ಪಿಎಎಸ್‌ಐ ನೇಮಕಾತಿಯ ಅಕ್ರಮ ಪ್ರಕರಣ ಆರೋಪಿಯಾಗಿರುವ ಅಮೃತ್ ಪಾಲ್ ಮಂಪರು ಪರೀಕ್ಷೆ ನಡೆಸಲು ಅವಕಾಶ ಕೋರಿ ಸಿಐಡಿಯಿಂದ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರು (ಜು.16): ಪೊಲೀಸ್ ಸಬ್ ಇನ್‌ಸ್ಪೆಕ್ಟರ್(ಪಿಎಎಸ್‌ಐ) ನೇಮಕಾತಿಯ ಅಕ್ರಮ ಪ್ರಕರಣ ಆರೋಪಿಯಾಗಿರುವ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಸಿಐಡಿ ಅರ್ಜಿ ಸಲ್ಲಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಸಂಬಂಧಿಸಿದಂತೆ ಆರೋಪಿಗಳ ವಕೀಲರು ಶನಿವಾರ ಪ್ರತಿಕ್ರಿಯೆ ನೀಡಬೇಕಾಗಿದೆ. ಪಿಎಎಸ್‌ಐ ನೇಮಕಾತಿ ಪ್ರಕರಣ ದೊಡ್ಡ ಹಗರಣವಾಗಿದೆ. ಇದರಿಂದ ನೂರಾರು ಮಂದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಹಗರಣದ ಸತ್ಯಾಂಶ ಹೊರಬರಬೇಕಾಗಿದೆ. ಆದರೆ, ಆರೋಪಿ ಅಮೃತ್ ಪಾಲ್ ಅವರು ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ. ಆದ್ದರಿಂದ ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಸಿಐಡಿ ಅರ್ಜಿಯಲ್ಲಿ ಕೋರಿದೆ.
14 ದಿನ ನ್ಯಾಯಾಂಗ ಬಂಧನ: ಅಮೃತ್ ಪೌಲ್ ಬಂಧನದ ಬಳಿಕ ಪೊಲೀಸ್ ವಶಕ್ಕೆ ಪಡೆದಿದ್ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಆರೋಪಿಯನ್ನು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿ ನ್ಯಾಯಾಧೀಶರು ಆದೇಶಿಸಿದರು.
10 ಲಕ್ಷ ವಶಕ್ಕೆ: ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ. ಈ ಖಾತೆಗಳಿಂದ ಸುಮಾರು 10 ಲಕ್ಷ ರು.ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಸಿಐಡಿ ನ್ಯಾಯಾಲಯಕ್ಕೆ ವಿವರಿಸಿದೆ.
ಜೈಲು ಕೈಪಿಡಿಯಂತೆ ಸೌಲಭ್ಯ: ಅರ್ಜಿ ವಿಚಾರಣೆ ವೇಳೆ, ಆರೋಪಿ ಅಮೃತ್ ಪಾಲ್ ಅವರಿಗೆ ಮನೆಯಿಂದ ಆಹಾರ ತರಿಸಿಕೊಳ್ಳುವುದಕ್ಕೆ ಅನುಮತಿ ನೀಡಬೇಕು. ಮಗಳು ಮತ್ತು ಪತ್ನಿಯೊಂದಿಗೆ ಪ್ರತಿ ದಿನ 30 ನಿಮಿಷಗಳ ಕಾಲ ಮಾತನಾಡುವುದಕ್ಕೆ ಅವಕಾಶ ನೀಡಬೇಕು ಮತ್ತು ವೈದ್ಯಕೀಯ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಎಸ್‌ಐ ಹಗರಣ ಕೊಲೆಗಿಂತಲೂ ಗಂಭೀರ ಅಪರಾಧ: ಹೈಕೋರ್ಟ್
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಐಡಿ ಪರ ವಕೀಲ ಪ್ರಸನ್ನಕುಮಾರ್, ಪ್ರಸ್ತುತ ಅರ್ಜಿದಾರರು ಆರೋಪಿಯಾಗಿದ್ದಾರೆ. ಆದ್ದರಿಂದ ವಿಶೇಷ ಸೌಲಭ್ಯ ಕಲ್ಪಿಸುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜೈಲು ಕೈಪಿಡಿಯಲ್ಲಿರುವ ಸೌಲಭ್ಯಗಳನ್ನು ಮಾತ್ರ ಒದಗಿಸಬೇಕು. ಯಾವುದೇ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ಜೈಲು ಕೈಪಿಡಿಯಂತೆ ಇರುವ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಮಂಪರು ಪರೀಕ್ಷೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವ ರಾಜಕಾರಣಿಗಳ ಹೆಸರು ಹೊರಬರಲು ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಅವರ ಡೈರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಒತ್ತಾಯಿಸಿದ್ದರು. ಪಿಎಸ್‌ಐ ಅಕ್ರಮ ಅಗೆದಷ್ಟೂ ಆಳವಿದೆ. ಪಿಎಸ್‌ಐ ನೇಮಕಾತಿ ವಿಭಾಗದ ಎಡಿಜಿಪಿಯೇ ಬಂಧಿತರಾಗಿದ್ದಾರೆ. ಅವರು ಸತ್ಯ ಬಾಯಿಬಿಟ್ಟರೆ ಪ್ರಕರಣದ ಹಿಂದಿರುವ ಹಿರಿಯರ ಹೆಸರು ಹೊರಬರಲಿದೆ.
ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ತಪ್ಪಿತಸ್ಥರನ್ನು ಬಿಟ್ಟಿಲ್ಲ: ಸಚಿವ ಹಾಲಪ್ಪ
ಹೀಗಾಗಿ ಎಸಿಬಿ ಅಧಿಕಾರಿಗಳಿಂದ ಬಂಧಿತರಾಗಿರುವ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಯಾರೆಲ್ಲಾ ಶಾಮೀಲಾಗಿದ್ದಾರೋ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲಿ. ಪ್ರಕರಣದಲ್ಲಿ ಯಾವೊಬ್ಬ ತಪ್ಪಿತಸ್ಥರೂ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಸಂದೇಹಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳಬೇಕು ಎಂದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಮೃತ್ ಪಾಲ್ ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದಾರೆ.