ಮ ರಾಜ್ಯದ ಮುಖಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 63ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಸಮಚಿತ್ತದ ಸ್ವಭಾವ, ಪ್ರಜ್ಞಾವಂತ ಆಡಳಿತ ಹಾಗೂ ಸಂವೇದನಾಶೀಲ ನಾಯಕತ್ವದ ಮೂಲಕ ರಾಜ್ಯ ರಾಜಕಾರಣಕ್ಕೆ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಬೊಮ್ಮಾಯಿಯವರು ಸಿಎಂ ಆದ ಕೂಡಲೇ ಮೊದಲು ಮಾಡಿದ್ದು, ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯ ಘೋಷಣೆ. ಬಳಿಕ ಅಶಕ್ತರು, ವೃದ್ಧರಿಗೆ ಪಿಂಚಣಿ ಹೆಚ್ಚಳದ ಘೋಷಣೆ. ನಂತರ, ಅನವಶ್ಯಕವಾದ ಪೊಲೀಸ್‌ ಗೌರವ ವಂದನೆ ಸ್ವೀಕಾರ ಸ್ಥಗಿತ, ಜೀರೋ ಟ್ರಾಫಿಕ್‌ ಸ್ಥಗಿತ, ನಮ್ಮ ಕ್ಲಿನಿಕ್‌, ಅಮೃತ ಯೋಜನೆಗಳು, ಹೀಗೆ ಮೊದಲಾದ ಸೂಕ್ಷ್ಮ ಕ್ರಮ, ಕಾರ್ಯಕ್ರಮಗಳನ್ನು ಕೈಗೊಂಡು ತಮ್ಮ ‘ಕಾಮನ್‌ ಮ್ಯಾನ್‌’ ದೃಷ್ಟಿಯನ್ನು ತೋರಿದರು. ಆಡಳಿತದ ಅತ್ಯಂತ ಮೇಲಿನ ಹಂತದಲ್ಲಿ ಇದ್ದರೂ, ಹದ್ದಿನಂತೆ ಸೂಕ್ಷ್ಮವಾದ ಕಣ್ಣುಗಳಿಂದ ತಳಮಟ್ಟದ ಜ್ವಲಂತ ಸಮಸ್ಯೆಗಳನ್ನು ಅವರು ಗ್ರಹಿಸಬಲ್ಲರು. ಈ ತಳಸ್ಪರ್ಶಿ ಚಿಂತನಶೀಲತೆ ಈಗಿನದ್ದಲ್ಲ. ಇದಕ್ಕೆ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರ ಕಾಲದಲ್ಲೇ ಭದ್ರ ಬುನಾದಿ ನಿರ್ಮಾಣವಾಗಿತ್ತು!

ಬಜೆಟ್‌, ಚುನಾವಣೆ ಹಿನ್ನೆಲೆ: ವರ್ಗಾವಣೆ ಸ್ಥಗಿತ, ಸಿಎಂ ಬೊಮ್ಮಾಯಿ

ಚಿಕ್ಕಂದಿನಿಂದಲೇ ರಾಜಕೀಯ ಅರಿವು

ತಂದೆ ಎಸ್‌.ಆರ್‌.ಬೊಮ್ಮಾಯಿಯವರು ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳವಳಿ, ಗೋಕಾಕ ಚಳವಳಿಯಲ್ಲಿ ಮುಂಚೂಣಿಯ ನಾಯಕರಾಗಿ ಬೆಳೆಯುತ್ತಿದ್ದರೆ, ಆ ಎಲ್ಲಾ ಚಳವಳಿಗಳಿಗೆ ಸಾಕ್ಷಿಯಾಗಿ ಜನಸೇವೆಯ ಒಳನೋಟವನ್ನು ಸಿಎಂ ಬೊಮ್ಮಾಯಿ ಚಿಕ್ಕಂದಿನಿಂದಲೇ ಮೌನವಾಗಿ ಅರಿತು ಮನದಟ್ಟು ಮಾಡಿಕೊಳ್ಳುತ್ತಿದ್ದರು.

ಕಾಂಗ್ರೆಸ್‌ನ ದುರಾಡಳಿತ ಮಿತಿ ಮೀರಿದ್ದ ಅಂದಿನ ಕಾಲದಲ್ಲಿ, ಕಾಂಗ್ರೆಸ್ಸೇತರ ಸರ್ಕಾರಿ ವ್ಯವಸ್ಥೆಯ ಕಡೆ ಜನರು ಒಲವು ತೋರುತ್ತಿದ್ದರು ಮತ್ತು ಕಾಂಗ್ರೆಸ್‌ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾಗಿತ್ತು. ಮೊರಾರ್ಜಿ ದೇಸಾಯಿ, ಜಯಪ್ರಕಾಶ್‌ ನಾರಾಯಣ್‌, ಎಸ್‌.ಕೆ.ಡೇ ಮೊದಲಾದ ಧೀಮಂತ ನಾಯಕರ ಹೋರಾಟವನ್ನು ತಮ್ಮ ತಂದೆಯಿಂದಾಗಿ ಕಣ್ಣಾರೆ ಕಂಡು ಬೆಳೆದ ಬೊಮ್ಮಾಯಿ, ನಮ್ಮ ದೇಶ ಹಾಗೂ ರಾಜ್ಯದ ಸಮಸ್ಯೆಗಳು, ವ್ಯವಸ್ಥೆಯಲ್ಲಿನ ನ್ಯೂನತೆಗಳು ಮತ್ತು ಅಧಿಕಾರ ರಾಜಕಾರಣದ ಸುತ್ತ ನಡೆಯುವ ಪಲ್ಲಟಗಳ ಬಗ್ಗೆ ಚೆನ್ನಾಗಿ ಅರಿತಿದ್ದರು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದರೂ, ಬೊಮ್ಮಾಯಿಯವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತತ್ವಜ್ಞಾನ ವಿಷಯಗಳಲ್ಲಿ ಹೆಚ್ಚು ಆಸಕ್ತಿ. ಬಿಡುವಿದ್ದಾಗಲೆಲ್ಲಾ ಪುಸ್ತಕ ಓದುವ ಅವರು, ಆಧ್ಯಾತ್ಮಿಕ ನೆಲೆಯಲ್ಲೂ ಚಿಂತಿಸುತ್ತಾರೆ. ಅರ್ಥಶಾಸ್ತ್ರದಲ್ಲಿ ಅಧ್ಯಾತ್ಮವನ್ನು ಪಡೆಯಬೇಕು, ಅಧ್ಯಾತ್ಮದಲ್ಲಿ ಅರ್ಥಶಾಸ್ತ್ರವನ್ನು ಗಳಿಸಬೇಕು ಎಂಬುದು ಅವರ ಸಿದ್ಧಾಂತ.

ವ್ಯಾಸಂಗದ ನಂತರ ಬೊಮ್ಮಾಯಿಯವರು ಪುಣೆಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ದಾಗ, ಕೈಗಾರಿಕಾ ಮಂತ್ರಿಯಾಗಿದ್ದ ಅವರ ತಂದೆ, ಉದ್ಯಮಿಯಾಗುವ ಮುನ್ನ ನೌಕರನಾಗಿ ಅನುಭವ ಪಡೆ ಎಂದು ಹೇಳಿದ್ದರು. ಹಾಗೆ ಕಂಪನಿಯಲ್ಲಿ ಪಡೆದ ಅನುಭವ ಅವರನ್ನು ಮುಂದೆ ಉದ್ಯಮಿಯಾಗಿ ಬೆಳೆಸಿತು. ಈ ಒಟ್ಟು ಅನುಭವ, ಅವರು ಉದ್ಯಮಿಗಳ ಜೊತೆ ಮಾತುಕತೆ ನಡೆಸಿ ರಾಜ್ಯಕ್ಕೆ ಹೆಚ್ಚು ಹೂಡಿಕೆ ತರಲು ಕಾರಣವಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಈಗ ಮುಂಚೂಣಿಗೆ ಬಂದಿದೆ.

ನೆತ್ತರಿನ ಪತ್ರ ಬರೆದ ಧೀಮಂತ!

ತಂದೆ ಹಾಕಿಕೊಟ್ಟಮಾರ್ಗದರ್ಶನದಂತೆ ನಡೆದ ಬೊಮ್ಮಾಯಿ, ಜನತಾ ಪರಿವಾರದಲ್ಲಿ ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾದರು. ಜೆಡಿಯುನಿಂದ ಪರಿಷತ್‌ ಸದಸ್ಯರಾಗಿದ್ದಾಗ ಆಡಳಿತಾತ್ಮಕ ವಿಚಾರಗಳಲ್ಲಿ ಹೊಂದಿದ್ದ ಜ್ಞಾನವನ್ನು ನೋಡಿ ಬಿ.ಎಸ್‌.ಯಡಿಯೂರಪ್ಪ ಕೂಡ ಮೆಚ್ಚಿಕೊಂಡಿದ್ದರು. ಬಳಿಕ 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ ಆಯ್ಕೆಯಾದರು. ಅಷ್ಟೇ ಅಲ್ಲ ಮೊದಲ ಬಾರಿಗೆ ಯಡಿಯೂರಪ್ಪನವರ ಸಂಪುಟ ಪ್ರವೇಶಿಸಿದರು.

ಸ್ವತಃ ಮೆಕ್ಯಾನಿಕಲ್‌ ಎಂಜಿನಿಯರ್‌ ಆದ ಬೊಮ್ಮಾಯಿ, ಕಳಸಾ ಬಂಡೂರಿ ನಾಲಾ ಜೋಡಣೆ-ಮಹದಾಯಿ ಯೋಜನೆ ಬಗ್ಗೆ ಸ್ಪಷ್ಟನಿಲುವು ಹೊಂದಿದ್ದರು. ಯೋಜನೆಯ ಸಿದ್ಧತೆ ಮತ್ತು ಜಾರಿಗೆ ಬೇಕಾದ ಎಲ್ಲಾ ತಾಂತ್ರಿಕ ಅಂಶಗಳನ್ನು ಪಿನ್‌ ಟು ಪಿನ್‌ ಆಗಿ ರೂಪಿಸಿದ್ದು ಇವರೇ. ಯೋಜನೆ ಜಾರಿಗೆ ಆಗ್ರಹಿಸಿ ಗೋವಾದ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದರು. 2003ರ ಜುಲೈನಲ್ಲಿ 232 ಕಿ.ಮೀ. ಪಾದಯಾತ್ರೆ ಮಾಡಿ ಜಾಗೃತಿಯನ್ನೂ ಮೂಡಿಸಿದ್ದರು. ಅಲ್ಲದೆ, ರಕ್ತದಲ್ಲಿ ಮನವಿ ಪತ್ರ ಬರೆದು ಅದಮ್ಯ ಹಟ ಹಾಗೂ ಬದ್ಧತೆ ತೋರಿಸಿದ್ದರು!

ಕಳಸಾ-ಬಂಡೂರಿ ಯೋಜನೆಯ ಹೋರಾಟಗಾರರೂ ಅವರೇ, ಮತ್ತು ಈಗ ಅನುಷ್ಠಾನಶೀಲರೂ ಅವರೇ ಎಂಬುದು ವಿಶೇಷ ಸಂಗತಿ. ಕರ್ನಾಟಕದಂತಹ ಪ್ರಗತಿಶೀಲ ರಾಜ್ಯಕ್ಕೆ ಏನು ಬೇಕು ಹಾಗೂ ಜನರಿಗೆ ಏನು ಬೇಕು ಎಂಬುದರ ಅರಿವಿರುವ ಒಬ್ಬ ಪ್ರಜ್ಞಾವಂತ ನಾಯಕ ನಮ್ಮ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವುದು ನಮ್ಮ ಅದೃಷ್ಟಎಂದರೆ ಅದು ಉತ್ಪ್ರೇಕ್ಷೆಯಲ್ಲ.

ಟೀಕೆಗೆ ತಮ್ಮ ನಡೆಗಳಲ್ಲೇ ಉತ್ತರ

ಬಸವರಾಜ ಬೊಮ್ಮಾಯಿ ತಮ್ಮ ರಾಜಕೀಯದ ಏಳು-ಬೀಳಿನ ಹಾದಿಯಲ್ಲಿ ಅನೇಕ ಟೀಕೆಗಳಿಗೊಳಗಾಗಿದ್ದಾರೆ. ಟೀಕೆಗಳು ಕೇಳಿಬಂದಾಗ ಆ ಸಮಸ್ಯೆಯನ್ನು ನಿವಾರಿಸಿ ನಡೆಗಳಲ್ಲೇ ತಮ್ಮ ಉತ್ತರ ನೀಡಿದ್ದಾರೆ. ಟೀಕಿಸಿದ ಕೂಡಲೇ ಸಿಡಿದು ಪ್ರತ್ಯುತ್ತರ ನೀಡುವ ಅತಿಯಾದ ಹುಮ್ಮಸ್ಸು ಬೊಮ್ಮಾಯಿಯವರದಲ್ಲ. ಟೀಕೆಗೆ ಕಾಯಕದಿಂದಲೇ ಉತ್ತರ ನೀಡಿ ಹಣತೆಯಂತೆ ಬೆಳಗುವ ವ್ಯಕ್ತಿತ್ವ ಅವರದ್ದು. ಅವರ ಒಡನಾಟದಲ್ಲಿ ನಾನು ಕೂಡ ಅವರಿಂದ ಬಹಳಷ್ಟುಕಲಿತಿದ್ದೇನೆ.
ಹಿಂದೆ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದಾಗ, ಅವರ ಮಾತಿನ ಚಾಕಚಕ್ಯತೆಯನ್ನು ಕಂಡು, ಅವರಲ್ಲಿ ಬೆಳೆಯುತ್ತಿರುವ ನಾಯಕನನ್ನು ಗುರುತಿಸಿದವರಿದ್ದಾರೆ. ಪದ್ಮವಿಭೂಷಣ, ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ, ಎಸ್‌.ಆರ್‌.ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದರು. ಆಗ ಎದುರಿಗೆ ಬಸವರಾಜ ಬೊಮ್ಮಾಯಿ ಕಂಡಾಗ, ಈ ಯುವಕ ಅತ್ಯುತ್ತಮ ಸಂಸದೀಯ ಪಟುವಾಗುವ ಲಕ್ಷಣ ಹೊಂದಿದ್ದಾನೆ ಎಂದು ಶಹಬ್ಬಾಸ್‌ಗಿರಿ ನೀಡಿದ್ದರಂತೆ!

ರಾಜ್ಯದ ಜಲ-ನೆಲದ ವಿಚಾರ ಬಂದಾಗ ಸದನದ ಹೊರಗೆ ಮತ್ತು ಒಳಗೆ ಛಲ ಬಿಡದ ಹೋರಾಟ ನಡೆಸುವಷ್ಟುಜ್ಞಾನ, ಶಕ್ತಿ ಬೊಮ್ಮಾಯಿ ಅವರಿಗಿದೆ. ನೀರಾವರಿ ವಿಷಯಗಳಲ್ಲಿ ಆಳ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ಭಾರತದಲ್ಲೇ ಮೊದಲ ಶೇ.100ರಷ್ಟುಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಪಡೆದಿದ್ದಾರೆ. ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಮೇಕೆದಾಟು ಯೋಜನೆ ಇವರ ದೂರದೃಷ್ಟಿಯ ಕೊಡುಗೆ ಎನ್ನುವುದರಲ್ಲಿ ಸಂಶಯವಿಲ್ಲ.

ತಾರತಮ್ಯ ರಹಿತ, ಅಭಿವೃದ್ಧಿಪರ

ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತ, ವಿರೋಧ ಪಕ್ಷದವರಿಗೇಕೆ ಮಣೆ ಎಂಬ ತಾರತಮ್ಯ ಬೊಮ್ಮಾಯಿಯವರ ಬಳಿ ಸುಳಿಯುವುದಿಲ್ಲ. ಜನರಿಗೆ ಅನುಕೂಲವಾಗುವ ವಿಚಾರ ಬಂದರೆ ಅವರ ಕಣ್ಣ ಮುಂದೆ ಪಕ್ಷ, ಜಾತಿ, ಧರ್ಮ ಎಂಬ ಭೇದಗಳು ಕಾಣುವುದಿಲ್ಲ. ಹಿಂದಿನಿಂದಲೂ ತಾವು ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಮಾತನಾಡುತ್ತಾರೆಯೇ ಹೊರತು, ಕ್ಷುಲ್ಲಕ ರಾಜಕೀಯವನ್ನು ಎಂದೂ ಮಾಡಿದ ಇತಿಹಾಸವಿಲ್ಲ. ಜಾತ್ಯತೀತ ಮನೋಭಾವ ಮೈಗೂಡಿಸಿಕೊಳ್ಳುವುದರ ಜತೆಗೆ ಸಾಮರಸ್ಯದ, ಸೌಜನ್ಯದ ಬದುಕಿನ ಮಹತ್ವ ಅರಿತು ನಡೆಯುವ ಅವರ ಗುಣವನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರಾಡುವ ಮಾತುಗಳಲ್ಲೇ ಕಾಣಬಹುದು.

ಅನೇಕ ಬಾರಿ ಅವರು ಜನರೆಡೆಗಿನ ತುಡಿತ ತಡೆಯಲಾರದೆ ಜನರ ಮುಂದೆಯೇ ಕಣ್ಣೀರು ಹಾಕಿದ ಉದಾಹರಣೆಯೂ ಇದೆ. ಇದು ಅವರಲ್ಲಿರುವ ಹೆಂಗರುಳಿನ ನಿದರ್ಶನ. ಅದರಲ್ಲೂ ಕರ್ನಾಟಕ ರತ್ನ, ಅಪ್ಪು ಪುನೀತ್‌ ರಾಜ್‌ಕುಮಾರ್‌ ಮೃತರಾದಾಗ, ಅವರ ಹಣೆಗೆ ಮುತ್ತಿಟ್ಟು ಬೀಳ್ಕೊಟ್ಟದೃಶ್ಯ ನಾಡಿನ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯಾಗಿಬಿಟ್ಟಿದೆ.

ಸಿಎಂ ಆಗುವುದಕ್ಕೂ ಮೊದಲು ಗೃಹ ಸಚಿವರಾಗಿದ್ದ ಬೊಮ್ಮಾಯಿಯವರು, ಪೊಲೀಸರಿಗೆ ನೆರವಾಗುವ ಔರಾದ್ಕರ್‌ ವರದಿ ಜಾರಿಗೊಳಿಸಲು ಮಹತ್ವದ ಪಾತ್ರ ವಹಿಸಿದ್ದರು. ಕೋವಿಡ್‌ ವೇಳೆ ಅನಿವಾರ್ಯವಾಗಿದ್ದ ಬಂದೋಬಸ್ತನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಭೇಷ್‌ ಅನಿಸಿಕೊಂಡಿದ್ದರು. ಮಾದಕ ವಸ್ತುಗಳಿಂದ ಯುವಜನರ ಬದುಕು ಕತ್ತಲೆಗೆ ಹೋಗುವುದನ್ನು ಮನಗಂಡು ಕಠಿಣ ಕ್ರಮಗಳನ್ನು ಕೈಗೊಂಡರು.

ದೊಡ್ಡ ಸ್ಥಾನಕ್ಕೇರಿದವರು ಸಣ್ಣ ಮಾತನಾಡಬಾರದು: ಸಿದ್ದರಾಮಯ್ಯ ಹೇಳಿಕೆಗೆ ಸಂಸ್ಕಾರಯುತ ಪೆಟ್ಟು ನೀಡಿದ ಸಿಎಂ

ಈಗ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಗುರಿಯೊಂದಿಗೆ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ರಾಜ್ಯದ ನೆಚ್ಚಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಬಲಪಡಿಸೋಣ. ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಿ ರಾಜ್ಯಕ್ಕೆ ಇನ್ನಷ್ಟುಸೇವೆ ಸಲ್ಲಿಸುವ ಶಕ್ತಿ ನೀಡಲಿ ಎಂದು ಮನಸಾರೆ ಹಾರೈಸೋಣ. ಮುಖ್ಯಮಂತ್ರಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದರೂ, ಬೊಮ್ಮಾಯಿಯವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತತ್ವಜ್ಞಾನ ವಿಷಯಗಳಲ್ಲಿ ಹೆಚ್ಚು ಆಸಕ್ತಿ. ಬಿಡುವಿದ್ದಾಗಲೆಲ್ಲಾ ಪುಸ್ತಕ ಓದುವ ಅವರು, ಆಧ್ಯಾತ್ಮಿಕ ನೆಲೆಯಲ್ಲೂ ಚಿಂತಿಸುತ್ತಾರೆ. ಅರ್ಥಶಾಸ್ತ್ರದಲ್ಲಿ ಅಧ್ಯಾತ್ಮ ಪಡೆಯಬೇಕು, ಅಧ್ಯಾತ್ಮದಲ್ಲಿ ಅರ್ಥಶಾಸ್ತ್ರ ಗಳಿಸಬೇಕು ಎಂಬುದು ಅವರ ಸಿದ್ಧಾಂತ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

click me!