
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಏ. 19): ಎಲ್ಲೆಡೆ ಧರ್ಮ ದಂಗಲ್ ಚರ್ಚೆ ತಾರಕಕ್ಕೇರಿದೆ. ಆದ್ರೆ ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆಯ ವದ್ದಿಕೆರೆಯಲ್ಲಿ (Vaddikere) ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಭಾವೈಕ್ಯತಾ ಜಾತ್ರೆ ಎಲ್ಲರ ಗಮನ ಸೆಳೆದಿದೆ.
ಕಣ್ಣಾಯಿಸಿದಷ್ಟು ದೂರಕ್ಕೆ ಕಾಣಸಿಗುವ ಜನಸ್ತೋಮ. ದೇವರ ದರ್ಶನಕ್ಕೆ ಜಾತಿ, ಧರ್ಮದ ಭೇದ ಭಾವವಿಲ್ಲದೇ, ಸರತಿ ಸಾಲಿನಲ್ಲಿ ನಿಂತಿರೊ ಭಕ್ತರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಶ್ರೀಸಿದ್ದೇಶ್ವರ ಸ್ವಾಮಿ ದೇಗುಲ (Sri Siddeshwara Temple).
ಹೌದು, ಭಕ್ತರ ಇಷ್ಟಾರ್ಥ ನೆರವೇರಿಸಲೆಂದೇ ಪಕ್ಕದ ರಾಜ್ಯವಾಗಿರೋ ಆಂಧ್ರಪ್ರದೇಶದಿಂದ (Andra Pradesh) ವದ್ದಿಕೆರೆಗೆ ಬಂದು ನೆಲೆನಿಂತಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಪವಾಡ ಅಪಾರ. ಈ ತಾಂತ್ರಿಕ ಯುಗದಲ್ಲೂ ವೈದ್ಯಕೀಯ ಲೋಕಕ್ಕೆ ಸವಾಲೆನಿಸಿರುವ ರೋಗರುಜಿನಗಳನ್ನು ಸ್ಥಳದಲ್ಲಿಯೇ ನಿವಾರಿಸುವ ಭವರೋಗ್ಯ ವೈದ್ಯ ಎನಿಸಿದ್ದಾರೆ. ಹೀಗಾಗಿ ಈ ಎರೆನಾಡ ದೊರೆಯನ್ನು ಹಿಂದು,ಮುಸ್ಲಿಂ ಎಂಬ ತಾರತಮ್ಯವಿಲ್ಲದೇ ಎಲ್ಲಾ ಧರ್ಮದವರು ಆರಾಧಿಸುತ್ತಾರೆ.
ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿವಿಧ ಹರಕೆ ಸಲ್ಲಿಸಲು ರಾಜ್ಯ ಹಾಗೂ ಹೊರರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಆದ್ರೆ ಈ ಬಾರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿದ್ದೇಶ್ವರ ಸ್ವಾಮಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಹೀಗಾಗಿ ಭಕ್ತರು ಸಕುಟುಂಬ ಸಮೇತರಾಗಿ ಆಗಮಿಸಿ ಬ್ರಹ್ಮ ರಥೋತ್ಸವ ವೀಕ್ಷಿಸಿ ಪುನೀತರಾದರು.
ಚಿತ್ರದುರ್ಗದ ಸಿದ್ದೇಶ್ವರ ರಥೋತ್ಸವ: ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ
ಇನ್ನು ಸಿದ್ದಪ್ಪನ ಜಾತ್ರೆ ವೇಳೆ ಪ್ರತಿವರ್ಷ ಅದ್ಬುತವೊಂದು ನಡೆಯಲಿದೆ. ಅದೇನಂದ್ರೆ ವರ್ಷದ 365 ದಿನಗಳಲ್ಲಿ ಎಂತಹ ಬರಗಾಲ ಬಂದರೂ ನೀರಿನಿಂದ ತುಂಬಿ ತುಳುಕುವ ಇಲ್ಲಿನ ಮಜ್ಜನಬಾವಿ ಜಾತ್ರೆಯ ಮೂರನೇ ದಿನ ಒಂದು ಹನಿ ನೀರಿಲ್ಲದಂತೆ ಬತ್ತಿ ಬರಿದಾಗಲಿದೆ. ಸತತ ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಉಂಡೆ, ಮಂಡೆ ಸಿದ್ದಭಕ್ತಿ ನಡೆಯಲಿದ್ದೂ, ಅಂದು ಭಕ್ತರು ಊಟೋಪಚಾರದ ವೇಳೆ ಅಂಟು ಮುಂಟು ಮಾಡುವರೆಂಬ ಹಿನ್ನೆಲೆಯಲ್ಲಿ ಬಾವಿಯಲ್ಲಿನ ಗಂಗೆ ಬತ್ತಲಿದೆ. ಮರುದಿನ ಮತ್ತೆ ಜಲ ಉಕ್ಕಿ ಬರಲಿದೆ ಎಂಬ ನಂಬಿಕೆ ಇಲ್ಲಿದೆ ಎಂದು ಹೇಳುತ್ತಾರೆ ಇಲ್ಲಿ ಅರ್ಚಕರು.
ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ಇಲ್ಲ, ಕಠಿಣ ಕಾನೂನು ಪಾಲಿಸಲು ಮುಂದಾದ ಮುಜರಾಯಿ ಇಲಾಖೆ
ಒಟ್ಟಾರೆ ಧರ್ಮ ದಂಗಲ್ ನಡುವೆಯೂ ಕೋಟೆನಾಡಿನ ವದ್ದಿಕೆರೆ ಸಿದ್ದೇಶ್ವರ ಸ್ವಾಮಿ ದೇಗುಲ ಭಾವೈಕ್ಯತಾ ಮಂದಿರ ಎನಿಸಿದೆ. ಇಲ್ಲಿನ ಭಕ್ತರು ಜಾತಿ, ಧರ್ಮ ಭೇದವನ್ನು ಮರೆತು ಭಕ್ತಿ ಭಾವದಿಂದ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸಾಮೂಹಿಕವಾಗಿ ಮಜ್ಜನ ಬಾವಿಯ ನೀರು ಹಾಕಿಸಿಕೊಂಡು ಪುನೀತರಾಗುವ ಮೂಲಕ ಧರ್ಮ ದಂಗಲ್ ಗೆ ಡೋಂಟ್ ಕೇರ್ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ