Davos2022: ದಾವೋಸ್‌ನಲ್ಲಿ ಬೊಮ್ಮಾಯಿ, ಸದ್ಗುರು ಭೇಟಿ

By Girish Goudar  |  First Published May 24, 2022, 5:44 AM IST

*   ಮಣ್ಣು ಸಂರಕ್ಷಣೆ ಆಂದೋಲನದ ಬಗ್ಗೆ ಮಾಹಿತಿ ಪಡೆದ ಬೊಮ್ಮಾಯಿ
*   ಕಾಲು ನೋವಿನ ಬಗ್ಗೆ ಸಿಎಂ ಬಳಿ ವಿಚಾರಿಸಿದ ಸದ್ಗುರು
*   ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ 
 


ಬೆಂಗಳೂರು(ಮೇ.24):  ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಣ್ಣು ಸಂರಕ್ಷಣೆ (ಸೇವ್‌ ಸಾಯಿಲ್‌) ಬಗ್ಗೆ ಜಾಗತಿಕ ಆಂದೋಲನ ನಡೆಸುತ್ತಿರುವ ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶೃಂಗಸಭೆಯ ಅಂಗವಾಗಿ ಏರ್ಪಡಿಸಿದ್ದ ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಯಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದರು. ಆ ಗೋಷ್ಠಿಗೂ ಮೊದಲು ಇಬ್ಬರೂ ಪರಸ್ಪರ ಚರ್ಚಿಸಿದರು.

ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಂತೆ ಸದ್ಗುರು ಅವರು, ಕಾಲಿನ ನೋವಿನ ಬಗ್ಗೆ ವಿಚಾರಿಸಿದರು. ಆಗ ‘ತೊಂದರೆ ಏನಿಲ್ಲ..’ ಎಂದು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ಮಣ್ಣು ಸಂರಕ್ಷಿಸುವ ಅಭಿಯಾನದಡಿ 100 ದಿನದಲ್ಲಿ 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ದೂರವನ್ನು ಬೈಕ್‌ನಲ್ಲಿ ಏಕಾಂಗಿಯಾಗಿ ಸಂಚರಿಸುವ ಸದ್ಗುರುಗಳ ಆಂದೋಲನದ ಬಗ್ಗೆ ಕುತೂಹಲದಿಂದ ವಿವರ ಕೇಳಿದರು.

Tap to resize

Latest Videos

"

ದಾವೋಸ್‌ನಲ್ಲಿ ಉದ್ಯಮಿಗಳ ಸೆಳೆದ ಕರ್ನಾಟಕ: ಉದ್ಯಮಿಗಳ ಜತೆ ಸಿಎಂ ಬೊಮ್ಮಾಯಿ ನೇರ ಮಾತುಕತೆ

ಆಗ ಆಂದೋಲನದ ಬಗ್ಗೆ ವಿವರಣೆ ನೀಡಿದ ಸದ್ಗುರು, 27 ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿ ತಮ್ಮ ದೇಶಗಳಲ್ಲಿ ಮಣ್ಣನ್ನು ಸಂರಕ್ಷಿಸಲು ತುರ್ತು ನೀತಿ ಜಾರಿಗೆ ತರಬೇಕೆಂದು ಕೋರಲಾಗಿದೆ. ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಣ್ಣಿನಲ್ಲಿ ಸಾವಯವ ಅಂಶ ಇರುವಂತೆ ನೋಡಿಕೊಳ್ಳುವ ಪ್ರಮುಖ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ವಿವರಿಸಿದರು.

ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯ ಅಂಗವಾಗಿ ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಅವರು ಪಾಲ್ಗೊಂಡಿದ್ದರು.
 

click me!