ರಾಹುಲ್‌ ಗಾಂಧಿ ಹೇಳಿದ ಆನೆ ಮರಿ ರಕ್ಷಣೆಗೆ ಸಿಎಂ ಬೊಮ್ಮಾಯಿ ಸೂಚನೆ

By Govindaraj S  |  First Published Oct 7, 2022, 1:36 PM IST

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮರಿ ಬಗ್ಗೆ ಸಂಸದ ರಾಹುಲ್‌ ಗಾಂಧಿ ತೋರಿದ ಕಾಳಜಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದ್ದಾರೆ.


ಬೆಂಗಳೂರು (ಅ.07): ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮರಿ ಬಗ್ಗೆ ಸಂಸದ ರಾಹುಲ್‌ ಗಾಂಧಿ ತೋರಿದ ಕಾಳಜಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದ್ದಾರೆ. ಈ ಸಂಬಂಧ ಗುರುವಾರ ರಾಹುಲ್‌ ಗಾಂಧಿಗೆ ಪತ್ರ ಬರೆದಿರುವ ಬೊಮ್ಮಾಯಿ, ಅ.5ರಂದು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಛಾಯಾಚಿತ್ರಗಳ ಸಹಿತ ಗಾಯಗೊಂಡಿರುವ ಆನೆ ಮರಿ ಬಗ್ಗೆ ತಾವು ನನಗೆ ಬರೆದಿರುವ ಪತ್ರವನ್ನು ಸ್ವೀಕರಿಸಿದ್ದೇನೆ. ಗಾಯಗೊಂಡಿರುವ ಆನೆ ಮರಿ ಸ್ಥಿತಿಯ ಬಗೆಗಿನ ನಿಮ್ಮ ಕಾಳಜಿ ಪ್ರಶಂಸನೀಯ ಎಂದಿದ್ದಾರೆ.

ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ, ಕಾಡು ಪ್ರಾಣಿಗಳು ಈ ಆನೆ ಮರಿ ಮೇಲೆ ದಾಳಿ ಮಾಡಿರುವ ವಿಚಾರ ಗೊತ್ತಾಯಿತು. ಸದ್ಯ ಆ ಆನೆ ಮರಿ ತಾಯಿ ಹಾಲಿನ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಹೀಗಾಗಿ ನಮ್ಮ ಅಧಿಕಾರಿಗಳು ತಾಯಿ ಆನೆ ಮತ್ತು ಗಾಯಾಳು ಆನೆ ಮರಿ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆನೆ ಮರಿಯನ್ನು ತಾಯಿಯಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವುದು ಸರಿಯಲ್ಲ. ಒಂದು ವೇಳೆ ಆನೆ ಮರಿಯನ್ನು ತಾಯಿಯಿಂದ ಬೇರ್ಪಡಿಸಿದರೆ ಸಮಸ್ಯೆ ಉಲ್ಬಣಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Tap to resize

Latest Videos

78 ಲಕ್ಷ ರೈತರ ಜಮೀನಿಗೆ ಆಧಾರ್‌ ಜೋಡಣೆ: ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿ..!

ಹೀಗಾಗಿ ಗಾಯಾಳು ಆನೆ ಮರಿಗೆ ಅಗತ್ಯವಿರುವ ಔಷಧೋಪಚಾರ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಸಮಯಕ್ಕೆ ಅನುಗುಣವಾಗಿ ಔಷಧೋಪಚಾರ ಮಾಡುವುದರ ಜತೆಗೆ ಆನೆ ಮರಿ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸುವಂತೆ ಸೂಚಿಸಿದ್ದೇನೆ. ಈ ಆನೆ ಮರಿ ಜೀವ ಉಳಿಸಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರದ ಮುಖಾಂತರ ರಾಹುಲ್‌ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ.

ಮರಿ ಆನೆ ರಕ್ಷಿಸಲು ಸಿಎಂಗೆ ರಾಹುಲ್‌ ಪತ್ರ: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ತಾಯಿ ಆನೆಯೊಂದಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಣ್ಣಿಗೆ ಬಿದ್ದ ಪುಟ್ಟಮರಿ ಆನೆ ಸ್ಥಿತಿ ಬಗ್ಗೆ ಎಐಸಿಸಿ ನಾಯಕ ರಾಹುಲ್‌ಗಾಂಧಿ ಮರುಕ ವ್ಯಕ್ತಪಡಿಸಿದ್ದು, ಮರಿ ಆನೆಗೆ ತುರ್ತು ವೈದ್ಯಕೀಯ ಆರೈಕೆ ಒದಗಿಸಿ ಬದುಕಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಬುಧವಾರ ಸಂಜೆ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ನಾಗರಹೊಳೆ ಅರಣ್ಯದಲ್ಲಿ (ರಾಷ್ಟ್ರೀಯ ಉದ್ಯಾನ) ಪುಟ್ಟಮರಿ ಆನೆ ತನ್ನ ತಾಯಿ ಆನೆಯೊಂದಿಗೆ ನಮ್ಮ ಕಣ್ಣಿಗೆ ಬಿದ್ದಿತ್ತು. 

ಮರಿ ಆನೆಯ ಸೊಂಡಿಲು, ಬಾಲ ತೀವ್ರವಾಗಿ ಗಾಯಗೊಂಡಿದ್ದು, ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಪ್ರಕೃತಿಗೆ ಸಹಜವಾಗಿಯೇ ಗುಣಪಡಿಸುವ ಶಕ್ತಿಯಿದ್ದು, ಅದಕ್ಕೆ ಅವಕಾಶ ಕೊಡಬೇಕು ಎಂಬ ನಿಲುವನ್ನು ಒಪ್ಪುತ್ತೇನೆ. ಆದರೆ, ಈ ಪ್ರಕರಣದಲ್ಲಿ ಗಾಯದ ತೀವ್ರ ಆಧಾರದ ಮೇಲೆ ಅವಸಾನದ ಅಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಬೇಕಿರುವುದು ತುರ್ತು ಅಗತ್ಯ. ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಹೀಗಾಗಿ ರಾಜಕೀಯ ಗಡಿಗಳನ್ನು ದಾಟಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಪುಟ್ಟಆನೆಯನ್ನು ರಕ್ಷಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಅ.11ರಿಂದ ಯಡಿಯೂರಪ್ಪ ಜತೆ ರಾಜ್ಯ ಪ್ರವಾಸ: ಸಿಎಂ ಬೊಮ್ಮಾಯಿ

ಸೂಕ್ತ ವೈದ್ಯಕೀಯ ಸೇವೆ ದೊರೆತರೆ ಅದು ಬದುಕುಳಿಯಲಿದೆ. ನೀವು ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಂಡು ಆನೆಯ ಮರಿಯನ್ನು ಉಳಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈ ಫೋಟೋ ಟ್ವಿಟ್ಟರ್‌ನಲ್ಲೂ ಹಂಚಿಕೊಂಡಿರುವ ರಾಹುಲ್‌ ಗಾಂಧಿ, ‘ತಾಯಿಯ ಪ್ರೀತಿ... ಸುಂದರ ಆನೆಯೊಂದಿಗೆ ಗಾಯಗಳೊಂದಿಗೆ ಬದುಕಿಗಾಗಿ ಒದ್ದಾಡುತ್ತಿರುವ ಮರಿ ಆನೆ ನೋಡಲು ದುಃಖವಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

click me!