Chaos in Karnataka assembly : ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಲಿ, ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ (ಮಾ.22): ‘ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸದನದಲ್ಲಿಯೇ ಹೇಳಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. 100ಕ್ಕೆ 100ರಷ್ಟು ಗಹನ ತನಿಖೆ ನಡೆಸಿ ಪ್ರಕರಣವನ್ನು ಭೇದಿಸುತ್ತೇವೆ. ಯಾವ ಪಕ್ಷದವರೇ ಆದರೂ ಅವರನ್ನು ಸುಮ್ಮನೇ ಬಿಡಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಪ್ರಕರಣ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂಬ ಬಿಜೆಪಿ ಶಾಸಕರ ಆಗ್ರಹಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ಕೆ.ಎನ್. ರಾಜಣ್ಣ ಅವರು ನಮ್ಮ ಸಂಪುಟದ ಸಚಿವರು, ಪರಿಶಿಷ್ಟ ವರ್ಗದ ನಾಯಕರು. ಅವರು ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಹೇಳಿದ್ದಾರೆ. ಅದಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸದನದಲ್ಲಿ ಉತ್ತರ ನೀಡಿ, ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ರಾಜಣ್ಣ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಆದರೂ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕರ, ಸಚಿವರ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ’ ಎಂದರು.
ಇದನ್ನೂ ಓದಿ: ಹನಿಟ್ರ್ಯಾಪ್, ಮುಸ್ಲಿಂ ಮೀಸಲು ಬಗ್ಗೆ ಅಸೆಂಬ್ಲಿಯಲ್ಲಿ ಗದ್ದಲ; 18 ಶಾಸಕರಿಗೆ ಸಸ್ಪೆಂಡ್, ಗಲಾಟೆ ಶುರುವಾಗಿದ್ದು ಹೇಗೆ?
‘ಹನಿಟ್ರ್ಯಾಪ್ ಪ್ರಕರಣದಲ್ಲಿ ನಮ್ಮ ಪಕ್ಷದವರು, ವಿರೋಧ ಪಕ್ಷದವರು ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದನದಲ್ಲಿ ಸಚಿವರೇ ಹೇಳಿಕೆ ನೀಡಿದ ಮೇಲೆ ಸರ್ಕಾರ ಸುಮ್ಮನಿರುವುದಿಲ್ಲ. ಈ ಪ್ರಕರಣ ಕುರಿತು ತನಿಖೆ ನಡೆಸುತ್ತೇವೆ. ವಿರೋಧ ಪಕ್ಷದವರು ನ್ಯಾಯಾಂಗ ತನಿಖೆಯ ಸಲಹೆ ನೀಡಿದ್ದಾರೆ. ಈ ಎಲ್ಲದರ ಕುರಿತು ಗೃಹ ಸಚಿವರು ಸೇರಿದಂತೆ ಹಿರಿಯ ಸಚಿವರೊಂದಿಗೆ ಚರ್ಚಿಸಿ, ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಎಲ್ಲ ಶಾಸಕರು, ಸಚಿವರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಪ್ರಕರಣದ ತನಿಖೆಯಾದರೆ ಎಲ್ಲವೂ ಬಹಿರಂಗವಾಗುತ್ತದೆ’ ಎಂದು ಹೇಳಿದರು.
ರಾಜಣ್ಣ ಪ್ರತಿಕ್ರಿಯಿಸಿದ್ದಕ್ಕೆ ಹನಿಟ್ರ್ಯಾಪ್ ಆಗಿದೆ: ಡಿಕೆಶಿ
ಹನಿಟ್ರ್ಯಾಪ್ ಮಾಡುವವರು ಸುಮ್ಮ ಸುಮ್ಮನೆ ಏನಾದರೂ ನಿಮ್ಮ ಹತ್ತಿರ (ರಾಜಣ್ಣ) ಬರುತ್ತಾರ? ನೀವು ಹಲೋ ಎಂದರೆ ಅವರೂ ಹಲೋ ಹಲೋ ಎನ್ನುತ್ತಾರೆ. ನೀವು ವಿಶ್ ಮಾಡಿದ್ರೆ ನಾನೂ ವಿಶ್ ಮಾಡುತ್ತೇನೆ. ನೀವು ವಿಶ್ ಮಾಡದಿದ್ದರೆ ನಾನು ವಿಶ್ ಮಾಡುತ್ತೇನಾ? ನೀವು ಮಾತನಾಡಿದಿದ್ದರೆ ನಾನು ಮಾತನಾಡುತ್ತಿದ್ದೆನಾ? ಹನಿಟ್ರ್ಯಾಪ್ ಬಗ್ಗೆ ಶೀಘ್ರ ತನಿಖೆ ಆಗಲಿ. ಇದಕ್ಕೆ ಮೊದಲು ಟ್ರ್ಯಾಪ್‌ಗೆ ಒಳಗಾದವರು ಪೊಲೀಸರಿಗೆ ದೂರು ನೀಡಲಿ.-
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ