
ಹಾಸನ (ಜೂ.7): ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವು ಕಂಡ ಹಾಸನದ ಬೇಲೂರಿನ ಯುವಕ ಭೂಮಿಕ್‌ನ ತಂದೆ ಲಕ್ಷ್ಮಣ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಮುಂದುವರಿಸಿದ್ದಾರೆ. 11 ಜನರ ಸಾವಿಗೆ ಕಾರಣರಾದವರು ಸಿಎಂ ಹಾಗೂ ಡಿಸಿಎಂ. ಇವರೇ ದೊಡ್ಡ ಟೆರರಿಸ್ಟ್‌ಗಳಾಗಿದ್ದಾರೆ. ಅವರಿಗೆ ಆ ಸ್ಥಾನದಲ್ಲಿ ಕೂರೋ ಯೋಗ್ಯತೆಯೇ ಇಲ್ಲ ಎಂದು ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಮಗನ ಸಮಾಧಿಯ ಮೇಲೆ ಕಣ್ಣೀರಿಟ್ಟು ಗೋಳಾಡಿದ್ದ ಲಕ್ಷ್ಮಣ್, ಈ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರೋದು ಬೇಡ ಎಂದು ಹೇಳಿದ್ದರು. ಬಳಿಕ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಅವರು, 'ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಇವರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಅಲ್ಲಿದ್ದವರ ಕೈ ಕಾಲು ಹಿಡಿದು ಹೇಗೋ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂದು ಸರ್ಕಾರದ ವಿರುದ್ಧ ಮೃತ ಭೂಮಿಕ್ ತಂದೆ ಲಕ್ಷ್ಮಣ್ ಕಿಡಿ ಕಾರಿದ್ದಾರೆ.
'ಅದೇ ಅಂಬುಲೆನ್ಸ್ ಇದ್ದಿದ್ದರೆ ಮಗ ಖಂಡಿತಾ ಉಳಿಯುತ್ತಿದ್ದ. ಅವರ ಮಕ್ಕಳಿಗೆ ಹೀಗೆ ಆಗಿದ್ದರೆ ಅವರು ಫೋಟೊ ತೆಗೆಸಿಕೊಳ್ಳುತ್ತಿದ್ದರೇ? ಕಪ್ ಹಿಡಿದು ಎಂಜಾಯ್ ಮಾಡುತ್ತಿದ್ದರೇ? ಇದು ನನ್ನೊಬ್ಬನ ಕಣ್ಣೀರಲ್ಲ. ಇದು 11 ಜನ ಕುಟುಂಬ ಸದಸ್ಯರ ಕಣ್ಣೀರು. ಯಾರಿಗೂ ಈ ಸ್ಥಿತಿ ಬರೋದು ಬೇಡ. ಅವರ ತಪ್ಪು ಮುಚ್ಚಿಕೊಳ್ಳಲು ಪೊಲೀಸರ ಅಮಾನತು ಮಾಡಿದ್ದಾರೆ ಎಂದುಸ ಲಕ್ಷ್ಮಣ್ ಆರೋಪಿಸಿದ್ದಾರೆ.
ನಾನು ಮಗನಿಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದೆ. ಯಾವ ತಂದೆ ತಾಯಿಯು ಮಕ್ಕಳನ್ನ ಸಾಯಲಿ ಎಂದು ಕಳಿಸಲ್ಲ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದ ಕೆಲ ಕಮೆಂಟ್‌ಗೆ ಲಕ್ಷ್ಮನ್ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಮಗನಿಗೆ ಕ್ರಿಕೆಟ್ ಹುಚ್ಚಿರಲಿಲ್ಲ. ಕ್ರಿಕೆಟ್ ಆಡುತ್ತಿದ್ದ ಅಷ್ಟೇ. ನನ್ನ ಹೆಂಡತಿ ಪರಿಸ್ಥಿತಿ ಏನು, ನನ್ನ ಅಣ್ಣನ ಪರಿಸ್ಥಿತಿ ಏನು. ಸರ್ಕಾರ 11 ಜನರನ್ನ ಕೊಲೆ ಮಾಡಿದೆ. ಇವರೇ ದೊಡ್ಡ ಟೆರರಿಸ್ಟ್ ಗಳಾಗಿದ್ದಾರೆ. ಇಷ್ಟು ಅನಾಹುತ ಆದ ಮೇಲೂ ಇವರು ಫೋಟೊ ತೆಗೆಸಿಕೊಳ್ತಾರಲ್ಲ ಅಂದರೆ ಇದು ಎಷ್ಟು ನ್ಯಾಯ? ನಮ್ಮಂತವರ ಮಕ್ಕಳು ಬೀದಿಯಲ್ಲಿ ಸಾಯುತ್ತಿದ್ದರೆ. ಇವರು ಎಂಜಾಯ್ ಮಾಡ್ತಾರೆ
ಅವರ ಮಕ್ಕಳು ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡುತ್ತಿದ್ದರು ಎಂದು ಕಿಡಿಕಿಡಿಯಾಗಿದ್ದಾರೆ. ಆದರೆ, ನಾವು ಹೇಗೆ ಸಮಾಧಾನ ಮಾಡಿಕೊಳ್ಳೋದು ಹೇಳಿ ಮಗನ ನೆನೆದು ತಂದೆ ಕಣ್ಣೀರಿಟ್ಟಿದ್ದಾರೆ.
ನನ್ನ ಮಗನ ಸಾವಿಗೆ ಸರ್ಕಾರವೇ ಕಾರಣ: ಇದೇ ಕಾಲ್ತುಳಿತದಲ್ಲಿ ಯಾದಗಿರಿಯ ಯುವಕ ಶಿವಲಿಂಗ ಕೂಡ ಸಾವು ಕಂಡಿದ್ದ. ಮೃತ ಶಿವಲಿಂಗ ಮನೆಯಲ್ಲಿ ನಿರವ ಮೌನ ಆವರಿಸಿದ್ದು, ಬೆಳೆದ ಮಗನನ್ನು ಕಳೆದುಕೊಂಡು ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಮಗನನ್ನು ನೆನೆದು ಪೋಷಕರು ದಿನವಿಡೀ ಕಣ್ಣೀರು ಹಾಕುತ್ತಿದ್ದಾರೆ.
ಇದರ ನಡುವೆ ಸರ್ಕಾರದ ವಿರುದ್ಧ ಮೃತ ಶಿವಲಿಂಗ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ವಿಜಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನನ್ನ ಮಗನ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಸಿಎಂ, ಡಿಸಿಎಂ ಕೆಳಗಿಯಬೇಕು, ಈ ಸರ್ಕಾರವೇ ಕೆಳಗಿಯಬೇಕು. ಈ ಸರ್ಕಾರ ಅಮಾಯಕ, ಬಡ ಮಕ್ಕಳ ಜೀವ ತೆಗೆದುಕೊಂಡಿದೆ. ನಮ್ಮ ಮಗನ ಜೀವಕ್ಕೆ ಬೆಲೆನೇ ಇಲ್ವಾ ಎಂದು ಮೃತ ಶಿವಲಿಂಗ ಪೋಷಕರ ಕಣ್ಣೀರಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ