Chinnaswamy Stampede: ಸಿಐಡಿಯಿಂದ 11 ಮಂದಿಯ ಸಾವಿನ ಪ್ರಕರಣದ ತನಿಖೆ ಆರಂಭ!

Kannadaprabha News   | Kannada Prabha
Published : Jun 08, 2025, 04:55 AM IST
Bengaluru stampede case

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ಕೆಎಸ್‌ಸಿಎ ಮತ್ತು ಆರ್‌ಸಿಬಿಗೆ ನೋಟಿಸ್ ಜಾರಿ ಮಾಡಲು ಸಿಐಡಿ ಮುಂದಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ಸೋಮವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಬೆಂಗಳೂರು (ಜೂ.8): ಹನ್ನೊಂದು ಮಂದಿ ಆರ್‌ಸಿಬಿ ಅಭಿಮಾನಿಗಳನ್ನು ಬಲಿ ಪಡೆದ, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಹಿಂದಿನ ಕಾರಣಕರ್ತರ ಪತ್ತೆಯ ಅಖಾಡಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಅಧಿಕಾರಿಗಳು ಶನಿವಾರ ಅಧಿಕೃತವಾಗಿ ಪ್ರವೇಶಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಬಳಿಕ ಪ್ರಕರಣವನ್ನು ಶುಕ್ರವಾರ ಸಂಜೆ ಸಿಐಡಿಗೆ ಹಸ್ತಾಂತರಿಸಿದರು. ಅದರಂತೆ ಇದೀಗ ದುರಂತದ ಹಿಂದಿನ ಕಾರಣಕರ್ತರ ಬೇಟೆ ಕಾರ್ಯವನ್ನು ಸಿಐಡಿ ಶುರು ಮಾಡಿದೆ. ಇದಕ್ಕಾಗಿ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ಅವರ ಮೇಲುಸ್ತುವಾರಿಯಲ್ಲಿ ಎಸ್ಪಿಗಳಾದ ಶುಭಾನ್ವಿತಾ ಹಾಗೂ ಯತೀಶ್ ಸಾರಥ್ಯದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಪ್ರಕರಣವು ಅಧಿಕೃತವಾಗಿ ವರ್ಗಾವಣೆಯಾದ ಬೆನ್ನಲ್ಲೇ ತನಿಖೆಗಿಳಿದ ಸಿಐಡಿ, ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದ 7, 19, 18, 16 ಹಾಗೂ 21 ಸೇರಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗೇಟ್‌ಗಳ ಬಳಿ ತೆರಳಿ ತಪಾಸಣೆ ನಡೆಸಿತು. ಬಳಿಕ ಕ್ರೀಡಾಂಗಣ ಹಾಗೂ ಅದರ ಸುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಕಬ್ಬನ್ ಪಾರ್ಕ್‌ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಹಂತದ ತನಿಖೆ ಕುರಿತು ತನಿಖಾಧಿಕಾರಿಗಳಾದ ಗೌತಮ್ ಹಾಗೂ ಪುರುಷೋತ್ತಮ್‌ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಚೇರಿಗೂ ತೆರಳಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಎಸ್‌ಸಿಎ, ಆರ್‌ಸಿಬಿಗೆ ನೋಟಿಸ್ ಜಾರಿ:

ಕಾಲ್ತುಳಿತ ಪ್ರಕರಣದ ಆರೋಪಿಗಳಾದ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಗಳ ವಿಚಾರಣೆಗೆ ಇನ್ನೆರಡು ದಿನಗಳಲ್ಲಿ ನೋಟಿಸ್ ಜಾರಿಗೊಳಿಸಲು ಸಿಐಡಿ ಮುಂದಾಗಿದೆ. ಪ್ರಕರಣದ ಕುರಿತು ಘಟನಾ ಸ್ಥಳ ಹಾಗೂ ಸ್ಥಳೀಯ ಪೊಲೀಸರು ಸಂಗ್ರಹಿಸಿದ್ದ ಸಾಂದರ್ಭಿಕ ಸಾಕ್ಷ್ಯಗಳನ್ನು ಸಿಐಡಿ ಪರಿಶೀಲನೆ ನಡೆಸಿದೆ. ಈ ಮಾಹಿತಿ ಅವಲೋಕಿಸಿ ಬಳಿಕ ಆರೋಪಿತರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ತಿಳಿದು ಬಂದಿದೆ.

ಈಗಾಗಲೇ ಪ್ರಕರಣದಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಬಂಧನ ಭೀತಿಯಿಂದ ಪಾರಾಗಿರುವ ಕೆಎಸ್‌ಸಿಎಗೆ ಸಿಐಡಿ ತನಿಖೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಇನ್ನು ಜೂ.4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮದ ಆಯೋಜಕರಾದ ಆರ್‌ಸಿಬಿ ಹಾಗೂ ಡಿಎನ್‌ಎ ಕಂಪನಿ ಆಡಳಿತ ಮಂಡಳಿದ ಸದಸ್ಯರಿಗೂ ಸಿಐಡಿ ನೋಟಿಸ್ ನೀಡಲಿದೆ. ಈಗಾಗಲೇ ಪ್ರಕರಣದಲ್ಲಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಹಾಗೂ ಡಿಎನ್‌ಎ ಕಂಪನಿ ವ್ಯವಸ್ಥಾಪಕ ಕಿರಣ್ ಸೇರಿ ನಾಲ್ವರ ಬಂಧನವಾಗಿದೆ. ತಮ್ಮ ಸಿಬ್ಬಂದಿ ಬಂಧನ ಬೆನ್ನಲ್ಲೇ ಈ ಎರಡು ಕಂಪನಿಗಳ ಮಾಲಿಕರು ಸೇರಿ ಪ್ರಮುಖ ಪದಾಧಿಕಾರಿಗಳು ನಾಪತ್ತೆಯಾಗಿದ್ದಾರೆ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲು ಸಿಐಡಿ ಅಧಿಕಾರಿಗಳು ಯೋಜಿಸಿದ್ದಾರೆ ಎನ್ನಲಾಗಿದೆ.

ನಾಳೆ ಆರೋಪಿಗಳು ಸಿಐಡಿ ವಶಕ್ಕೆ:

ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆ ಸಲುವಾಗಿ ಸೋಮವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ನ್ಯಾಯಾಲಯದಿಂದ ಬಾಡಿ ವಾರೆಂಟ್‌ಗೆ ಸಿಐಡಿ ಅರ್ಜಿ ಸಲ್ಲಿಸಲಿದೆ.

ಫೈನಲ್‌ ಆರಂಭಕ್ಕೆ ಮುನ್ನ ವಿಜಯೋತ್ಸವಕ್ಕೆ ಸಿದ್ಧತೆ

ಐಪಿಎಲ್‌ ಫೈನಲ್‌ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಆದರೆ ವಿಜಯೋತ್ಸವಕ್ಕೆ ಅನುಮತಿ ಕೊಡಿ ಎಂದು ಆರು ಗಂಟೆಗೆಲ್ಲ ಪೊಲೀಸರಿಗೆ ಆರ್‌ಸಿಬಿ ಅವರು ಅರ್ಜಿ ಕೊಡುತ್ತಾರೆ! ಇದು ಹೇಗೆ ಸಾಧ್ಯ? ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹಸಚಿವರು ರಾಜೀನಾಮೆ ಕೊಡಬೇಕು.

- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಆರೋಗ್ಯ ಸುಧಾರಿಸುತ್ತೆಂದರೆ ಎಚ್‌ಡಿಕೆ ನಿಂದನೆ ಮಾಡಲಿ

ನನ್ನ ಮೇಲೆ ಅಸೂಯೆಪಡುವುದರಿಂದ, ನನ್ನನ್ನು ಟೀಕೆ ಮಾಡುವುದರಿಂದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಖುಷಿಯಾಗುವುದಾದರೆ, ಅವರ ಆರೋಗ್ಯದಲ್ಲಿ ಸುಧಾರಣೆ ಆಗುವುದಾದರೆ ನನ್ನ ನಿಂದನೆ ಮುಂದುವರಿಸಲಿ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಎಚ್‌ಡಿಕೆ ಬೆಳಗ್ಗೆ ಒಂದು,ರಾತ್ರಿ ಒಂದು ಮಾತು

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ಅವರು ಬೆಳಗ್ಗೆ ಒಂದು, ರಾತ್ರಿ ಇನ್ನೊಂದು ಮಾತನಾಡುತ್ತಾರೆ. ಅವರು ಮೊದಲು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲಿ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ.

- ಡಿ.ಕೆ.ಸುರೇಶ್‌, ಮಾಜಿ ಸಂಸದ

ಕಾಲ್ತುಳಿತ ಮುಚ್ಚಿಹಾಕಲು ನ್ಯಾಯಾಂಗ ತನಿಖೆ ಆದೇಶ

ಕಾಲ್ತುಳಿತ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕಾಗಿಯೇ ರಾಜ್ಯ ಸರ್ಕಾರ ನ್ಯಾ.ಮೈಕೆಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಿದೆ. ನ್ಯಾ। ಕುನ್ಹಾ ಕೋವಿಡ್ ಹಗರಣಗಳ ಕುರಿತ ತನಿಖೆ ವರದಿಯನ್ನು ಅವರು ಕೊಟ್ಟಿಲ್ಲ. ಹಾಲಿ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಿ.

- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!