ದತ್ತಪೀಠ ಘೋರಿಗಳ ಉತ್ಖನನಕ್ಕೆ ವಿಹಿಂಪ ಆಗ್ರಹ; ಧರ್ಮಸ್ಥಳ ಮಾದರಿಯಲ್ಲಿ ಜಿಪಿಆರ್ ಯಂತ್ರ ಬಳಕೆಗೆ ಮನವಿ!

Published : Aug 12, 2025, 07:27 PM ISTUpdated : Aug 12, 2025, 07:33 PM IST
Chikkamagaluru Datta Peeta GPR excavation

ಸಾರಾಂಶ

ಚಿಕ್ಕಮಗಳೂರಿನ ದತ್ತಪೀಠದ ಆವರಣದಲ್ಲಿರುವ ಘೋರಿಗಳ ಉತ್ಖನನಕ್ಕೆ ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಧರ್ಮಸ್ಥಳದ ಉತ್ಖನನದ ಮಾದರಿಯಲ್ಲೇ ಇಲ್ಲಿಯೂ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಘೋರಿಗಳಲ್ಲಿ ಯಾರನ್ನು ಹೂಳಲಾಗಿದೆ ಎಂಬುದರ ಸತ್ಯಾಸತ್ಯತೆ ಹೊರತೆಗೆಯಲು ಆಗ್ರಹಿಸಲಾಗಿದೆ.

ಚಿಕ್ಕಮಗಳೂರು (ಆ.12): ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರನ (Dharmasthala Anonymous Complainant) ಸುಳಿವಿನ ಮೇರೆಗೆ ನಡೆಯುತ್ತಿರುವ ಉತ್ಖನನ ಕಾರ್ಯದ ಬೆನ್ನಲ್ಲೇ, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ (Chikkamagaluru) ಮತ್ತೊಂದು ಮಹತ್ವದ ಆಗ್ರಹ ಕೇಳಿಬಂದಿದೆ. ಇಲ್ಲಿನ ವಿವಾದಿತ ದತ್ತಪೀಠದ (Datta Peeta) ಆವರಣದಲ್ಲಿರುವ ಘೋರಿಗಳನ್ನು ಉತ್ಖನನಗೊಳಿಸಿ, ಅವುಗಳ ಸತ್ಯಾಂಶವನ್ನು ಹೊರತರಬೇಕೆಂದು ಹಿಂದೂ ಹಿತರಕ್ಷಣಾ ವೇದಿಕೆಯ ಸಕಲೇಶಪುರ ಘಟಕ ಒತ್ತಾಯಿಸಿದೆ.

ಅಂಚೆ ಕಚೇರಿಯ ರಿಜಿಸ್ಟ್ರಾರ್ ಪೋಸ್ಟ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿರುವ ಹಿಂದೂ ಸಂಘಟಕರು, ದತ್ತಪೀಠದಲ್ಲಿರುವ ಘೋರಿಗಳು ಅಕ್ರಮವಾಗಿವೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದಿತ ಜಾಗರ ಹೋಬಳಿಯ ಐ.ಡಿ ಪೀಠದ ಸರ್ವೆ ನಂ. 195ರಲ್ಲಿರುವ ಈ ಘೋರಿಗಳ ಕೆಳಗೆ ಯಾರನ್ನು ಹೂಳಲಾಗಿದೆ ಎಂಬ ಬಗ್ಗೆ ಎಫ್‌ಎಸ್‌ಎಲ್ (FSL) ವರದಿ ನೀಡಬೇಕಿದೆ. ಈ ಮೂಲಕ ದತ್ತಪೀಠದ ಆವರಣದಲ್ಲಿರುವ ಘೋರಿಗಳನ್ನು ಉತ್ಖನನಗೊಳಿಸಿ, ಅವುಗಳ ಸತ್ಯಾಂಶವನ್ನು ಹೊರತರಬೇಕೆಂದು ಆಗ್ರಹಿಸಿದ್ದಾರೆ.

ಧರ್ಮಸ್ಥಳದ ರೀತಿಯಲ್ಲಿ ತನಿಖೆಗೆ ಒತ್ತಾಯ:

ಧರ್ಮಸ್ಥಳದಲ್ಲಿ ನಾಪತ್ತೆಯಾದ ವ್ಯಕ್ತಿಗಳ ಪತ್ತೆಗಾಗಿ ಎಸ್‌ಐಟಿ (SIT) ತಂಡ ತನಿಖೆ ನಡೆಸುತ್ತಿರುವಂತೆಯೇ, ದತ್ತಪೀಠದ ಘೋರಿಗಳ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಯುಡಿಆರ್ (UDR) ಮತ್ತು ಎಫ್‌ಐಆರ್ (FIR) ಆಧರಿಸಿ ತನಿಖೆ ನಡೆಸುವಂತೆ ಕೋರಲಾಗಿದೆ.

ಉತ್ಖನನ ಕಾರ್ಯವನ್ನು ಜಿಪಿಆರ್ (GPR) ತಂತ್ರಜ್ಞಾನ ಬಳಸಿ ನಡೆಸಬೇಕು. ಆದರೆ, ಈ ಪ್ರಕ್ರಿಯೆಯ ಸಂದರ್ಭದಲ್ಲಿ ಯಾವುದೇ ಘೋರಿಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮುಖಂಡ ರಘು ಸಕಲೇಶಪುರ ಸೇರಿದಂತೆ ಹಲವು ಹಿಂದೂ ಸಂಘಟಕರು ಈ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರಿಗೆ ಇದರ ಸತ್ಯಾಸತ್ಯತೆಯನ್ನು ತಿಳಿಸುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ ಎಂದು ಸಂಘಟನೆಗಳು ಹೇಳಿವೆ.

ಈ ಬೆಳವಣಿಗೆಯು ಚಿಕ್ಕಮಗಳೂರು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ದತ್ತಪೀಠದಲ್ಲಿರುವ ಘೋರಿಗಳ ಬಗ್ಗೆ ಈಗಾಗಲೇ ಹಲವು ವಿವಾದಗಳಿದ್ದು, ಈ ಹೊಸ ಆಗ್ರಹದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈ ಮನವಿಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಧರ್ಮಸ್ಥಳದಲ್ಲಿ ತನಿಖೆ ಎಲ್ಲಿವರೆಗೆ ಬಂದಿದೆ?

ಧರ್ಮಸ್ಥಳದ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದ ಅನಾಮಿಕ ದೂರುದಾರ ಎಸ್‌ಐಟಿ ತಂಡಕ್ಕೆ ಒಟ್ಟು 16 ಪಾಯಿಂಟ್‌ಗಳನ್ನು ತೋರಿಸಿದ್ದನು. ಆದರೆ, ಎಸ್‌ಐಟಿ ತಂಡವು ಈವರೆಗೆ 13 ಪಾಯಿಂಟ್ ಹೊರತುಪಡಿಸಿ, ಉಳಿದೆಲ್ಲಾ ಕಡೆ ಅಸ್ತಿಪಂಜರಗಳಿಗಾಗಿ ಶೋಧ ಕಾರ್ಯ ಮಾಡಿದ್ದರು. ಈ ಪೈಕಿ 6ನೇ ಗುಂಡಿಯಲ್ಲಿ ಒಂದು ಕಳೇಬರ ಸಿಕ್ಕಿದ್ದು ಹೊರತುಪಡಿಸಿದರೆ, ಬೇರಾವ ಕಡೆಗಳಲ್ಲಿಯೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಆದರೆ, ಕಾಡಲ್ಲಿ ಮರಕ್ಕೆ ಸೀರೆ ಕಟ್ಟಿದ ಸ್ಥಳವನ್ನು 11ಎ ಪಾಯಿಂಟ್ ಎಂದು ಗುರುತಿಸಿ, ಅದರ ಕೆಳಗೆ ಮಣ್ಣು ಅಗೆದಾಗ ಒಂದಷ್ಟು ಮೂಳೆಗಳು ಲಭ್ಯವಾಗಿವೆ. ಈ ಬಗ್ಗೆ ಎಫ್‌ಎಸ್‌ಎಲ್ ತನಿಖೆ ನಡೆಸಲಾಗುತ್ತಿದೆ. 

ಇಂದು 13ನೇ ಪಾಯಿಂಟ್‌ನಲ್ಲಿ ಶೋಧ: 

ಅನಾಮಿಕ ದೂರುದಾರ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್ ತೋರಿಸಿದ್ದನು. ಇದನ್ನು ಅತ್ಯಂತ ಮುಖ್ಯವಾದ ಪಾಯಿಂಟ್ ಆಗಿ ಪರಿಗಣಿಸಿದ್ದ ಎಸ್‌ಐಟಿ ತಂಡ ಜಿಪಿಆರ್ ಯಂತ್ರದ ಮೂಲಕ ಶೋಧನೆ ಮಾಡಿ, ಯಾವುದೇ ಕುರುಹು ಸಿಗದಿದ್ದರೂ ಅನಾಮಿಕ ತೋರಿಸಿದ ಎರಡು ಜಾಗದಲ್ಲಿ 14 ಅಡಿಯಷ್ಟು ಭೂಮಿಯನ್ನು ಅಗೆಯಲಾಗಿದೆ. ಆದರೆ, ಹಿಟಾಚಿ ಅಗೆದ ಜಾಗದಲ್ಲಿ ಯಾವುದೇ ಮೂಳೆಗಳು ಸಿಗದೇ, ನೀರು ಸೆಲೆ ಉಕ್ಕುತ್ತಿದೆ. ಇದರಿಂದ ಅಸ್ತಿಪಂಜ ಶೋಧ ಕಾರ್ಯಕ್ಕೂ ತಾತ್ಕಾಲಿಕ ತಡೆ ಉಂಟಾಗಿದ್ದು, ನೀರನ್ನು ಮೋಟರ್ ಬಳಸಿ ನದಿಗೆ ಹರಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!