
ಬೆಂಗಳೂರು(ಸೆ.09): ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸಿ ಹಿಂದಿನಂತೆ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸಿಬಿಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಎಸಿಬಿಯಲ್ಲಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ. ಈ ಹಿಂದಿನಂತೆ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ಮುಂದೆ ಕರ್ನಾಟಕದಲ್ಲಿ ಮತ್ತೆ ಲೋಕಾಯುಕ್ತ ಅಬ್ಬರಿಸಲಿದೆ.
ಭ್ರಷ್ಟರ ಬೇಟೆಗೆ ಲೋಕಾ ಸಜ್ಜು
ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ, ಈಗ ಎಸಿಬಿ ರದ್ದು ಮಾಡುವ ಹೈಕೋರ್ಚ್ ಆದೇಶ ಹಾಗೂ ಅದಕ್ಕೆ ಸರ್ಕಾರದ ಪೂರಕ ಸ್ಪಂದನೆ ದೊರಕಿದ ಕಾರಣ ಚುರುಕುಗೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಚ್ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.
ಹೈಕೋರ್ಟ್ ಆದೇಶ ಸುಪ್ರೀಂನಲ್ಲಿ ಪ್ರಶ್ನೆ
ಭ್ರಷ್ಟಾಚಾರ ನಿಗ್ರಹ ಪಡೆ(ಎಸಿಬಿ) ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಚ್ ನೋಟಿಸ್ ನೀಡಿದೆ. ಜೊತೆಗೆ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಎಸಿಬಿ ರದ್ದುಪಡಿಸಿರುವ ರಾಜ್ಯ ಹೈಕೋರ್ಚ್ ಆದೇಶ ಪ್ರಶ್ನಿಸಿ ಬೆಂಗಳೂರಿನ ಕನಕರಾಜು ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿರುವ ನ್ಯಾ.ಡಿ.ವೈ.ಚಂದ್ರಚೂಡ್ ಪೀಠ ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ನೋಟಿಸ್ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ