ದೇಶದಲ್ಲಿ ಫಾರ್ಮಾ ಲಾಬಿ ದೊಡ್ಡ ಮಟ್ಟದಲ್ಲಿ ಇದೆ. ಔಷಧಿ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ಔಷಧಿ ಕಾರಣಕ್ಕೆ ಸಾವುಗಳು ಸಂಭವಿಸಿದರೆ ಅದು ವ್ಯವಸ್ಥೆಯ ವೈಫಲ್ಯವಾಗುತ್ತದೆ. ಹೀಗಾಗಿ ಕಾನೂನುಗಳನ್ನು ಬಳಸಿಕೊಂಡು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಸುವರ್ಣ ವಿಧಾನ ಪರಿಷತ್(ಡಿ.18): ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣಗಳ ಸಂಬಂಧ ಸೂಕ್ತ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ. ಯಾವ ತನಿಖೆಗೆ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳವಾರ ಶೂನ್ಯ ವೇಳೆಯಲ್ಲಿ ಪ್ರಸ್ತಾಪವಾಗಿದ್ದ ವಿಚಾರ ಸಂಬಂಧ ಮಾತನಾಡಿದ ಅವರು, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನ.11ರಂದು ಬಾಣಂತಿಯರ ಸಾವು ವರದಿಯಾಗಿದೆ. ನ.9, 10 ಮತ್ತು 11ರಂದು ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಈ ಸಾವುಗಳು ಸಂಭವಿಸಿವೆ. ಈ ಮೂರು ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಗಳ ಪೈಕಿ ಬಹು ಅಂಗಾಂಗಳ ವೈಫಲ್ಯ ಮತ್ತು ಮೂತ್ರಪಿಂಡದ ಕಾರಣಗಳಿಂದ 7 ಪ್ರಕರಣಗಳಲ್ಲಿ 5 ಬಾಣಂತಿಯರು ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಬಾಣಂತಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಣಂತಿಯರ ಸಾವು ಘಟನೆ ವರದಿಯಾದ ಕೂಡಲೇ ಇಲಾಖೆಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞ ವೈದ್ಯರ ತಂಡ ರಚಿಸಲಾಗಿತ್ತು. ಈ ತಂಡವು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದೆ ಎಂದರು.
undefined
ಬಳ್ಳಾರಿ: ಮೃತ ಬಾಣಂತಿಯರ ಕುಟುಂಬಕ್ಕೆ ನೀಡಿದ ಪರಿಹಾರ ಸಾಕಾಗುವುದಿಲ್ಲ, ಡಾ.ನಾಗಲಕ್ಷ್ಮಿ ಚೌಧರಿ
ಈ ತಜ್ಞರ ತಂಡವು ನೀಡಿದ ವರದಿಯಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ವೇಳೆ ಯಾವುದೇ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪ ನಡೆದಿಲ್ಲ. ಆದರೆ, ನ.9ರಂದು ಆಸ್ಪತ್ರೆಯಲ್ಲಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬದಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ ತಜ್ಞರ ಸಮಿತಿ ವರದಿ ಆಧರಿಸಿ ಎಲ್ಲಾ ಹಂತದ ಆರೋಗ್ಯ ಸೌಲಭ್ಯಗಳಲ್ಲಿ ಈ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬಳಕೆಯನ್ನು ಹಿಂಪಡೆಯಲಾಗಿತ್ತು. ಬಳಿಕ ಈ ದ್ರಾವಣವನ್ನು ಐದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಐದು ಪ್ರಯೋಗಾಲಯದ ವರದಿಯಲ್ಲಿ ಈ ದ್ರಾವಣದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ವರದಿ ಬಂದಿದೆ ತಿಳಿಸಿದರು.
ಕಳೆದ ವರ್ಷ ನವೆಂಬರ್‌ನಲ್ಲೇ ಈ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಗುಣಮಟ್ಟದ ಬಗ್ಗೆ ವಿವಿಧ ಜಿಲ್ಲೆಗಳಲ್ಲಿ ಪ್ರಶ್ನೆ ಎದ್ದಿತ್ತು. ತಕ್ಷಣ ಅದರ ಬಳಕೆ ನಿಲ್ಲಿಸಿ, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇನ್ನು ದ್ರಾವಣ ತಯಾರಿಸುವ ಕಂಪನಿ ಪಶ್ಚಿಮ್ ಬಂಗ ಕಂಪನಿಗೂ ನೋಟಿಸ್ ನೀಡಲಾಗಿತ್ತು. ಕಂಪನಿಯನ್ನು ಬ್ಲಾಕ್ ಲಿಸ್ಟ್‌ಗೂ ಹಾಕಲಾಗಿತ್ತು. ಬಳಿಕ ಕಂಪನಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿತ್ತು. ಬಳಿಕ ಆ ಬ್ಯಾಚ್‌ನ ದ್ರಾಣವ ಬಳಕೆ ನಿಲ್ಲಿಸಲಾಗಿತ್ತು. ಇದೀಗ ಬಳ್ಳಾರಿ ಜಿಲ್ಲಾಸ್ಪತ್ರೆ ಬಾಣಂತಿಯರ ಸಾವಿನ ಬಳಿಕ ಇದು ಮತ್ತೆ ಚರ್ಚೆಗೆ ಬಂದಿತ್ತು. ಬಳಿಕ ಪರೀಕ್ಷೆ ಮಾಡಿಸಿದಾಗ ಈ ದ್ರಾವಣದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗೊತ್ತಾಗಿದೆ ಎಂದರು.
ಪರಿಹಾರ ಮತ್ತು ಕ್ರಮ:
ಈಗಾಗಲೇ ರಾಜ್ಯ ಸರ್ಕಾರ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೋಷಿಸಿದೆ. ಈ ರಿಂಗರ್ ಲ್ಯಾಕ್ಟೇಟ್ ದ್ರಾವಣ ತಯಾರಿಸುವ ಪಶ್ಚಿಮ್ ಬಂಗ ಕಂಪನಿ ಮತ್ತು ಅದಕ್ಕೆ ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಪತ್ರ ಬರೆಯಲಾಗಿದೆ. ಈ ದ್ರಾವಣದ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯತೆ ತೋರಿರುವ ಔಷಧಿ ನಿಯಂತ್ರಕ ಡಾ.ಉಮೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ಕೆಎಸ್‌ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಇಲಾಖಾ ವಿಚಾರಣೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಔಷಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ಕಂಪನಿಯಾದರೂ ಅದನ್ನು ಮುಚ್ಚಿಸಬೇಕು. ಕೇಂದ್ರದ ತಂಡ ಹಾಗೂ ಪಶ್ಚಿಮ ಬಂಗಾಳದ ತಂಡಗಳು ಈ ರಿಂಗರ್ ಲ್ಯಾಕ್ಟೇಟ್ ದ್ರಾವಣ ತಯಾರಿಸುವ ಪಶ್ಚಿಮ್ ಬಂಗ ಕಂಪನಿಗೆ ಭೇಟಿ ನೀಡಿ ಜಂಟಿ ತನಿಖೆ ಮಾಡಿದ್ದು, ಕಂಪನಿಯಲ್ಲಿ ಔಷಧಿ ತಯಾರಿಸುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಔಷಧಿ ತಯಾರಿಸದಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ತಾಯಿ, ಶಿಶು ಮರಣ ಪ್ರಮಾಣ ಇಳಿಕೆಗೆ ಕ್ರಮಕ್ಕೆ ಆಗ್ರಹ:
ಇದಕ್ಕೂ ಮುನ್ನ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಕುರಿತು ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ ಹಲವು ಸದಸ್ಯರು ಮಾತನಾಡಿದರು. ಮೃತ ಬಾಣಂತಿಯರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ತಾಯಿ, ಶಿಶುಗಳ ಮರಣ ಸಂಖ್ಯೆ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಾಣಂತಿಯರ ಸಾವು ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಅಥವಾ ನ್ಯಾಯಾಂಗ ತನಿಖೆಗೆ ವಹಿಸುವಂತೆ ಬಿಜೆಪಿ-ಜೆಡಿಎಸ್ ಸದಸ್ಯರು ಆಗ್ರಹಿಸಿದರು.
ಬಾಣಂತಿಯರ ಸಾವಿನ ಸರಣಿ: 7 ತಿಂಗಳಲ್ಲಿ 326 ಬಲಿ, ಬೆಂಗಳೂರಿನಲ್ಲಿಯೇ 50 ಸಾವು
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ತನಿಖೆ ನಡೆಸಲು ಯಾವುದೇ ಹಿಂದೇಟು ಇಲ್ಲ. ಈ ವಿಚಾರದಲ್ಲಿ ರಾಜಕೀಯದ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ತನಿಖೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ರಾಜ್ಯದಲ್ಲಿ ಬಾಣಂತಿಯರು ಮತ್ತು ಶಿಶುಗಳ ಮರಣದ ಪ್ರಮಾಣ ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಇಳಿಮುಖವಾಗಿದೆ. ಇದನ್ನು ಶೂನ್ಯಕ್ಕೆ ಇಳಿಸುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ದೇಶದಲ್ಲಿ ಫಾರ್ಮಾ ಲಾಬಿ ದೊಡ್ಡ ಮಟ್ಟದಲ್ಲಿ ಇದೆ. ಔಷಧಿ ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ಔಷಧಿ ಕಾರಣಕ್ಕೆ ಸಾವುಗಳು ಸಂಭವಿಸಿದರೆ ಅದು ವ್ಯವಸ್ಥೆಯ ವೈಫಲ್ಯವಾಗುತ್ತದೆ. ಹೀಗಾಗಿ ಕಾನೂನುಗಳನ್ನು ಬಳಸಿಕೊಂಡು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.