
ಚಿತ್ರದುರ್ಗ (ಡಿ.06): ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಡಿ.7 ಮತ್ತು 8 ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಪೊಲೀಸರನ್ನು ನೇಮಿಸಬೇಕು. ಜೊತೆಗೆ, ಪರೀಕ್ಷಾ ಕೇಂದ್ರದ 200 ಮೀ. ಸುತ್ತಲೂ 144 ಸೆಕ್ಷನ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಗೊಂದಲ ಹಾಗೂ ಅಕ್ರಮಗಳಿಗೆ ಎಡೆ ಮಾಡಿಕೊಡದಂತೆ ಪರೀಕ್ಷಾ ಕಾರ್ಯ ನಡೆಸಬೇಕು. ಪರೀಕ್ಷಾ ಸಂಬಂಧ ಕೆಪಿಎಸ್‌ಸಿ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ತಾಕೀತು ಮಾಡಿದರು.
ಮೊಬೈಲ್, ಬ್ಲೂಟೂತ್ ಮತ್ತು ಆಧುನಿಕ ಸಂವಹನದ ಉಪಕರಣ ಬಳಸಿ ಪರೀಕ್ಷಾ ಅಕ್ರಮ ಮಾಡುವುದನ್ನು ತಡೆಯಲು ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಬೇಕು. ಕೆಪಿಎಸ್‌ಸಿ ವತಿಯಿಂದ ತಪಾಸಣೆಗೆ ವ್ಯಕ್ತಿಗಳನ್ನು ನಿಯೋಜನೆ ಮಾಡುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಪಾಸಣೆಗಾಗಿ ಪ್ರತ್ಯೇಕ ತಂಡ ರಚಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಮಹಿಳಾ ಅಭ್ಯರ್ಥಿಗಳ ತಪಾಸಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಮಹಿಳಾ ಪೊಲೀಸರನ್ನು ತಪ್ಪದೇ ನೇಮಿಸಬೇಕು. ಅಕ್ರಮ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಪರೀಕ್ಷಾ ನಡೆಯುವ ಕೊಠಡಿಗಳಲ್ಲಿ ಸಿಸಿಟಿವಿ ಈಗಾಗಲೇ ಅಳವಡಿಸಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಪಿಡಿಒ ಪರೀಕ್ಷಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಬೆಂಗಳೂರು ಮೆಟ್ರೋ!
ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೂರಕವಾಗಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಖಜಾನೆ ಅಧಿಕಾರಿ, ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರು ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರದಲ್ಲಿ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಿ, ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು. ಪರೀಕ್ಷಾ ಕಾರ್ಯ ಮುಗಿದ ಬಳಿಕ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಅಂಚೆ ಕಚೇರಿಯ ಮೂಲಕ ಆಯೋಗಕ್ಕೆ ಸುರಕ್ಷಿತವಾಗಿ ತಲುಪಿಸಬೇಕು. ಪರೀಕ್ಷೆ ಶನಿವಾರ ಹಾಗೂ ಭಾನುವಾರ ನಡೆಯುವುದರಿಂದ ಎಲ್ಲಾ ಕೇಂದ್ರಗಳ ಬಳಿ ಇರುವ ಅಂಚೆ ಕಚೇರಿಯನ್ನು ತೆರೆದು, ಬಂಡಲ್‌ಗಳನ್ನು ಸ್ವೀಕರಿಸಬೇಕು ಎಂದು ಅಂಚೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರದ 40 ಕೇಂದ್ರಗಳಲ್ಲಿ ಪಿಡಿಓ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಒಟ್ಟು 14614 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಡಿ.7 ರಂದು ಮಧ್ಯಾಹ್ನ 2 ರಿಂದ 4 ಗಂಟೆ ರವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಡಿ.8 ರಂದು ಬೆಳಿಗ್ಗೆ 10 ಗಂಟೆಯಿಂದ 11.30 ವರೆಗೆ ಪತ್ರಿಕೆ-1ರ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ 4 ಗಂಟೆ ರವರೆಗೆ ಪತ್ರಿಕೆ-2ರ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ವಿಷಯಗಳ ಪರೀಕ್ಷೆಯ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದ ರೈತರಿಗೆ ಹೊಸ ಟ್ಯಾಕ್ಸ್; ಖನಿಜ ಹೊಂದಿರುವ ಭೂಮಿಗೆ ಇನ್ನು ತೆರಿಗೆ
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಮಾತನಾಡಿ, ಮಾರ್ಗಾಧಿಕಾರಿಗಳು, ಸೂಕ್ಷ್ಮ ವೀಕ್ಷಕರನ್ನು ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೂ ಈಗಾಗಲೇ ಎಲ್ಲಾ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಚಳ್ಳಕೆರೆ ತಹಸೀಲ್ದಾರ್ ರೆಹಮಾನ್ ಪಾಷ, ಡಿವೈಎಸ್‌ಪಿ ದಿನಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಜಿಲ್ಲಾ ಖಜನಾಧಿಕಾರಿ, ಅಂಚೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ