ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

By Govindaraj SFirst Published Nov 20, 2022, 7:02 AM IST
Highlights

ರಾಜ್ಯ ಬಿಜೆಪಿ ಸರ್ಕಾರ ಮತದಾರರ ಪಟ್ಟಿಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ಚಿಲುಮೆ ಸಂಸ್ಥೆಗೆ ನೀಡಿಲ್ಲ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸದರಿ ಸಂಸ್ಥೆಗೆ ಕಾನೂನುಬಾಹಿರವಾಗಿ ಮತದಾರರ ಪರಿಷ್ಕರಣೆ ಮತ್ತು ಬಿಎಲ್‌ಒಗಳನ್ನು ಭರ್ತಿ ಮಾಡುವ ಜವಾಬ್ದಾರಿ ನೀಡಿದ್ದರು. 

ಬೆಂಗಳೂರು (ನ.20): ರಾಜ್ಯ ಬಿಜೆಪಿ ಸರ್ಕಾರ ಮತದಾರರ ಪಟ್ಟಿಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ಚಿಲುಮೆ ಸಂಸ್ಥೆಗೆ ನೀಡಿಲ್ಲ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸದರಿ ಸಂಸ್ಥೆಗೆ ಕಾನೂನುಬಾಹಿರವಾಗಿ ಮತದಾರರ ಪರಿಷ್ಕರಣೆ ಮತ್ತು ಬಿಎಲ್‌ಒಗಳನ್ನು ಭರ್ತಿ ಮಾಡುವ ಜವಾಬ್ದಾರಿ ನೀಡಿದ್ದರು. ಈ ವಸ್ತು ಸ್ಥಿತಿ ಮರೆಮಾಚಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿದಂತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಾಡಿರುವ ಆರೋಪಗಳನ್ನು ಅಲ್ಲಗಳೆದು ವಿವರವಾದ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್‌ ಮತದಾರರನ್ನು ಗುರಿಯಾಗಿಸಿ ಮತದಾರರ ಪರಿಷ್ಕರಣೆ ನಡೆದಿದೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿಪರಿಷ್ಕರಣೆ ಹೊಣೆಗಾರಿಕೆ ನೀಡಿಲ್ಲ. ಆ ಸಂಸ್ಥೆಗೆ ಜಾಗೃತಿ ಮೂಡಿಸುವ ಕೆಲಸ ವಹಿಸಲಾಗಿತ್ತು. 

ಮತದಾರರ ಮಾಹಿತಿಗೆ ಕನ್ನ: ಬೊಮ್ಮಾಯಿ ಅವರೇ ಕಿಂಗ್‌ಪಿನ್‌, ಸಿಎಂ ತಲೆದಂಡಕ್ಕೆ ಕಾಂಗ್ರೆಸ್‌ ಪಟ್ಟು

ಇನ್ನು ಮತದಾರರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನೀಡಿದ ಪಿಎಸ್‌ಡಿ ದತ್ತಾಂಶ ಮತ್ತು ಸ್ವೀಕೃತಗೊಂಡ ಅರ್ಜಿಗಳನ್ನು ಪರಿಗಣಿಸಿ, ಸರ್ಕಾರಿ ಅಧಿಕಾರಿಗಳು ಮನೆ, ಮನೆ ಭೇಟಿ ನೀಡಿ ಒದಗಿಸಿದ ವರದಿಯನ್ನು ಆಧರಿಸಿ ಕೈಗೊಳ್ಳಲಾಗಿದೆ. ಹೀಗಾಗಿ ಕಾಂಗ್ರೆಸ್‌ ಮತದಾರರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ. ಆದರೆ, 2017ರಲ್ಲಿ ಅಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರವು ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆ ಕಾರ್ಯವನ್ನು ಹಾಗೂ ಕೆಲವು ಕಡೆ ಬಿಎಲ್‌ಓಗಳನ್ನೂ ಭರ್ತಿ ಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನೂ ಕಾನೂನುಬಾಹಿರವಾಗಿ ನೀಡಲಾಗಿತ್ತು. 

ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮಾಡಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಮತ್ತು ಕಾರ್ಯವನ್ನು ಇಂದಿನ ನಮ್ಮ ಸರ್ಕಾರದ ಮೇಲೆ ಹೊರಿಸುತ್ತಿದೆ ಎಂದು ದೂರಿದ್ದಾರೆ. ಚಿಲುಮೆ ಸಂಸ್ಥೆಯನ್ನು ಚುನಾವಣಾ ಪೂರ್ವ ತಯಾರಿ ಪ್ರಕ್ರಿಯೆಯಲ್ಲಿ ಮೊದಲು ಪರಿಚಯಿಸಿದ್ದು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ. ಮತದಾರರ ಪರಿಷ್ಕರಣೆ ಕಾರ್ಯವನ್ನು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳು ಕೈಗೊಳ್ಳಬೇಕು. ಆದಾಗ್ಯೂ ಚಿಲುಮೆ ಸಂಸ್ಥೆಗೆ ಅಂದಿನ ಸರ್ಕಾರ ನೀಡಿದ್ದು ಅಕ್ರಮ. 2017ರ ಸೆಪ್ಟೆಂಬರ್‌ 15ರಂದು ಕೆ.ಆರ್‌.ಪುರ ತಹಶೀಲ್ದಾರ್‌ ಅವರು ಚಿಲುಮೆ ಟ್ರಸ್ಟ್‌ಗೆ ನೀಡಿರುವ ಆದೇಶದಲ್ಲಿ ಮತದಾರರ ಪರಿಷ್ಕರಣೆ ಕಾರ್ಯಕ್ಕೆ ಬಿಎಲ್‌ಓಗಳನ್ನು ಭರ್ತಿ ಮಾಡಿಕೊಂಡು ಕಾರ್ಯನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ಚಿಲುಮೆ ಸಂಸ್ಥೆಗೆ ಕಾನೂನುಬಾಹಿರವಾಗಿ ನೀಡಲಾಗಿತ್ತು. 

ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯವನ್ನೂ ಕೂಡ ಚಿಲುಮೆ ಸಂಸ್ಥೆಗೆ ಕಾನೂನುಬಾಹಿರವಾಗಿ ಅಧಿಕಾರ ಕೊಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇನ್ನು ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳನ್ನು ಗುರಿಯಾಗಿಸಿ ಹೆಚ್ಚು ಮತದಾರರನ್ನು ಕೈಬಿಡಲಾಗುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು. ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳ ಪೈಕಿ ಅತೀ ಕಡಿಮೆ ಮತದಾರರನ್ನು ಕೈಬಿಟ್ಟ5 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳು ಕಾಂಗ್ರೆಸ್ಸಿನವಾಗಿವೆ. ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ 14,737 ಮತದಾರರನ್ನು ಕೈಬಿಡಲಾಗಿದೆ. ಕೆ.ಆರ್‌.ಪುರಂ ಕ್ಷೇತ್ರದಲ್ಲಿ 45,985 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿಪರಿಷ್ಕರಣೆ ನೀಡಲಾಗಿದೆ ಎಂಬುದು ಸಹ ಸುಳ್ಳು ಆರೋಪವಾಗಿದೆ. 2017-18ನೇ ಸಾಲಿನಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಅಧಿಕಾರಿಗಳೇ ಮತದಾರರ ಪರಿಷ್ಕರಣೆಯನ್ನು ಚಿಲುಮೆ ಸಂಸ್ಥೆಗೆ ನೀಡಿರುವುದು ದಾಖಲೆಗಳಿಂದ ಸಾಬೀತಾಗಿದೆ. ಪ್ರಸ್ತುತ 2022-23ನೇ ಸಾಲಿನಲ್ಲಿ ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಕಾರ್ಯಕ್ರಮದ ಕೆಲಸವನ್ನು ನೀಡಲಾಗಿದೆ. ಸಂಸ್ಥೆ ವತಿಯಿಂದ ನಿಯಮ ಉಲ್ಲಂಘನೆಯಾಗಿರುವ ಅಂಶ ಕಂಡುಬಂದ ಕೂಡಲೇ ಸಂಸ್ಥೆಯನ್ನು ವಜಾಗೊಳಿಸಿ ನ.17ರಂದು ಪೊಲೀಸ್‌ ದೂರು ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ 27 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಹಸೀ ಸುಳ್ಳನ್ನು ಕಾಂಗ್ರೆಸ್‌ ಹೇಳುತ್ತಿದೆ. ಭಾರತ ಚುನಾವಣಾ ಆಯೋಗವು ನೀಡಿದ ಮಾಹಿತಿ ಪ್ರಕಾರ ಮತದಾರರ ಪಟ್ಟಿಯಿಂದ 6.73 ಲಕ್ಷ ಮತದಾರರನ್ನು ಮಾತ್ರ ಕೈಬಿಡಲಾಗಿದೆ. ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನ ಮಾಡುವ ದುರುದ್ದೇಶ ಕೊನೆಗಾಣಿಸುವುದು ಇದರ ಉದ್ದೇಶ. ದೇಶಾದ್ಯಂತ ಈ ಕ್ರಮವನ್ನು ಆಯೋಗ ಕೈಗೊಂಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಸುಮರು 16 ಲಕ್ಷ ಹಾಗೂ ದೇಶಾದ್ಯಂತ ಈವರೆಗೆ 1.02 ಕೋಟಿ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

Bengaluru Tech Summit: ಬೆಂಗಳೂರಿಗೆ 5 ವರ್ಷದಲ್ಲಿ ಆರ್ಥಿಕ ರಾಜಧಾನಿ ಪಟ್ಟ: ಸಿಎಂ ಬೊಮ್ಮಾಯಿ

ಚುನಾವಣಾ ಆಯೋಗವು ಪ್ರಚುರಪಡಿಸಿರುವ ಬಿಬಿಎಂಪಿ ಕರಡು ಮತದಾರರ ಪಟ್ಟಿಯಲ್ಲಿನ ನ್ಯೂನತೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಂತರ ಆಕ್ಷೇಪಣೆ ಪರಿಗಣಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆದ್ದರಿಂದ ಕಾಂಗ್ರೆಸ್‌ ಪಕ್ಷವು ಅರ್ಹ ಮತದಾರರ ಹಕ್ಕನ್ನು ಕಸಿದುಕೊಂಡಿದೆ ಎಂಬುದಕ್ಕೆ ಯಾವುದೇ ಅರ್ಥ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವುದೇ ಒಟ್ಟು 91,15,805 ಮತದಾರರು. ಇದರಲ್ಲಿ 27 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂಬ ಆರೋಪ ಅತ್ಯಂತ ನಿರಾಧಾರ. ಆದರೆ, ಬಿಬಿಎಂಪಿಯಿಂದ ಕೈಬಿಡಲಾಗಿರುವ ಮತದಾರರ ಸಂಖ್ಯೆ ಕೇವಲ 6.37 ಲಕ್ಷ ಮಾತ್ರ. ರಾಜ್ಯದಲ್ಲಿ ಒಟ್ಟು 16 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

click me!