ಚೀನಾ ರೀತಿ ನುಗ್ತೇವೆಂದ ಮಹಾರಾಷ್ಟ್ರ ವಿರುದ್ಧ ಅಮಿತ್‌ ಶಾಗೆ ದೂರು: ಸಿಎಂ ಬೊಮ್ಮಾಯಿ

By Govindaraj SFirst Published Dec 22, 2022, 5:04 AM IST
Highlights

ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂಬ ಶಿವಸೇನೆ ಸಂಸದರ ಹೇಳಿಕೆ ಅತ್ಯಂತ ಅಪ್ರಬುದ್ಧ ಹಾಗೂ ಅಸಂಬದ್ಧ. ಆ ರೀತಿ ನುಗ್ಗಲು, ಈ ಕಡೆ ಇರುವುದು ಭಾರತ ದೇಶ ಎಂಬುದು ಅವರಿಗೆ ಗೊತ್ತಿಲ್ಲ. 

ಸುವರ್ಣಸೌಧ (ಡಿ.22): ‘ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂಬ ಶಿವಸೇನೆ ಸಂಸದರ ಹೇಳಿಕೆ ಅತ್ಯಂತ ಅಪ್ರಬುದ್ಧ ಹಾಗೂ ಅಸಂಬದ್ಧ. ಆ ರೀತಿ ನುಗ್ಗಲು, ಈ ಕಡೆ ಇರುವುದು ಭಾರತ ದೇಶ ಎಂಬುದು ಅವರಿಗೆ ಗೊತ್ತಿಲ್ಲ. ಹಾಗೆ ಮಾಡಿದಲ್ಲಿ, ಚೀನಾ ಆಕ್ರಮಣವನ್ನು ಭಾರತೀಯ ಸೈನಿಕರು ಹೇಗೆ ಹಿಮ್ಮೆಟ್ಟಿಸಿದರೋ ಅದೇ ರೀತಿ ಕನ್ನಡಿಗರು ಮಾಡುತ್ತಾರೆ.’ ಇದು ಮಹಾರಾಷ್ಟ್ರದ ರಾಜ್ಯಸಭಾ ಸಂಸದ, ಶಿವಸೇನೆಯ ಸಂಜಯ್‌ ರಾವುತ್‌ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟು ಶಬ್ದಗಳಲ್ಲಿ ನೀಡಿರುವ ಪ್ರತಿಕ್ರಿಯೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ನಾಯಕರ ಹೇಳಿಕೆಗೆ ಅವರ ಭಾಷೆಯಲ್ಲೇ ಉತ್ತರ ಕೊಡಬೇಕಿದೆ. ನಾನು ಸಹ ಈ ಬಗ್ಗೆ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಗುರುವಾರ ವಿಧಾನಸಭೆಯಲ್ಲಿ ಇದಕ್ಕೆ ಸುದೀರ್ಘ ಉತ್ತರ ನೀಡುತ್ತೇನೆ ಎಂದರು. ಇನ್ನು, ಅಣೆಕಟ್ಟು ಎತ್ತರವನ್ನು ಹೆಚ್ಚಿಸಿ ನೀರು ಬಿಡಬಾರದು ಎಂಬ ಎನ್‌ಸಿಪಿ ಶಾಸಕ ಜಯಂತ್‌ ಪಾಟೀಲ್‌ ಹೇಳಿಕೆ ಕೇವಲ ರಾಜಕೀಯ ಉದ್ದೇಶದ್ದು. ಯಾವ ನೀರನ್ನೂ ಸಹ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮಿಂದ ಆಂಧ್ರಕ್ಕೆ ಹೋಗುವ ನೀರನ್ನು ನಿಲ್ಲಿಸಲು ಸಾಧ್ಯನಾ? ಅತಿ ಹೆಚ್ಚು ಮಳೆ ಬಂದಾಗ ಅದನ್ನು ಇಟ್ಟುಕೊಂಡು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ

ಗಡಿ ವಿವಾದ ಕುರಿತು ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿ ನಾಯಕರು ಅಸಂಬದ್ಧ ಹೇಳಿಕೆ ನೀಡುತ್ತಿದ್ದು, ಇದನ್ನು ಗಮನಿಸಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣುತ್ತದೆ. ಅನಗತ್ಯವಾಗಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ, ಇದು ಸಾಧ್ಯವಾಗುವುದಿಲ್ಲ. ಈ ಹಿಂದೆಯೂ ಅವರು ಇಂಥ ರಾಜಕೀಯ ಮಾಡಲು ಹೋಗಿ ವಿಫಲರಾಗಿದ್ದರು. ಈಗಲೂ ಸಹ ವಿಫಲರಾಗುತ್ತಾರೆ ಎಂದರು. ಎರಡು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯಿದೆ. ಬಸ್‌ಗಳ ಓಡಾಟ ಸುಗಮವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಯಕರು ಗಡಿಗೆ ಬರುವ ಪ್ರಯತ್ನ ಮಾಡಿದರು. ಆದರೆ, ಅವರಿಗೆ ಜನಬೆಂಬಲ ಸಿಗಲಿಲ್ಲ. ರಾಜಕೀಯ ಪಕ್ಷಗಳ ಧ್ವಜವನ್ನು ಹಿಡಿದುಕೊಂಡು ಬಂದಿದ್ದನ್ನು ಗಮನಿಸಿದರೆ ರಾಜಕೀಯ ಪ್ರೇರಿತ ಎನ್ನಿಸುತ್ತದೆ ಎಂದರು.

ಕಾಂಗ್ರೆಸ್ಸಿಗರಿಗೆ ಕಿವಿಮಾತು: ರಾಜ್ಯದ ಕಾಂಗ್ರೆಸ್‌ನಾಯಕರಿಗೆ ಹೇಳುವುದೇನೆಂದರೆ, ನಾವು ನಮ್ಮ ಪಕ್ಷದ ನಾಯಕರ ಜತೆ ಈಗಾಗಲೇ ಮಾತನಾಡಿದ್ದೇವೆ. ನೀವು ಅಲ್ಲಿನ ನಾಯಕರ ಜತೆ ಮಾತನಾಡಬೇಕು. ಇದು ಬೀದಿಯಲ್ಲಿ ಇತ್ಯರ್ಥವಾಗುವ ವಿವಾದವಲ್ಲ. ಮಹಾರಾಷ್ಟ್ರದವರೇ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅವರಿಗೆ ತಮ್ಮ ವಾದ ದುರ್ಬಲ ಎಂಬುದು ಮನದಟ್ಟಾಗಿದೆ. ಹೀಗಾಗಿ ರಾಜಕೀಯ ಲಾಭ ಪಡೆಯಲು ಪ್ರಯತನ್ನ ಮಾಡುತ್ತಿದ್ದಾರೆ. ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.

ಮಂತ್ರಿಗಿರಿ ಸ್ಥಾನ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ: ಈಶ್ವರಪ್ಪ ಶಾಂತ

ಚೀನಾ ರೀತಿಯಲ್ಲಿ ಕರ್ನಾಟಕದೊಳಗೆ ನುಗ್ತೀವಿ: ‘ದೇಶದ ಗಡಿಯಲ್ಲಿ ಭಾರತಕ್ಕೆ ಚೀನಾ ಪ್ರವೇಶಿಸಿದಂತೆ ಮಹಾರಾಷ್ಟ್ರವು ಕರ್ನಾಟಕವನ್ನು ಪ್ರವೇಶಿಸಲಿದೆ’ ಎಂದು ಶಿವಸೇನೆ ಉದ್ಧವ್‌ ಬಣದ ನಾಯಕ ಸಂಜಯ್‌ ರಾವುತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಚೀನಾದಂತೆ ನಾವು ಕರ್ನಾಟಕ ಪ್ರವೇಶಿಸಲಿದ್ದೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ, ನಾವು ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಹೇಳಿದ್ದಾರೆ.

click me!