
ಬೆಂಗಳೂರು (ಸೆ.27): ಕಳೆದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಯ ವಿವರಣಾತ್ಮಕ ಮಾದರಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ‘ಜಯ ಶ್ರೀ ರಾಮ’ ಎಂದು ಬರೆದ ಅಭ್ಯರ್ಥಿಯ ಅಭ್ಯರ್ಥಿತನವನ್ನು ಕೆಪಿಎಸ್‌ಸಿ ರದ್ದುಪಡಿಸಿದೆ.
2025ರ ಮೇ 9ರಂದು ಸಾಮಾನ್ಯ ಅಧ್ಯಯನ-3ರ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಯು ಪರೀಕ್ಷಾ ಸೂಚನೆಗಳನ್ನು ಉಲ್ಲಂಘಿಸಿ ಪ್ರಶ್ನೆ ಸಹಿತ ಉತ್ತರ ಪುಸ್ತಕದಲ್ಲಿ ಅನುಚಿತ ಬರವಣಿಗೆಯನ್ನು (ಜಯ ಶ್ರೀ ರಾಮ) ನಮೂದಿಸಿರುವ ಬಗ್ಗೆ ಮೌಲ್ಯಮಾಪಕರು ವರದಿ ನೀಡಿದ್ದರು. ಈ ಕುರಿತು ಅಭ್ಯರ್ಥಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅಭ್ಯರ್ಥಿ ಲಿಖಿತ ಸಮಜಾಯಿಷಿ ನೀಡಿದ್ದು, ತಾನು ಉದ್ಯೋಗಕ್ಕಾಗಿ ದೇವರನ್ನು ನೆನೆದು ಪ್ರಾರ್ಥನೆ ಮಾಡುವಾಗ ತನಗೆ ಅರಿವಿಲ್ಲದಂತೆ ‘ಜಯ ಶ್ರೀ ರಾಮ’ ಎಂದು ಬರೆದಿದ್ದೇನೆ. ಯಾವುದೇ ದುರುದ್ದೇಶ ಇರಲಿಲ್ಲ. ಆಗಿರುವ ತಪ್ಪನ್ನು ಮನ್ನಿಸುವಂತೆ ಕೋರಿದ್ದ ಎಂದು ಕೆಪಿಎಸ್‌ಸಿ ಹೇಳಿದೆ.
ಪರೀಕ್ಷೆ ನಿಯಮಗಳ ಪ್ರಕಾರ, ಒಎಂಆರ್ ರಕ್ಷಾಪುಟ ಹೊರತು ಬೇರೆಲ್ಲೂ ಹೆಸರು, ಸಹಿ, ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಪ್ರಶ್ನೆಸಹಿತ ಉತ್ತರ ಪುಸ್ತಕೆಯ ಕ್ರಮಸಂಖ್ಯೆ ಇತ್ಯಾದಿಗಳನ್ನು ಬರೆಯಬಾರದು. ಒಂದು ವೇಳೆ ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಬರೆದಲ್ಲಿ, ಅದನ್ನು ದುರಾಚಾರ ಪ್ರಕರಣ ಎಂದು ಪರಿಗಣಿಸಿ, ಅಭ್ಯರ್ಥಿಯ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗುತ್ತದೆ. ಅದರಂತೆ ಅಭ್ಯರ್ಥಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆಯೋಗದಲ್ಲಿ ತೀರ್ಮಾನಿಸಿ ಅಭ್ಯರ್ಥಿತನವನ್ನು ರದ್ದುಪಡಿಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಜ್ಯೋತಿ ಆದೇಶ ಹೊರಡಿಸಿದ್ದಾರೆ.
2021ರಲ್ಲಿ ನಡೆದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಚಾರವನ್ನು ಮರೆಮಾಚಿ ಮತ್ತೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯನ್ನು ಕೆಪಿಎಸ್‌ಸಿ ಶಾಶ್ವತವಾಗಿ ಡಿಬಾರ್ ಮಾಡಿ ಆದೇಶ ಹೊರಡಿಸಿದೆ.
ಕರೆಪ್ಪ ಹಣಮಂತ ತುಬಚಿ ಈ ದಂಡನೆಗೆ ಒಳಗಾದ ಅಭ್ಯರ್ಥಿ. ಈತ ಸೇರಿದಂತೆ 20 ಜನರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಕುರಿತು ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕರೆಪ್ಪನನ್ನು ಬಂಧಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಕೆಪಿಎಸ್‌ಸಿ ಪರೀಕ್ಷೆಗಳಿಂದ ಕರೆಪ್ಪಯನ್ನು ಡಿಬಾರ್ ಮಾಡಲು ಆಯೋಗದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೂ, 2024ರ ಮಾರ್ಚ್ ತಿಂಗಳಲ್ಲಿ ಕರೆದಿದ್ದ ಪಿಡಿಒ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಕರೆಪ್ಪನ ಪರೀಕ್ಷೆ ಬರೆದಿದ್ದ. ಈ ಬಗ್ಗೆ ಕಾರಣ ಕೇಳಿ ನೀಡಲಾಗಿದ್ದ ನೋಟಿಸ್‌ಗೆ ಉತ್ತರಿಸಿದ್ದ ಕರೆಪ್ಪ, ಪ್ರಕರಣದಲ್ಲಿ ನಾನು ನಿರಾಪರಾಧಿ. ಈ ಪ್ರಕರಣದ ಕುರಿತು ನ್ಯಾಯಾಲಯದ ತೀರ್ಮಾನ ಬಂದ ನಂತರ ಕ್ರಮ ಕೈಗೊಳ್ಳಬಹುದು. ನಾನು ಬಡವ ಮತ್ತು ಪ್ರಾಮಾಣಿಕ ಅಭ್ಯರ್ಥಿಯಾಗಿದ್ದು, ಅರ್ಜಿ ಸಲ್ಲಿಸಲು ಮತ್ತು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಕೋರಿದ್ದ.
ಆದರೆ, ಅಭ್ಯರ್ಥಿ ಕರೆಪ್ಪ ಉದ್ದೇಶಪೂರ್ವಕವಾಗಿಯೇ ಸತ್ಯಾಂಶವನ್ನು ಮರೆಮಾಚಿ ನೌಕರಿ ಪಡೆಯುವ ಉದ್ದೇಶದಿಂದ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿರುವುದಾಗಿ ವಿಚಾರಣೆ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ