
ಬೆಂಗಳೂರು (ಜು.06): ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಬೆಂಗಳೂರು ನಗರ ಜಿಲ್ಲೆ ಮಾಜಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರಿಗೆ ಮತ್ತೊಂದು ಸಂಕಷ್ಟಎದುರಾಗಿದ್ದು, ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ಇದಕ್ಕೆ ಪೂರಕ ಎನ್ನುವಂತೆ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಬಂಧನ ಬೆನ್ನಲ್ಲೇ ಯಶವಂತಪುರ ಮುಖ್ಯ ರಸ್ತೆಯಲ್ಲಿರುವ ‘ಸಲಾರ್‌ಪುರಿಯಾ’ ಅಪಾರ್ಟ್‌ಮೆಂಟ್‌ನಲ್ಲಿರುವ ಮಂಜುನಾಥ್ ಅವರ ಫ್ಲ್ಯಾಟ್ ಮೇಲೆ ಮಂಗಳವಾರ ಎಸಿಬಿ ದಿಢೀರ್ ದಾಳಿ ನಡೆಸಿದೆ.
ಈ ವೇಳೆ ಬೆಂಗಳೂರು ನಗರ ಸುತ್ತಮುತ್ತ 30 ಎಕರೆಗೂ ಅಧಿಕ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ದಾಖಲೆಗಳ ಪರಿಶೀಲನೆ ಬಳಿಕ ಐಎಎಸ್ ಅಧಿಕಾರಿ ಮಂಜುನಾಥ್ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರತ್ಯೇಕ ಎಫ್‌ಐಆರ್ ದಾಖಲಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಕಚೇರಿಯಲ್ಲಿ ಲಂಚ ಪ್ರಕರಣ, ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಅರೆಸ್ಟ್!
ಆನೇಕಲ್ ತಾಲೂಕಿನ ಕೊಡ್ಲು ಗ್ರಾಮದ ಸರ್ವೇ ನಂ-190/5ರಲ್ಲಿ 38 ಗುಂಟೆ ಭೂಮಿ ವಿವಾದ ಸಂಬಂಧ ಬೆಂಗಳೂರು ನಗರದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕಂದಾಯ ಮೇಲ್ಮನವಿ (ರೆವಿನ್ಯೂಅಫೀಲ್)ಯನ್ನು ಬೇಗೂರು ನಿವಾಸಿ ಅಜಾಂ ಪಾಷ ಸಲ್ಲಿಸಿದ್ದರು. ಈ ಅರ್ಜಿ ಪರವಾಗಿ ಆದೇಶ 5 ಲಕ್ಷ ರು.ಲಂಚ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಅವರ ಕಚೇರಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಎಸಿಬಿ ಪಾಷ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮೊದಲು ತಮ್ಮ ಕಚೇರಿ ಸಿಬ್ಬಂದಿ ಬಂಧಿತರಾದ ಬಳಿಕ ಸೋಮವಾರ ಮಂಜುನಾಥ್ ಅವರು ಎಸಿಬಿಯಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
7 ತಾಸು ಡೀಸಿಗೆ ಡ್ರಿಲ್: ಭೂ ವ್ಯಾಜ್ಯ ವಿವಾದದಲ್ಲಿ ಆದೇಶ ನೀಡಲು .5 ಲಕ್ಷ ಲಂಚ ಸ್ವೀಕರಿಸಿದ ಆರೋಪ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ಮತ್ತೆ ಸುಮಾರು ಏಳು ತಾಸು ವಿಚಾರಣೆ ನಡೆಸಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ನಗರದ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಹಾಜರಾದ ಜಿಲ್ಲಾಧಿಕಾರಿ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ಪಡೆದ ಅಧಿಕಾರಿಗಳು, ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ರಾತ್ರಿ ಜಿಲ್ಲಾಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಲಂಚ ಕೇಸ್: ಡೀಸಿ ವಿರುದ್ಧ ತನಿಖೆಗೆ ಇಲ್ಲ ತಡೆ
ತಾನು ಯಾವುದೇ ತಪ್ಪು ಮಾಡಿಲ್ಲ. ತನ್ನ ಮೇಲೆ ವೃಥಾರೋಪ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಜಿಲ್ಲಾಧಿಕಾರಿ ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆನೇಕಲ್ ತಾಲೂಕಿನ ಕೊಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ವ್ಯಾಜ್ಯ ಸಂಬಂಧ ಮೇಲ್ಮನವಿ ಅರ್ಜಿದಾರ ಬೇಗೂರು ನಿವಾಸಿ ಅಜಾಂ ಪಾಷ ಪರ ಆದೇಶ ನೀಡಲು ಜಿಲ್ಲಾಧಿಕಾರಿ ಕಚೇರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಬಂದಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಉಪ ತಹಸೀಲ್ದಾರ್, ವ್ಯವಸ್ಥಾಪಕ ಮಹೇಶ್ ಹಾಗೂ ಕೋರ್ಚ್ ಸಹಾಯಕ ಚೇತನ್‌ಕುಮಾರ್ ಅಲಿಯಾಸ್ ಚಂದ್ರು ಬಂಧಿಸಿದ್ದು, ಜಿಲ್ಲಾಧಿಕಾರಿ ಅವರನ್ನು 3ನೇ ಆರೋಪಿ ಎಂದು ಎಸಿಬಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ