
ಬೆಂಗಳೂರು (ಜು.06): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಬಂಧಿತರಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ನಡುವಿನ ನಡೆದಿದೆ ಎನ್ನಲಾದ ಲಕ್ಷಾಂತರ ರು. ಮೊತ್ತದ ಹಣಕಾಸು ವ್ಯವಹಾರದ ಕುರಿತು ರಾಜ್ಯ ಅಪರಾಧ ತನಿಖಾ ದಳ ಶೋಧನೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಅರಮನೆ ರಸ್ತೆಯ ಸಿಐಡಿ ಕಚೇರಿಯ ಸೆಲ್‌ನಲ್ಲಿರುವ ಎಡಿಜಿಪಿ ಅವರನ್ನು ಬುಧವಾರ ಸಹ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಹಗರಣದಲ್ಲಿ ಹರಿದಾಡಿರುವ ಹಣದ ಕುರಿತು ಎಡಿಜಿಪಿ ಅವರನ್ನು ಪ್ರಶ್ನಿಸಿದೆ. ಆದರೆ ಸಿಐಡಿ ಪ್ರಶ್ನೆಗಳಿಗೆ ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಆರ್‌ಎಸ್‌ಐ ಶ್ರೀಧರ್ ಮನೆಯಲ್ಲಿ ಜಪ್ತಿಯಾದ ಎರಡು ಕೋಟಿ ರು.ಗಳಿಗೂ ಅಧಿಕ ಮೊತ್ತಕ್ಕೂ ಸಂಬಂಧವಿಲ್ಲ ಎಂದು ಎಡಿಜಿಪಿ ಅಮೃತ್ ಪಾಲ್ ವಾದಿಸುತ್ತಿದ್ದಾರೆ ಎನ್ನಲಾಗಿದೆ.
ಸದನದಲ್ಲಿ ಉತ್ತರ ನೀಡುವಾಗ ಸಾಕ್ಷ್ಯಾಧಾರ ಇರಲಿಲ್ಲ: ಗೃಹ ಸಚಿವ ಜ್ಞಾನೇಂದ್ರ
ಅಕ್ಕಪಕ್ಕದ ಸೆಲ್‌ನಲ್ಲೇ ಗುರು-ಶಿಷ್ಯ: ಸಿಐಡಿ ಕಚೇರಿಯ ಅಕ್ಕಪಕ್ಕದ ಸೆಲ್‌ನಲ್ಲೇ ಎಡಿಜಿಪಿ ಅಮೃತ್ ಪಾಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಇಡಲಾಗಿದೆ. ಬಂಧನದ ಬಳಿಕ ಸೆಲ್‌ನಲ್ಲಿ ಡಿವೈಎಸ್ಪಿ ಶಾಂತಕುಮಾರ್ ಕಂಡು ಎಡಿಜಿಪಿ ಸಿಟ್ಟು ತೋರಿಸಿದರು ಎನ್ನಲಾಗಿದೆ. ಇದೇ ಕಟ್ಟಡದ ಮತ್ತೊಂದು ಸೆಲ್‌ನಲ್ಲಿ ಡಿವೈಎಸ್ಪಿಗೆ ಹಣ ಕೊಟ್ಟಿದ್ದ ಅಭ್ಯರ್ಥಿ ಜಾಗೃತ್ ಸಹ ಇದ್ದಾನೆ.
ಎಡಿಜಿಪಿ-ಡಿವೈಎಸ್ಪಿ ಮುಖಾಮುಖಿ ವಿಚಾರಣೆ?: ಇದುವರೆಗೆ ಪ್ರಕರಣದ ಸಂಬಂಧ ಎಡಿಜಿಪಿ ಅಮೃತ್ ಪಾಲ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಆ ಇಬ್ಬರು ಅಧಿಕಾರಿಗಳನ್ನು ಮುಖಾಮುಖಿ ಕೂರಿಸಿ ಹೇಳಿಕೆ ಪಡೆಯಲಾಗುತ್ತದೆ. ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲಿ ಹೇಗೆ ಒಎಂಆರ್ ಶೀಟ್‌ಗಳು ತಿದ್ದುಪಡಿ ನಡೆಯಿತು ಹಾಗೂ ಇದಕ್ಕಾಗಿ ನಡೆದಿರುವ ಹಣದ ವ್ಯವಹಾರದ ಬಗ್ಗೆ ಪ್ರಶ್ನಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಮುಜುಗರ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಒಎಂಆರ್‌ಶೀಟ್ ತಿದ್ದುಪಡಿ ಮೂಲಕ ಪಿಎಸ್‌ಐ ಹುದ್ದೆಗೆ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಬಳಿ ಡಿವೈಎಸ್ಪಿ ಶಾಂತಕುಮಾರ್ ಡೀಲ್ ಕುದುರಿಸಿದ್ದರು. ಅಭ್ಯರ್ಥಿಗಳಿಂದ ತಲಾ 60 ರಿಂದ 70 ಲಕ್ಷ ರು. ಹಣವನ್ನು ಡಿವೈಎಸ್ಪಿ ತಂಡ ವಸೂಲಿ ಮಾಡಿದ್ದು, ಇದರಲ್ಲಿ ಸುಮಾರು 30 ಲಕ್ಷ ರು. ಎಡಿಜಿಪಿ ಅವರಿಗೆ ಸೇರಿದೆ. ಇನ್ನುಳಿದ ಹಣವನ್ನು ಶಾಂತಕುಮಾರ್ ಹಾಗೂ ಇತರರು ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿದೆ. ಆದರೆ ವಿಚಾರಣೆ ವೇಳೆ ಹಣಕಾಸು ವ್ಯವಹಾರದ ಬಗ್ಗೆ ಎಡಿಜಿಪಿ ನಿರಾಕರಿಸುತ್ತಿದ್ದಾರೆ. ಹೀಗಾಗಿ ಎಡಿಜಿಪಿ ಮತ್ತು ಡಿವೈಎಸ್ಪಿ ನಡುವಿನ ಹಣದ ವ್ಯವಹಾರದ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ