
ಕೂಡಲಸಂಗಮ (ಡಿ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದುಬಾರಿ ವಾಚ್‌ಗಳ ಕುರಿತು ಬಿಜೆಪಿ ನಾಯಕರು ಟೀಕಿಸುತ್ತಿರುವ ವಿಚಾರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕೂಡಲಸಂಗಮದಲ್ಲಿ ತಿರುಗೇಟು ನೀಡಿದ್ದು, 'ನೋಡ್ರಿ, ಯಾವ 40 ಲಕ್ಷ, 5 ಕೋಟಿ, 10 ಕೋಟಿ ದುಬಾರಿ ವಾಚ್ ಹಾಕಿಕೊಂಡು ಇವರು (ಬಿಜೆಪಿ), ಈ ರಾಜ್ಯದಲ್ಲಿ ಸ್ವಲ್ಪ ಬಿಜೆಪಿಯವರ ಮನೆ ಚೆಕ್ ಮಾಡಲಿ ಒಂದು ಸಲ' ಎಂದು ಅವರು ಸವಾಲು ಹಾಕಿದರು.
ನಮ್ಮ ಮನೆಗಳ ಮೇಲೆ ಸಿಬಿಐ, ಇ.ಡಿ. ಅವರನ್ನು ಕಳಿಸಿ ರೇಡ್ ಮಾಡಿಸ್ತಾರಲ್ಲ, ಒಂದು ಸಲ ಆದ್ರೂ ಮಾಜಿ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಬಿಜೆಪಿಯವರ ಮನೆ ಚೆಕ್ ಮಾಡಿಸಿರಿ. ಈಶ್ವರಪ್ಪನವರ ಮನೆಯಲ್ಲಿ ಕೌಂಟಿಂಗ್ ಮಷೀನ್ ಕೂಡ ಸಿಕ್ಕಿತ್ತು. ಬಿಜೆಪಿ ಅವರ ಬಳಿ ಇನ್ನೂ ದುಬಾರಿ ವಾಚ್‌ಗಳಿವೆ, ಒಂದೊಂದು ಕೋಟಿ, ಎರಡು ಕೋಟಿ ವಾಚ್‌ಗಳಿವೆ. ಇದೇನು 40 ಲಕ್ಷ ರೂಪಾಯಿ ವಾಚ್? ಇಷ್ಟಕ್ಕೆ ದೊಡ್ಡದು ಮಾಡ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಅವರು ವಾಚ್‌ಗಳ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಹಾಗಿದ್ದರೂ ಟೀಕಿಸುವುದು 'ಚಿಲ್ಲರ್ ಕೆಲಸ' ಎಂದು ಕಾಶಪ್ಪನವರ ಕಿಡಿಕಾರಿದರು. 'ಇವರಿಗೆ ಇನ್ನೊಬ್ಬರ ಮನೆಯಲ್ಲಿ ದೋಸೆ ತೂತಿದೆ! ತೂತಿದೆಯೋ ಇಲ್ಲವೋ? ಅವರ ಮನೆ ದೋಸೆ ಪ್ಲೇನ್ ಆಗಿದೆಯಾ? ಇದನ್ನೆಲ್ಲಾ ಯಾಕೆ ಲೆಕ್ಕ ಹಾಕ್ತಾರೆ ಬಿಜೆಪಿಯವರು?' ಎಂದು ಲೇವಡಿ ಮಾಡಿದರು.
ವಿರೋಧ ಪಕ್ಷದಲ್ಲಿ ಕೂತವರು ರೈತರ ಸಮಸ್ಯೆ, ಬಡವರ ಸಮಸ್ಯೆಗಳನ್ನು ಬೆಳಕಿಗೆ ತರುವುದನ್ನು ಬಿಟ್ಟು, ನಮ್ಮ ಮನೆಯಲ್ಲಿ ಏನಿದೆ ಎಂಬುದನ್ನು ಹುಡುಕುವುದನ್ನು ಕಲಿತಿದ್ದಾರೆ. ಅದಕ್ಕೆ ಇವರ ಮನೆಯನ್ನು ಮೊದಲು ಹುಡುಕಿ ಎಂದು ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಯಕ್ತಿಕ ಹವ್ಯಾಸಗಳ ಬಗ್ಗೆ ಮಾತನಾಡಿದ ಕಾಶಪ್ಪನವರ, ಮೈ ಮೇಲೆ ಬಟ್ಟೆ ಹಾಕಿದರೆ ಏನು ತಪ್ಪು ಎಂದು ಪ್ರಶ್ನಿಸಿದರು. 'ನಮಗೆ ಯಾವುದು ಇಷ್ಟ ಆ ಬಟ್ಟೆ ಹಾಕುತ್ತೇವೆ, ಯಾವುದು ಇಷ್ಟ ಆ ಶೂಸ್ ಹಾಕಿಕೊಳ್ಳುತ್ತೇವೆ, ಯಾವುದು ಇಷ್ಟ ಆ ವಾಚ್ ಕಟ್ಕೊಳ್ತೀವಿ, ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರಿಗೆ ಇರೋದೇ ಎರಡು ಹವ್ಯಾಸ. ಒಂದು ವಾಚ್ ಕಟ್ಟೋದು, ಒಂದು ಚಸ್ಮಾ ಹಾಕಿಕೊಳ್ಳೋದು. ಅದನ್ನು ಬಿಟ್ರೆ ಸಿದ್ರಾಮಯ್ಯನವರಿಗೆ ಏನೇನೂ ಆಸೆ ಇಲ್ಲ ಪಾಪ ಎಂದು ಸಮರ್ಥಿಸಿಕೊಂಡರು.
ಬಿಜೆಪಿಗೆ ಸವಾಲು ಹಾಕಿದ ಕಾಶೆಪ್ಪನವರು, ಯಡಿಯೂರಪ್ಪ ಜೈಲಿಗೆ ಹೋಗಿ ಬಂದ. ಇವತ್ತು ಯಾಕೆ ಜೈಲಿಗೆ ಹೋಗಿ ಬಂದರು? ಭ್ರಷ್ಟಾಚಾರ ಮಾಡಿದ್ದಕ್ಕೆ. ಆ ರೀತಿ ಒಂದು ಆರೋಪವನ್ನು ನಮ್ಮ ಮುಖ್ಯಮಂತ್ರಿಗಳ ಮೇಲೆ ತೋರಿಸಿ ತಾಕತ್ತಿದ್ದರೆ. ಸುಮ್ಮನೆ ಆರೋಪ ಮಾಡೋದು ವಿನಾಕಾರಣ. ವಾಚ್ ಹಾಕಿದ ತಕ್ಷಣ ಆರೋಪ ಮಾಡೋದು!
ಯಾರೋ ಒಬ್ಬರು ಉಡುಗೊರೆ (ಗಿಫ್ಟ್) ನೀಡಿದರೆ ರಾಜಕಾರಣಿಗಳು ತಗೋಬಾರದಾ? ನನಗೆ ಈ ಜಾಕೆಟ್ ಕೊಟ್ಟಿದ್ದಾರೆ, ಹಾಕಿಕೊಳ್ಳಿ ಚಂದ ಕಾಣ್ತೀರಿ ಅಂತ. ಅದಕ್ಕೆ ಹಾಕಿಕೊಂಡು ಓಡಾಡ್ತೀವಿ. ನಮಗೆ ತೆಗೆದುಕೊಳ್ಳುವ ತಾಕತ್ತು ಇರಲಿಕ್ಕಿಲ್ಲ. ಆದರೆ ಕೊಟ್ಟಿರುವವರಿಗೆ ಬೇಡ ಎಂದು ಅಪಮಾನ ಮಾಡಬಾರದಲ್ವಾ ಕಾಣಿಕೆ ನೀಡಿದವರಿಗೆ ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ