All India Sahitya Parishad: ಸಾಹಿತ್ಯ ಉಳಿವಿಗೆ ಹುಟ್ಟಿಕೊಂಡಿದ್ದೇ ಅಖಿಲ ಭಾರತ ಸಾಹಿತ್ಯ ಪರಿಷದ್ | ನಾಲ್ಕನೇ ರಾಜ್ಯ ಅಧಿವೇಶನ ದಾವಣಗೆರೆಯಲ್ಲಿ!

Kannadaprabha News   | Kannada Prabha
Published : Jun 07, 2025, 12:25 PM IST
akhila bharat sahitya parishad

ಸಾರಾಂಶ

ಭಾರತೀಯ ಸಾಹಿತ್ಯದ ಮೇಲಾದ ಪಾಶ್ಚಾತ್ಯ ದಾಳಿಗಳು, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಹುಟ್ಟು ಮತ್ತು ಬೆಳವಣಿಗೆ, ಸ್ವತ್ವದ ಸಾಹಿತ್ಯದ ಪ್ರಸ್ತುತತೆ.

-ದಿವ್ಯಾ ಹೆಗಡೆ ಕಬ್ಬಿನಗದ್ದೆ

ಸಾಹಿತ್ಯ ಅಥವಾ ಕಾವ್ಯದ ಉದ್ದೇಶವೇನು? ಅದನ್ನು ರಚಿಸುವುದು ಏಕೆ? ಸಾಹಿತ್ಯಕ್ಕೆ ಸಾಮಾಜಿಕ ಹೊಣೆಗಾರಿಕೆ ಇದೆಯೇ? ಅದರ ಗುರಿ ಸಮಾಜ ಸುಧಾರಣೆಯೇ? ರಸೋಸ್ಪತ್ತಿಯೇ? ಆನಂದವೇ? ಜನಪ್ರಿಯತೆಯೇ? ವ್ಯವಹಾರ ಜ್ಞಾನವೇ?.. ಹೀಗೆ ಸಾಲು ಸಾಲು ಪ್ರಶ್ನೆಗಳು ಶತಮಾನಗಳಿಂದಲೂ ಜನರನ್ನು ಕಾಡಿವೆ. ಸಮಾಜವನ್ನು ನೈತಿಕತೆಯ ಹಾದಿಯಲ್ಲಿ ಮುನ್ನಡೆಸುವುದು ಸಾಹಿತ್ಯದ ಗುರಿ. ಮನುಷ್ಯನ ಬದುಕಿಗೆ ಮೇಲ್ಪಂಕ್ತಿ ಹಾಕಿಕೊಡುವುದು ಸಾಹಿತ್ಯದ ಜವಾಬ್ದಾರಿ ಎಂಬ ನಿರೀಕ್ಷೆಯಿಟ್ಟುಕೊಂಡು, ಸಮಾಜ ಮತ್ತು ಸಾಹಿತ್ಯವನ್ನು ಮುಖಾಮುಖಿಯಾಗಿಸುವ ಪ್ರಯತ್ನಗಳು ಇನ್ನಿಲ್ಲದೆ ನಡೆದಿವೆ. ಮುಮ್ಮಟ, ಭಾಮಹ, ಶ್ರೀವಿಜಯ ಮೊದಲಾದ ಲಾಕ್ಷಣಿಕರು ಕೀರ್ತಿ, ಧನಾರ್ಜನೆ, ಅಮಂಗಳ ನಿವಾರಣೆ, ಪುರುಷಾರ್ಥಗಳ ಸಿದ್ಧಿ ಮೊದಲಾದ ಪ್ರಯೋಜನಗಳನ್ನು ತಿಳಿಸಿದರೆ, ಭಟ್ಟನಾಯಕನಿಂದ ಹಿಡಿದು ಆಧುನಿಕ ಕಾಲದ ಅನೇಕ ಸಾಹಿತಿಗಳವರೆಗೂ ಅನೇಕರ ಅಭಿಪ್ರಾಯ ಸಾಹಿತ್ಯದ ಉದ್ದೇಶ ಕೇವಲ ರಸೋತ್ಪತ್ತಿ.

ಈ ವಾದಗಳು ಏನೇ ಇದ್ದರೂ ಭಾರತೀಯ ಸಾಹಿತ್ಯದ ಇತಿಹಾಸವನ್ನು ನೋಡಿದರೆ, ಅದು ಈ ಎಲ್ಲ ಉದ್ದೇಶಗಳನ್ನು ಈಡೇರಿಸಿದ ಉದಾಹರಣೆಗಳೇ ಸಿಗುತ್ತವೆ. ಭಾರತದ ಜೀವಾಳವೇ ಆಗಿರುವ ವೇದವಾಙ್ಮಯ ಇಡೀ ಜಗತ್ತಿಗೆ ಜ್ಞಾನ, ಮೌಲ್ಯ, ನೀತಿಗಳ ಬೆಳಕು ಕೊಟ್ಟಿದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಅಪಾರ ಕಾವ್ಯಸಿರಿಯನ್ನು ಮೈದುಂಬಿಕೊಂಡದ್ದಲ್ಲದೆ, ಇಂದಿಗೂ ಸಮಾಜಕ್ಕೆ ಆದರ್ಶದ ಸೆಲೆಯಾಗಿ ನಿಂತಿವೆ. ಮನೆಮನೆಗಳಲ್ಲಿ ಮಾತೆಯರ ಬಾಯಲ್ಲಿ ನಲಿದಾಡುತ್ತಿದ್ದ ಹಾಡುಗಬ್ಬಗಳು ಜೀವನಸ್ಫೂರ್ತಿಯ ಬತ್ತದ ಒರತೆಯಾಗಿ ಸಾಗಿಬಂದಿವೆ. ಭಾರತೀಯ ಸಾಹಿತ್ಯ ಎಂದಿನಿಂದಲೂ ಸಮಾಜಕ್ಕೆ ಹಿತವನ್ನೇ ನೀಡುತ್ತ ಬಂದಿರುವುದು ಸುಸ್ಪಷ್ಟ.

ಭಾರತೀಯ ಸಾಹಿತ್ಯಕ್ಕೆ ಮುಲ್ಲರ್‌ ಏಟು

ಆದರೆ ವಿಚಿತ್ರ ಕಾಲಘಟ್ಟವೊಂದರಲ್ಲಿ ಭಾರತೀಯ ಸಾಹಿತ್ಯಕ್ಕೆ ಮರ್ಮಾಘಾತವೆಸಗುವ ಬೆಳವಣಿಗೆಗಳು ನಡೆದವು. ಭಾರತದ್ದೆಲ್ಲವೂ ಗೊಡ್ಡು ಪುರಾಣ, ಕಾಲ್ಪನಿಕ, ಅವೈಜ್ಞಾನಿಕ ಎಂಬ ವಾದಗಳು ಹುಟ್ಟಿಕೊಂಡವು. ವೇದಗಳ ಮೂಲಸ್ತಂಭದ ಮೇಲೆಯೇ ಭಾರತ ನಿಂತಿದೆ ಎಂಬ ಸತ್ಯವರಿತ ಮ್ಯಾಕ್ಸ್ ಮುಲ್ಲರ್‌ನಂಥ ಪಾಶ್ಚಾತ್ಯ ವಿದ್ವಾಂಸರು ಇಲ್ಲಿನ ಸಾಹಿತ್ಯ ಅಪ್ರಯೋಜಕ ಎಂಬುದನ್ನು ಸಾಧಿಸುವ ಉದ್ದೇಶದಿಂದಲೇ ವೇದಾಧ್ಯಯನಕ್ಕೆ ತೊಡಗಿದರು. ನಿಧಾನವಾಗಿ ಸಮಾಜದಲ್ಲಿ ಸಂಸ್ಕೃತ ವಿರೋಧವಾದವನ್ನು ಬಿತ್ತಿದರು. ವೇದವ್ಯಾಸ ವ್ಯಕ್ತಿಯಲ್ಲ, ಪಂಥ ಎಂಬ ತರ್ಕಗಳು ಹುಟ್ಟಿದವು. ರಾಮಾಯಣ ಇಲಿಯಡ್ ಕಾವ್ಯದ ಕೃತಿಚೌರ್ಯ, ಮಹಾಭಾರತ ಕ್ರೈಸ್ತ ಮತದಿಂದ ಪ್ರಭಾವಿತ ಎಂಬ ಕಥೆಗಳು ಹೆಣೆದುಕೊಂಡವು. ಆರ್ಯರ ಆಕ್ರಮಣವಾದ, ದ್ರಾವಿಡರ ಪ್ರತ್ಯೇಕತಾವಾದಗಳು ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಕಂದಕ ಸೃಷ್ಟಿಗೆ ಯತ್ನಿಸಿದವು. ಯಾವ ಭಾಷೆ ಶ್ರೇಷ್ಠ, ಯಾವುದು ಕನಿಷ್ಠ, ಯಾವುದು ಹೊಸತು, ಯಾವುದು ಹಳತು ಎಂಬ ಅನಗತ್ಯ ಚರ್ಚೆಗಳು ಭಾಷೆ ಮತ್ತು ಸಾಹಿತ್ಯ ಪ್ರಪಂಚದಲ್ಲಿ ಪಲ್ಲಟಗಳನ್ನು ಸೃಷ್ಟಿಸಿದವು.

ಭಾರತೀಯ ಸಾಹಿತ್ಯ ಪರಿಷದ್‌ ಹುಟ್ಟು

ಭಾರತೀಯ ಸಾಹಿತ್ಯ ಇಂಥ ಒಳ ಏಟುಗಳಿಗೆ ಮೈಯ್ಯೊಡ್ಡುತ್ತಿದ್ದ ದಿನಗಳಲ್ಲೇ ರಾಷ್ಟ್ರೀಯತೆಯ ಏಕಛತ್ರದಡಿ ಸಾಹಿತ್ಯ ಮತ್ತು ಭಾಷೆಗಳನ್ನು ಒಗ್ಗೂಡಿಸುವ ವಿಶಾಲ ದೃಷ್ಟಿಯಿಂದ ಹುಟ್ಟಿಕೊಂಡ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್. 1966ರಲ್ಲಿ ದೆಹಲಿಯಲ್ಲಿ ಆರಂಭವಾಗಿ, ಈಗ ದೇಶಾದ್ಯಂತ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ. ಕಳೆದೊಂದು ದಶಕದಿಂದ ಕರ್ನಾಟಕದಲ್ಲಿ ಕಾರ್ಯ ಆರಂಭಿಸಿರುವ ಅಭಾಸಾಪ ಎಲ್ಲ ಜಿಲ್ಲೆಗಳನ್ನೂ ತಲುಪಿ, ಭಾರತದ ಅಂತಃಸತ್ವವನ್ನು ಜಾಗೃತಗೊಳಿಸುವ ಸಾಹಿತ್ಯಸೃಷ್ಟಿಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ. ಸಾಹಿತ್ಯವೆಂದರೆ ಬರಿಯ ಸಂಘರ್ಷ ಸೃಷ್ಟಿಸುವ ಭಾಷಣ, ಬರಹಗಳು ಎಂಬ ಕಾಲಘಟ್ಟದಲ್ಲಿ ಸಾಹಿತ್ಯವೆಂಬುದು ಅಂತರಂಗದ ಬೆಳಕು, ಅದು ಒಡೆಯುವ ವಿಕೃತಿಯಲ್ಲ; ಒಗ್ಗೂಡಿಸುವ ಶಕ್ತಿ ಎಂಬುದನ್ನು ಸಾರುತ್ತಾ ಬಂದಿದೆ. ಬಹುತ್ವದ ಅಭಿವ್ಯಕ್ತಿಯಲ್ಲಿ ಏಕತೆಯನ್ನು ಕಾಣುವ, ಸಾಹಿತ್ಯಯಾತ್ರೆಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಮಹತ್ತರ ಹೊಣೆ ಹೊತ್ತು ಹೆಜ್ಜೆಯಿಡುತ್ತಿದೆ.

ರಾಷ್ಟ್ರಮಟ್ಟದ ಅಧಿವೇಶನ, ರಾಜ್ಯಮಟ್ಟದ ಸಮ್ಮೇಳನ, ಕಾವ್ಯ-ನಾಟಕ ಕಮ್ಮಟ, ಸಾಹಿತ್ಯ ಕಾರ್ಯಾಗಾರ, ಕಥೆ-ಕವಿತಾ ಗೋಷ್ಠಿಗಳ ಮೂಲಕ ಭಾರತೀಯ ಮನಸ್ಸುಗಳನ್ನು ಬೆಸೆಯುವ ಕೆಲಸದಲ್ಲಿ ತೊಡಗಿದೆ. ಲಿಂಗ, ವಯಸ್ಸು, ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಸಾಹಿತ್ಯಸೂತ್ರದಲ್ಲಿ ಜೋಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಮಹಿಳಾ ಪ್ರಕಾರ, ಮಕ್ಕಳ ಪ್ರಕಾರ, ವಿದ್ಯಾರ್ಥಿ ಪ್ರಕಾರ, ರಾಜ್ಯ-ಜಿಲ್ಲೆ-ತಾಲೂಕು ಮಟ್ಟದಲ್ಲಿ ಸಮಿತಿಗಳು, ಗ್ರಾಮ-ಬಡಾವಣೆಗಳಲ್ಲಿ ಸಾಹಿತ್ಯಕೂಟಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳ ಸಾಹಿತ್ಯಾಸಕ್ತ ಅಧ್ಯಾಪಕರ ನಡುವೆ ಸಹಿತಂ ಪ್ರಕಾರ ವಿಶಿಷ್ಟವಾಗಿ ಕಾರ್ಯಾಚರಿಸುತ್ತಿದೆ. ಭಾರತದ ಮೂಲಗ್ರಂಥಗಳ ಮೇಲೆ ವಿವರವಾದ ಚರ್ಚೆ ನಡೆಸುವ ಸ್ವಾಧ್ಯಾಯ ಪ್ರಕಾರದ ಅಧ್ಯಯನ ಶಿಬಿರಗಳು ಮೌನವಾಗಿ ಸಾಹಿತ್ಯಸೇವೆಯಲ್ಲಿ ತೊಡಗಿವೆ. ಇದುವರೆಗೆ ಸುಮಾರು 350ಕ್ಕೂ ಅಧಿಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಅಭಾಸಾಪ ಯಶಸ್ವಿಯಾಗಿದೆ.

ಮೌಲ್ಯಯುತ ಕಾರ್ಯಕ್ರಮಗಳು

ಸಾಹಿತ್ಯಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಮತ್ತು ಕಿರಿಯ ಸಾಹಿತಿಗಳನ್ನು ಗುರುತಿಸಿ ಪ್ರತಿ ವರ್ಷ ಆದಿಕವಿ ಮತ್ತು ವಾಗ್ದೇವಿ ಪುರಸ್ಕಾರ ನೀಡಿ ಗೌರವಿಸುತ್ತಾ ಬರಲಾಗಿದೆ. ಯಾವುದೇ ಅರ್ಜಿ ಅಥವಾ ಶಿಫಾರಸ್ಸಿಗೆ ಅವಕಾಶವಿಲ್ಲದೆ, ಕೇವಲ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಂಘಟನೆಯೇ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿರುವುದು ರಾಜ್ಯದ ಗಮನ ಸೆಳೆದಿದೆ. ಅಭಾಸಾಪ ಪ್ರಕಾಶನ ಸಂಸ್ಥೆಯಿಂದ 120ಕ್ಕೂ ಹೆಚ್ಚು ಮೌಲಿಕ ಕೃತಿಗಳು ಬೆಳಕು ಕಂಡಿವೆ. 24 ಭಾಷೆಗಳ ಕವಿಗಳನ್ನೊಳಗೊಂಡ ಬಹುಭಾಷಾ ಗೋಷ್ಠಿ, ಮಕ್ಕಳಿಗಾಗಿ ಆಯೋಜಿಸಿದ್ದ ಪಂಚತಂತ್ರ ಕಥಾವಾಚನ ಸ್ಪರ್ಧೆ, ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮ ಅಪೂರ್ವ ಯಶಸ್ಸು ಕಂಡಿವೆ. ವರಕವಿ ಬೇಂದ್ರೆಯವರ ‘ನಾಕುತಂತಿ’ ಕವನ ಸಂಕಲನಕ್ಕೆ 60 ವರ್ಷ ಪೂರ್ಣವಾದ ನಿಮಿತ್ತ ವರ್ಷವಿಡೀ ಆಯೋಜಿಸುತ್ತಿರುವ ‘ನಾಕುತಂತಿ ಷಷ್ಟಿಪೂರ್ತಿ’ ಕಾರ್ಯಕ್ರಮದಂಥ ವಿನೂತನ ಪ್ರಯತ್ನಗಳು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿವೆ.

ಸಾಹಿತ್ಯದಲ್ಲಿ ‘ಸ್ವತ್ವ’

ಭಾರತೀಯತೆ ಮತ್ತು ಸಾಹಿತ್ಯದ ಅವಿನಾಭಾವ ನಂಟನ್ನು ಎತ್ತಿ ತೋರಿಸುವ ಗುರಿಯಿಂದ ಅಭಾಸಾಪ ಕರ್ನಾಟಕ ಇದುವರೆಗೆ 3 ರಾಜ್ಯಮಟ್ಟದ ಅಧಿವೇಶನಗಳನ್ನು ಆಯೋಜಿಸಿದೆ. ‘ಕೌಟುಂಬಿಕ ಮೌಲ್ಯ’, ‘ಸಾಹಿತ್ಯದಲ್ಲಿ ಭಾರತೀಯತೆ’, ‘ಸ್ವರಾಜ್ಯ 75’ ಎಂಬ ವಿಷಯಾಧರಿತವಾಗಿ ನಡೆದ ಈ ಅಧಿವೇಶನಗಳಲ್ಲಿ ಡಾ। ದೊಡ್ಡರಂಗೇಗೌಡರಂತಹ ಕನ್ನಡದ ಮೇರು ಸಾಹಿತಿಗಳು ಅಧ್ಯಕ್ಷತೆ ವಹಿಸಿದ್ದಾರೆ. ಈ ವರ್ಷ ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ಅಪರೂಪದ ವಿಷಯದ ಮೇಲೆ ಜೂ.7 ಮತ್ತು 8ರಂದು ದಾವಣಗೆರೆಯಲ್ಲಿ 4ನೆಯ ಅಧಿವೇಶನ ನಡೆಯಲಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಅಭಾಸಾಪ ಕಾರ್ಯಕರ್ತರು ರಾಜ್ಯಾದ್ಯಂತ ‘ಸ್ವತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನ’ ಕೈಗೊಂಡಿದ್ದು, 100ಕ್ಕೂ ಅಧಿಕ ಸಾಹಿತಿಗಳನ್ನು ಸಂಪರ್ಕಿಸಿದ್ದಾರೆ. ‘ಸ್ವತ್ವ’ ಎಂದರೆ ನಮ್ಮತನ, ಸ್ವಂತಿಕೆ. ನಾಡು, ನುಡಿ, ಅಸ್ಮಿತೆಯ ಉಳಿವಿಗಾಗಿ ಹೋರಾಟ ಮಾಡಬೇಕಾದ ಈ ದಿನಗಳಲ್ಲಿ ಸಾಹಿತ್ಯದ ಮೂಲಕ ನಮ್ಮತನವನ್ನು ಅಭಿವ್ಯಕ್ತಿಸುತ್ತಿರುವ ಸಾಹಿತಿಗಳನ್ನು ಭೇಟಿಯಾಗಿ, ಸಂಘಟಿಸುತ್ತಿರುವುದು ಸ್ವತ್ವದ ಜಾಗೃತಿಯಲ್ಲಿ ಬಹುದೊಡ್ಡ ಹೆಜ್ಜೆ ಎನ್ನಬಹುದು. ಜೂ.7, 8ರಂದು ನಡೆಯಲಿರುವ ಅಧಿವೇಶನವೂ ಸ್ವತ್ವದ ಅಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲೇ ಆಯೋಜನೆಯಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ವಿದ್ವಾಂಸರು, ಸಾಹಿತಿಗಳು, ಓದುಗರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಚಾರಗೋಷ್ಠಿ, ಕವನ ವಾಚನ, ಹರಟೆ ಮೊದಲಾದವುಗಳ ಮೂಲಕ ಸಂಪೂರ್ಣ ‘ಸ್ವತ್ವ’ದ ವಾತಾವರಣ ನಿರ್ಮಾಣವಾಗಲಿದೆ.

ಪರಸ್ಪರ ಭಾಷಾ ಸಂಘರ್ಷ, ಪ್ರಾದೇಶಿಕ ವೈಷಮ್ಯ, ಅಸ್ಮಿತೆಗಾಗಿ ಹೋರಾಟಗಳು ತೀವ್ರವಾಗುತ್ತಿರುವ ದಿನಮಾನದಲ್ಲಿ ನಮ್ಮತನವನ್ನು ಕಾಪಿಟ್ಟುಕೊಂಡು, ರಾಷ್ಟ್ರದ ಹಿತಕ್ಕಾಗಿ ಒಗ್ಗೂಡುವ ಅನಿವಾರ್ಯತೆ ಎಂದಿಗಿಂತ ಹೆಚ್ಚಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನಂತಹ ಸಂಘಟನೆಗಳು ಸದ್ದಿಲ್ಲದೆ ಅಂಥ ಕಾರ್ಯದಲ್ಲಿ ಮಗ್ನವಾಗಿವೆ. ‘ವಿಶ್ವದೊಳನುಡಿಯನ್ನು ಕನ್ನಡಿಸುತಿಹನಿಲ್ಲಿ ಅಂಬಿಕಾತನಯನಿವನು’ ಎಂದಿದ್ದರು ಬೇಂದ್ರೆ. ಭಾರತೀಯ ಚಿಂತನೆಯನ್ನು ಯಾವ ಭಾಷೆಯಲ್ಲಿ ವ್ಯಕ್ತಿಪಡಿಸಿದರೂ ಅದು ವಿಶ್ವದ ಒಳಿತನ್ನೇ ಬಯಸುತ್ತದೆ ಎಂಬುದು ಸತ್ಯ. ಹಾಗಾಗಿ ಭಾಷೆಯಿಂದ ದೇಶ, ದೇಶದಿಂದ ವಿಶ್ವದ ಒಳಿತನ್ನು ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆಯಿಡೋಣ. ಸಂಘಟನೆಯಿಂದ ಅಂಥ ಶಕ್ತಿ ಹೆಚ್ಚಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೇರೆಯದನ್ನು ಬಿಟ್ಟು, 120 ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಕಡಿದಿದ್ದು ಯಾಕೆ? ಅನಂತಮೂರ್ತಿ ಹೆಗಡೆ ಆಕ್ರೋಶ
ಗಾಂಧೀಜಿ ಕೊಡುಗೆ ಬಗ್ಗೆ ಬಿಜೆಪಿಯವರಿಗೆ ಜ್ಞಾನ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ