ಪ್ರತಿ ವರ್ಷ ಸಂಭವಿಸುವ ನೆರೆ ಸಮಸ್ಯೆ ನಿರ್ವಹಣೆಗೆ ನೂತನ ವ್ಯವಸ್ಥೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಇನ್ನೆರಡು ದಿನಗಳಲಿ ರಾಜ್ಯದ ಅತಿವೃಷ್ಟಿ ಹಾನಿ ವರದಿ ಪಡೆದು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಹುಬ್ಬಳ್ಳಿ (ಜು.17): ಪ್ರತಿ ವರ್ಷ ಸಂಭವಿಸುವ ನೆರೆ ಸಮಸ್ಯೆ ನಿರ್ವಹಣೆಗೆ ನೂತನ ವ್ಯವಸ್ಥೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಇನ್ನೆರಡು ದಿನಗಳಲಿ ರಾಜ್ಯದ ಅತಿವೃಷ್ಟಿ ಹಾನಿ ವರದಿ ಪಡೆದು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬೀದರ, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ಅತಿವೃಷ್ಟಿಹಾನಿ ಆಗಿದೆ. ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡುವ ಮುನ್ನವೇ ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಬೆಳಗಾವಿ, ಬೀದರನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ಮನೆಗಳು ಭಾಗಶಃ ಕುಸಿದಲ್ಲಿ ತಕ್ಷಣ 10 ಸಾವಿರ ಪರಿಹಾರ, ಪೂರ್ಣ ಪ್ರಮಾಣದಲ್ಲಿ ಕುಸಿದರೆ ಎ,ಬಿ,ಸಿ ವಿಂಗಡಣೆಯ ಮಾರ್ಗಸೂಚಿ ಅನುಸಾರ 3 ಲಕ್ಷ, 5 ಲಕ್ಷ ವಿತರಿಸಲು ತಿಳಿಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಾಂತ್ರಿಕ ತಪ್ಪಿನಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ 18 ಲಕ್ಷ ಮನೆಗಳು ಮಂಜೂರು ಆಗಿದ್ದು ರದ್ದಾಗಿತ್ತು. ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ. ಆ ಯೋಜನೆಗೆ ರಾಜ್ಯ ಸರ್ಕಾರ ನೀಡಬೇಕಾದ ಅನುದಾನವನ್ನು ಈಗಾಗಲೇ ಒದಗಿಸಲಾಗಿದೆ ಎಂದರು. ಮೇ ತಿಂಗಳ ಅಕಾಲಿಕ ಮಳೆಗೆ ಕುಸಿದ ಮನೆಗಳಿಗೆ ಬಿಡಿಗಾಸು ನೀಡಿರುವ ವಿಚಾರ ಗಮನಕ್ಕಿದ್ದು, ಆ ತೊಂದರೆ ನಿವಾರಿಸಲಾಗುವುದು.
ನಮ್ಮದು ಗರ್ಜಿಸುವ, ಕಾಂಗ್ರೆಸ್‌ದು ನಿದ್ರಿಸುವ ಸಿಂಹ: ಸಿಎಂ ಬೊಮ್ಮಾಯಿ
ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಅನುಸಾರ ನೀಡಲಾದ ಪರಿಹಾರದ ವರದಿ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಕಳೆದ ಹದಿನೈದು ದಿನಗಳ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ಜಂಟಿ ಸರ್ವೇ ಮಾಡಿ ಹಾನಿ ಪ್ರಮಾಣದ ವರ್ಗೀಕರಣ ಮಾಡಲು ತಿಳಿಸಿದ್ದೇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರ ನೀಡುವುದಕ್ಕಿಂತ ಹೆಚ್ಚಾಗಿ ಪರಿಹಾರ ನೀಡಿದ್ದೇವೆ. ರಸ್ತೆಯ ದುರಸ್ತಿ ಕಾರ್ಯಕ್ಕೆ ಈಗಾಗಲೆ 500 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ನೆರೆ ಸಮಸ್ಯೆ ಉಂಟಾಗುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ರೂಪಿಸಲು ಸೂಚಿಸಲಾಗಿದೆ ಎಂದರು.
ಮರಾಠ ಅಭಿವೃದ್ಧಿ ನಿಗಮ ರಚನೆ: ಮರಾಠ ಸಮಾಜ ಅಭಿವೃದ್ಧಿಯಾಗಲು ‘ಮರಾಠ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜುಲೈ 19 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತಿಳಿಸಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ವಿಜಯೇಂದ್ರ ಜಾದವ್, ರಾಜ್ಯದಲ್ಲಿ ಮರಾಠ ಸಮುದಾಯ ಸುಮಾರು 60 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿದ ಜನಾಂಗವಾಗಿತ್ತು.
ಉಡುಪಿಯಲ್ಲಿ ಸಿಎಂ ಮಳೆಹಾನಿ ವೀಕ್ಷಣೆ: ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ
ಈ ಸಮುದಾಯದ ಅಭಿವೃದ್ಧಿಗೆ ನಿಗಮ ರಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸನ್ಮಾನಿಸಲಾಗುವುದು ಎಂದರು. ಈ ಸಮುದಾಯ ಪ್ರಸ್ತುತ 3ಬಿ ಪ್ರವರ್ಗದಲ್ಲಿ ಬರುವುದರಿಂದ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರವರ್ಗ 2ಎಗೆ ಸೇರಿಸಬೇಕು ಎಂದು ಮುಖ್ಯಮತ್ರಿಗಳಲ್ಲಿ ಮನವಿ ಮಾಡುವುದಾಗಿ ಅವರು ತಿಳಿಸಿದರು. ಮಾಜಿ ಶಾಸಕ ಮಾರುತಿರಾವ್ ಮಾತನಾಡಿ, ಕರ್ನಾಟಕದ ಮರಾಠಿಗರಿಗೂ ಎಂಇಎಸ್‌ಗೂ ಯಾವುದೇ ಸಂಬಂಧವಿಲ್ಲ. ನಾವು ಯಾವಾಗಲೂ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಟ್ಟು ಗೌರವವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.