
ಬೆಂಗಳೂರು (ಜೂ.5): ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಸ್ಮಶಾನ ಮಾಡಿದ್ದರಲ್ಲಿ ಎಲ್ಲದ್ದಕ್ಕಿಂತ ಮುಖ್ಯ ಪಾತ್ರವಿರೋದು ರಾಜ್ಯ ಸರ್ಕಾರದ್ದು. ಆದರೆ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯತನ 11 ಜನ ಅಮಾಯಕರ ಸಾವಿಗೆ ಕಾರಣವಾಗಿದೆ.
ಘಟನೆ ನಡೆದ ದಿನ ಪ್ರಕರಣದ ಬಗ್ಗೆ ಅಷ್ಟೇನೂ ಗಂಭೀರವಾಗಿಲ್ಲದ ಸಿಎಂ ಸಿದ್ಧರಾಮಯ್ಯ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದ್ದರು. ಆದರೆ, ಗುರುವಾರ ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿ ಪ್ರಕರಣದ ಗಂಭೀರತೆಯ ಬಗ್ಗೆ ಸರ್ಕಾರಕ್ಕೆ ಉತ್ತರ ಕೊಡಲೂ ಸಾಧ್ಯವಾಗದಂಥ ಪ್ರಶ್ನೆಗಳನ್ನು ಎತ್ತಿದಾಗ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಗುರುವಾರದ ಕ್ಯಾಬಿನೆಟ್‌ನಲ್ಲಿ ಇದರ ಬಗ್ಗೆಯೇ ತೀವ್ರ ಚರ್ಚೆಯಾದ ಬಳಿಕ ರಾತ್ರಿಯ ವೇಳೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದರು.
ಪ್ರಮುಖವಾಗಿ ಇಡೀ ಪ್ರಕರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ಸಮಿತಿ ರಚನೆ ಮಾಡಿ ತನಿಖೆ ನಡೆಸಲಿದೆ. 30 ದಿನಗಳ ಒಳಗಾಗಿ ಇದರ ವರದಿ ನೀಡಬೇಕು ಎಂದು ತಿಳಿಸಲಾಗಿದೆ. ಅದರೊಂದಿಗೆ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಡಿಎನ್‌ಎಯ ಹಿರಿಯ ಅಧಿಕಾರಿಗಳ ಬಂಧನಕ್ಕೆ ಒಪ್ಪಿಗೆ ನೀಡಲಾಗಿದೆ. ಕೊನೆಗೆ ಬೆಂಗಳೂರು ಕಮೀಷನರ್ ಬಿ. ದಯಾನಂದ್ ಸೇರಿದಂತೆ ಕಬ್ಬನ್ ಪಾರ್ಕ್ ಹಾಗೂ ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ನಿರ್ಧಾರ ತಿಳಿಸಲಾಗಿದೆ.
ಇದರ ನಡುವೆ ಜನರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಸರಿ. ಆದರೆ, ಇಡೀ ಕಾರ್ಯಕ್ರಮ ಅಸ್ತವ್ಯಸ್ಥಕ್ಕೆ ಕಾರಣವಾಗಿದ್ದೇ ರಾಜಕಾರಣಿಗಳು. ವಿಧಾನಸೌಧದ ಎದುರು ಕಾರ್ಯಕ್ರಮ ಇದ್ದ ಸಲುವಾಗಿಯೇ ಹೆಚ್ಚಿನ ಪೊಲೀಸರು ಅಲ್ಲಿ ನಿಯೋಜನೆಯಾಗಿದ್ದರು. ಇದರಿಂದಾಗಿ ಚಿನ್ನಸ್ವಾಮಿ ಬಳಿಕ ಭದ್ರತೆಗೆ ಪೊಲೀಸರೇ ಇದ್ದರಿಲಿಲ್ಲ. ಇದು ರಾಜ್ಯ ಸರ್ಕಾರ ಜನರಿಗೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ.
ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಕೊಟ್ಟಂತೆ ಆಗಿದೆ. ಇಡೀ ಘಟನೆಗೆ ಕಾರಣವಾದ ರಾಜಕಾರಣಿಗಳನ್ನು ತಲೆದಂಡ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಹಾಗೂ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಹಾಗೂ ಗೃಹ ಇಲಾಖೆಯನ್ನು ಸರ್ಮಥವಾಗಿ ನಿಭಾಯಿಸಲು ಸಾಧ್ಯವಾಗದ ಗೃಹ ಸಚಿವ ಪರಮೇಶ್ವರ್ ಅವರ ರಾಜೀನಾಮೆ ಯಾವಾಗ ಪಡೆಯುತ್ತೀರಿ ಎಂದು ಸಿಎಂಗೆ ಜನ ಪ್ರಶ್ನೆ ಮಾಡಿದ್ದಾರೆ.
'ಯಾವ್ ಸೀಮೆ ನ್ಯಾಯ ಗುರು ಇದು ಅಮಾಯಕ ಪೊಲೀಸ್ ಅಮಾನತು ಮಾಡಿ ತಾವು ತಪ್ಪಿಸ್ಕೊತಿದಾರೆ first ನಾಲಾಯಕ್ ಗೃಹ ಮಂತ್ರಿ ನಾ ಸಸ್ಪೆಂಡ್ ಮಾಡ್ರಿ ತಾಕತಿದ್ರೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಮರ್ಯಾದೆ ಇದ್ರೆ ಮುಖ್ಯ ಮಂತ್ರಿ ಉಪ ಮುಖ್ಯ ಮಂತ್ರಿ ಇಬ್ಬರು ರಾಜಿನಾಮೆ ಕೊಡಿ. ಮೊದಲು ತನಿಖೆ ಆಗಬೇಕಾಗಿದ್ದು ನಿಮ್ಮ ಮೇಲೆ..' ಎಂದು ಬರೆದುಕೊಂಡಿದ್ದಾರೆ.
'ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿಲ್ಲ. ಪೊಲೀಸ್ ಪಡೆಗೆ ಅಮಾನತು ಮಾಡುವ ಅಧಿಕಾರವಿದ್ದರೆ, ಇಡೀ ಪರಿಸ್ಥಿತಿಯನ್ನೇ ಬದಲಾಯಿಸಬಹುದಿತ್ತು. ತುಂಬಾ ದುರದೃಷ್ಟಕರ, ಇಷ್ಟೊಂದು ಶ್ರಮಿಸುವ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ನಮ್ಮ ನಾಯಕರು ನಿಜವಾಗಿಯೂ ನಿಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತಾರೆಯೇ? ಹಾಗೇನಾದರೂ ಇದ್ದರೆ ಅವರಿಗೆ ಏನು ಶಿಕ್ಷೆ?? ಇದು ಅಭಿಮಾನಿಗಳು, ಸರ್ಕಾರ ಮತ್ತು ಕೆಎಸ್‌ಸಿಎಯ ಸಾಮೂಹಿಕ ತಪ್ಪು ಎಂದು ನಾನು ಭಾವಿಸುತ್ತೇನೆ. ಆದರೆ ಶಿಕ್ಷೆ ಪೊಲೀಸರಿಗೆ ಮಾತ್ರ? ಕರ್ನಾಟಕದ ಜನರು ಮೂರ್ಖರೇ??' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
'ಇವರು ಹೇಳಿದ್ರು ಇವಾಗ ಬೇಡ ಅಂತಾ,ಇವರ ಮಾತು ಮೀರಿ ವಿಜಯೋತ್ಸವ ಮಾಡಿದ್ದು ಈ ಕಿತ್ತೋದ್ ಕಾಂಗ್ರೇಸ್ ಸರಕಾರ, ಮೊದಲು ಈ ಕಾಂಗ್ರೇಸ್ ಸರಕಾರದ ಮೇಲೆ FIR ಹಾಕಿ..' ಎಂದು ಮತ್ತೊಬ್ಬರು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ