Asianet Suvarna News Asianet Suvarna News

ದೊಡ್ಡ ಸ್ಥಾನಕ್ಕೇರಿದವರು ಸಣ್ಣ ಮಾತನಾಡಬಾರದು: ಸಿದ್ದರಾಮಯ್ಯ ಹೇಳಿಕೆಗೆ ಸಂಸ್ಕಾರಯುತ ಪೆಟ್ಟು ನೀಡಿದ ಸಿಎಂ

ದೊಡ್ಡ ಸ್ಥಾನಕ್ಕೆ ಏರಿದವರು ಸಣ್ಣತನದ ಮಾತುಗಳನ್ನಾಡಬಾರದು. ಜನರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಹೇಳಿಕೆ ನೀಡಬಾರದು. ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿದರು.

CM Basavaraj Bommai Slams On Siddaramaiah At Mysuru gvd
Author
First Published Jan 23, 2023, 11:28 AM IST

ಮೈಸೂರು (ಜ.23): ದೊಡ್ಡ ಸ್ಥಾನಕ್ಕೆ ಏರಿದವರು ಸಣ್ಣತನದ ಮಾತುಗಳನ್ನಾಡಬಾರದು. ಜನರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಹೇಳಿಕೆ ನೀಡಬಾರದು. ನಾವಾಡುವ ಮಾತು ಮುಂದಿನ ಜನಾಂಗಕ್ಕೆ ಸಂಸ್ಕಾರ ಹೇಳಿಕೊಡುವಂತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಜನಾ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

ನಾನು ಸುತ್ತೂರಿಗೆ ಬಂದಾಗ ಮಾಜಿ ಸಿಎಂ ಒಬ್ಬರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಲು ನಾನು ಅವರ ಮಟ್ಟಕ್ಕೆ ಇಳಿಯಬೇಕಾಗುತ್ತದೆ. ಸಣ್ಣವರು ದೊಡ್ಡವರಾದ ಅನೇಕ ಉದಾಹರಣೆ ನಮ್ಮ ಮುಂದಿದೆ. ಕರ್ನಾಟಕದ ಸಂಸ್ಕೃತಿ ಅಥವಾ ಕರ್ನಾಟಕದ ರಾಜಕೀಯ ಸಂಸ್ಕೃತಿ ಅವರ ಹೇಳಿಕೆಯಲ್ಲಿ ಇಲ್ಲ ಎಂದರು.  ಭಾರತೀಯರು ರಾಮ ಇದ್ದಾನೆ ಎಂದು ನಂಬಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ, ಇದ್ದಾನೆ ಎಂದರೆ ಇದ್ದಾನೆ, ಇಲ್ಲ ಎಂದರೆ ಇಲ್ಲ. ಅದನ್ನು ಬಿಟ್ಟು ಬೇರೆಯವರ ಭಾವನೆ ಮತ್ತು ನಂಬಿಕೆಯನ್ನು ಘಾಸಿಗೊಳಿಸುವಂತೆ ಕೆಟ್ಟದಾಗಿ ಮಾತನಾಡಬಾರದು.

ಇಂಗ್ಲಿಷ್‌ ತೀರ್ಪು ಕನ್ನಡಕ್ಕೆ ಅನುವಾದಿಸಿ: ಸಿಎಂ ಬೊಮ್ಮಾಯಿ

ನನ್ನ ಕಾರ್ಯ ಮತ್ತು ಸ್ಥಾನದ ಗೌರವ ಉಳಿಸಿಕೊಂಡು ಹೋಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯಾರನ್ನೊ ಮೆಚ್ಚಿಸಲು ಮಾತನಾಡದೆ ಪ್ರತಿ ಶಬ್ದ ಬಳಸುವಾಗಲೂ ಯೋಚಿಸಿ ಮಾತನಾಡಬೇಕು. ಯಾರನ್ನೂ ನೋಡಿಸದಂತೆ ನಡೆದುಕೊಳ್ಳಬೇಕು. ನಮ್ಮ ದೇಶಕ್ಕೆ ಮತ್ತು ಸಂಸ್ಕೃತಿಗೆ ನೂರಾರು, ಸಾವಿರಾರು ವರ್ಷದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು. ವಿರೋಧವನ್ನು ಸುಸಂಸ್ಕೃತವಾಗಿಯೂ ವಿರೋಧಿಸಬಹುದು. ಆದರೆ ನಮ್ಮ ಪರಂಪರೆಯನ್ನೇ ಪ್ರಶ್ನಿಸುವ, ಕೀಳಾಗಿ ಮಾತನಾಡುವುದು ಸರಿಯಲ್ಲ. 

ನಮ್ಮ ವಿಚಾರ ಹೇಳುವಾಗ ಮತ್ಯೊಬ್ಬರಿಗೆ ನೋವಾಗುತ್ತದೆ ಎಂಬ ವಿವೇಕ ಇಲ್ಲದಿದ್ದರೆ ಕಷ್ಟವಾಗುತ್ತದೆ. ಒಬ್ಬರ ಬಗ್ಗೆ ಕೀಳಾಗಿ ಮಾತನಾಡುವುದು ಯಾವ ಧರ್ಮ? ಯಾವ ವಿಚಾರ? ಯಾವುದು ನಿಮ್ಮ ಆದರ್ಶ? ಎಂದು ಅವರು ಪ್ರಶ್ನಿಸಿದರು. ಇತಿಹಾಸವನ್ನು ಗಮನಿಸಿದಾಗ ಯಾರನ್ನು ಬಿಟ್ಟಿಲ್ಲ. ಜೀಸಸನ್ನು ಶಿಲುಬೆಗೆ ಏರಿಸಿ ಮೊಳೆ ಹೊಡೆದರು, ಬಸವಣ್ಣನನ್ನು ಹೊಳೆಯಿಂದಾಚೆ ಓಡಿಸಿ ಕ್ರಾಂತಿ ಎಂದರು. ಆದರೆ ಇಂದಿಗೂ ನಾವು ಸ್ತುತಿಸುತ್ತಿರುವುದು ಬಸವಣ್ಣನ ತತ್ತವವನ್ನು ಅಲ್ಲವೇ? ಆತನ ವಿಚಾರಗಳಿಗೆ ಸೋಲಾಗಿಲ್ಲ. ಕನಕದಾಸರನ್ನು ಅವರ ಸಹೋದರರೇ ಸೋಲಿಸಿದರು. ಅರಮನೆ ಬಿಟ್ಟರು, ಸೋಲಿನಿಂದ ಹಲವು ಗೆಲವು ಕಂಡೆ, ನನ್ನನ್ನು ನಾನೇ ಗೆದ್ದುಕೊಂಡೆ ಎಂದು ಕನಕರು ಆಗಲೇ ಹೇಳಿದ್ದಾಗಿ ಅವರು ತಿಳಿಸಿದರು.

ನಮ್ಮ ಮಠಗಳು ಜಾತಿಯ ವಿಷ ಬೀಜವನ್ನು ದಾಸೋಹದಿಂದಲೂ, ಮತದ ವಿಷ ಬೀಜವನ್ನು ಜ್ಞಾನದಿಂದಲೂ ಹೋಗಲಾಡಿಸಿವೆ. ಸರ್ಕಾರದ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅನ್ನ, ಆಶ್ರಯ ನೀಡಿವೆ. ಸುತ್ತೂರು ಮಠ ಧರ್ಮ ಆಚರಣೆ ಮತ್ತು ಸಂಸ್ಕೃತಿಯ ಪ್ರತೀಕ. ಧಾರ್ಮಾಚರಣೆಯ ಜತೆ ಜನರ ಜೀವನ ಬೆರೆತಾಗ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತದೆ ಎಂದು ಅವರು ಹೇಳಿದರು. ತೇರು ಎಳೆಯುವದರಿಂದ ಸಮಾನತೆಯ ಭಾವ ಮೂಡಲಿದೆ. ಅಂತಹ ಒಂದು ಸದುದ್ದೇಶದಿಂದಲೇ ಹಿರಿಯರು ಜಾತ್ರೆ ಸಂಪ್ರದಾಯ ಹುಟ್ಟು ಹಾಕಿದರು. ದೊಡ್ಡ ತೇರು ನಿರ್ಮಾಣ ಮಾಡಿದರು. ತೇರು ಎಳೆಯವ ವೇಳೆ ಎಲ್ಲ ಜಾತಿ ಜನಾಂಗಗಳ ಸಮ್ಮಿಲನ ಆಗಲಿದೆ. ಇದರಿಂದ ಸಮಾನ ಭಾವ ಮೂಡಲಿದೆ ಎಂದು ಹೇಳಿದರು.

ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಜನರಿಗೆ ಗೊತ್ತಿಲ್ಲ. ಇಂದು ನಾಗರಿಕತೆ ಬೆಳವಣಿಗೆ ಆಗಿದೆ. ಆಸ್ತಿ ಅಂತಸ್ತು ಇದ್ದರೂ ನಾನು ಏನಾಗಿದ್ದೇನೆ ಎಂಬುದು ಅವರ ಸಂಸ್ಕೃತಿ ಮೇಲೆ ಅವಲಂಭಿಸಿರುತ್ತದೆ. ನಡೆ ನುಡಿಯಿಂದ ಮನುಷ್ಯ ದೊಡ್ಡವನಾಗಬೇಕು. ಆಸ್ತಿ ಅಂತಸ್ತಿನಿಂದ ದೊಡ್ಡ ನಾಯಕನಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು. ಜಾತ್ರೆ ಎಂಬುದು ಸಮ್ಮಿಲನ ಹಾಗೂ ಸುಸಂದರ್ಭದ ಕ್ಷಣ. ಯಾವುದೇ ಜಾತಿ, ಮತ ಬೇಧವಿಲ್ಲದೆ ನಡೆಯವ ಜಾತ್ರೆ ಭಕ್ತಿ ಭಾವ ಮಾತ್ರವಾಗಿರದೆ, ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ವಿಶೇಷವಾಗಿ ಸುತ್ತೂರು ಜಾತ್ರೆ ಒಂದು ಅರ್ಥಪೂರ್ಣ ಜಾತ್ರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾತನಾಡಿ, ಹಿಂದೆ ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣ ಇತ್ತು. ಹಿಂದೆ ಮೆಕಾಲೆ ಶಿಕ್ಷಣವನ್ನು ನಮ್ಮ ಮೇಲೆ ಹೇರಿದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಶ್ರೀಗಳಿಂದ ಬೆನ್ನುತಟ್ಟುವ ಕಾರ್ಯಕ್ರಮ ನಡೆದಿದೆ. ಶಿಕ್ಷಣ ಹಿಂದೆ ಮಾಡಿದ್ದ ವ್ಯವಸ್ಥೆ ಮತ್ತೆ ಬರಬೇಕು ಎಂದ ಅವರು ಮೌಲ್ಯಧಾರಿತ ಶಿಕ್ಷಣ ತರಬೇಕು ಯೋಗ, ಧಾರ್ಮಿಕ ವಿಚಾರ ಅನುಷ್ಠಾನ ಆಗಬೇಕು. ಆ ನಿಟ್ಟಿನಲ್ಲಿ ಮಠಮಾನ್ಯಗಳು ಚಿತ್ತ ಹರಿಸಬೇಕು ಎಂದರು.

ಕೃಷಿಗೆ ಔಟ್‌ಲುಕ್‌ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು: ಸಿಎಂ ಬೊಮ್ಮಾಯಿ

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಸುತ್ತೂರು ಮಠ ದೂರದೃಷ್ಟಿಯ ಸಂಕೇತ. ಸಮಾಜ ಮತ್ತು ಸಮುದಾಯದ ನಡುವಿನ ಅಂತರವನ್ನು ಗಟ್ಟಿಮಾಡುತ್ತಿದೆ. ವಿಶ್ವದ ಭೂಪಟದಲ್ಲಿ ತನ್ನ ಕಾರ್ಯವೈಖರಿ, ಧರ್ಮ ಸಂಸ್ಕಾರವನ್ನು ಪ್ರಚಾರ ಮಾಡುತ್ತಿದೆ. ಕಾಯಕ ಮತ್ತು ದಾಸೋಹಕ್ಕೆ ಹೆಸರಾಗಿದೆ. ಮಾತ್ರವಲ್ಲ, ಸುತ್ತೂರು ಮಠ, ಆದಿಚುಂಚನಗಿರಿ ಮಠ ಹಾಗೂ ಸಿದ್ದಗಂಗಾ ಮಠಗಳು ಅನ್ನ, ಆಶ್ರಯ ಹಾಗೂ ಜ್ಞಾನ ದಾಸೋಹದ ಮೂಲಕ ಭಾರತದಲ್ಲಿ ಇತಿಹಾಸ ಸೃಷ್ಟಿಸಿವೆ. ಜಾತ್ಯಾತೀತ ಭಾವನೆ ಉಳ್ಳ ಮಠಮಾನ್ಯಗಳು ಇಂದು ಬಡ, ಕಡುಬಡವರ ಆಶ್ರಯಕ್ಕೆ ಶ್ರೀಮಠ ದೊಡ್ಡ ಕೊಡುಗೆ ನೀಡಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸುತ್ತೂರಿನ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಲ್ಬುರ್ಗಿಯ ಸಮಾದಾನ ಆಶ್ರಮದ ಮೌನ ತಪಸ್ವಿ ಶ್ರೀ ಜಡೆಶಾಂತ ಮಲ್ಲಿಕಾರ್ಜುನಸ್ವಾಮೀಜಿ, ಅರೆತಿಪ್ಪೂರು ಜೈನಮಠದ ಶ್ರೀಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಭವಾನಿ ಪೀಠದ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಸಚಿವರಾದ ಆರ್‌. ಅಶೋಕ್‌, ಡಾ.ಕೆ. ಸುಧಾಕರ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ ಸಂತೋಷ್‌, ಶಾಸಕರಾದ ತನ್ವೀರ್‌ ಸೇಠ್‌, ಸಿ.ಎಸ್‌. ನಿರಂಜನಕುಮಾರ್‌, ಎಲ್‌. ನಾಗೇಂದ್ರ, ಎಂ. ಅಶ್ವಿನ್‌ಕುಮಾರ್‌, ಮೇಯರ್‌ ಶಿವಕುಮಾರ್‌, ವಿಧಾನ ಪರಿಷತ್‌ ಸದಸ್ಯ ತುಳಿಸಿ ಮುನಿರಾಜು, ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್‌ ಮೊದಲಾದವರು ಇದ್ದರು.

Follow Us:
Download App:
  • android
  • ios