ಕೋಟ್ಯಂತರ ಭಾರತೀಯರ ಹರಕೆ, ಹಾರೈಕೆಯೊಂದಿಗೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ಭಾರತ, ಚಂದ್ರನ ಮೇಲೆ ಯಶಸ್ವಿಯಾಗಿ ‘ಚಂದ್ರಯಾನ-3’ ನೌಕೆ ಇಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಬೆಂಗಳೂರು (ಆ.24): ಕೋಟ್ಯಂತರ ಭಾರತೀಯರ ಹರಕೆ, ಹಾರೈಕೆಯೊಂದಿಗೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ಭಾರತ, ಚಂದ್ರನ ಮೇಲೆ ಯಶಸ್ವಿಯಾಗಿ ‘ಚಂದ್ರಯಾನ-3’ ನೌಕೆ ಇಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಹಾಲಿವುಡ್ ಸಿನಿಮಾ ವೆಚ್ಚಕ್ಕಿಂತಲೂ ಅಗ್ಗದ ಖರ್ಚಿನಲ್ಲಿ ಚಂದ್ರನ ನೆಲದ ಮೇಲೆ ‘ವಿಕ್ರಮ್’ ಲ್ಯಾಂಡರ್ ಇಳಿಸಿದ್ದು, ಭಾರತದ ಸಾಧನೆಗೆ ವಿಶ್ವಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ನಿರೀಕ್ಷೆಯಂತೆಯೇ ಬುಧವಾರ ಸಂಜೆ 6.04ಕ್ಕೆ ಸುರಕ್ಷಿತವಾಗಿ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದ್ದು, ಅದಾದ ಸುಮಾರು ಮೂರೂವರೆ ತಾಸಿನ ಬಳಿಕ ಲ್ಯಾಂಡರ್‌ನಿಂದ ‘ಪ್ರಗ್ಯಾನ್’ ರೋವರ್ ಸುಲಲಿತವಾಗಿ ಹೊರಬಂದಿದೆ. ಅದರ ಮೊದಲ ಚಿತ್ರಗಳು ಕೂಡ ಭೂಮಿಗೆ ರವಾನೆಯಾಗಿವೆ. ತೀರಾ ಸನಿಹದಿಂದ ‘ಚಂದ್ರದರ್ಶನ’ ಮಾಡಿ ಕಂಡು ಜಗತ್ತು ಪುಳಕಿತಗೊಂಡಿದೆ. ಚಂದ್ರನ ಮೇಲೆ ನೌಕೆ ಇಳಿಸುವ ಮೂಲಕ ಈ ಸಾಧನೆ ಮಾಡಿದ ‘ಸೆಲೆಕ್ಟ್ ಕ್ಲಬ್’ಗೆ 4ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಅದಕ್ಕಿಂತ ಗಮನಾರ್ಹ ಎಂದರೆ, ಈವರೆಗೆ ಯಾವ ದೇಶವೂ ಕಾಲಿಡದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ದಾಖಲೆಯನ್ನು ಸೃಷ್ಟಿಸಿದೆ.
ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ
ಚಂದ್ರನ 1 ದಿನ ಭೂಮಿಯ 14 ದಿನಕ್ಕೆ ಸಮನಾಗಿರುವ ಹಿನ್ನೆಲೆಯಲ್ಲಿ ಇನ್ನು 14 ದಿನಗಳ ಕಾಲ ಲ್ಯಾಂಡರ್ ಹಾಗೂ ರೋವರ್‌ನಿಂದ ಹಲವಾರು ಬಗೆಯ ಸಂಶೋಧನೆಗಳು ನಡೆಯಲಿವೆ. ಹಿಂದೆಂದೂ ಕಂಡಿರದ ಚಂದ್ರನ ಫೋಟೋಗಳೂ ಜಗತ್ತಿನ ಮುಂದೆ ಅನಾವರಣಗೊಳ್ಳುವ ನಿರೀಕ್ಷೆ ಕೂಡ ಇದೆ. ಚಂದ್ರಯಾನ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಇಸ್ರೋ, ಮುಂದಿನ ತಿಂಗಳು ಸೂರ್ಯ ಶಿಕಾರಿಗೆ ಹೊರಡಲಿದ್ದು, ‘ಆದಿತ್ಯ’ ಎಂಬ ನೌಕೆಯನ್ನು ಉಡಾವಣೆ ಮಾಡಲಿದೆ.
41 ದಿನಗಳ ಯಾನ: ಚಂದ್ರಸ್ಪರ್ಶದೊಂದಿಗೆ 41 ದಿನಗಳ ಹಿಂದೆ ಆರಂಭವಾಗಿದ್ದ ಚಂದ್ರಯಾನ-3 ನೌಕೆಯ ಉಡ್ಡಯನ ಭರ್ಜರಿ ಯಶಸ್ಸು ಕಂಡಂತಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿಳಿಯುವ ರಷ್ಯಾದ ಲೂನಾ 25 ನೌಕೆ ಪತನಗೊಂಡ ಬೆನ್ನಲ್ಲೇ ಭಾರತ ಈ ಅಭೂತಪೂರ್ವ ಸಾಧನೆ ಮಾಡಿದೆ. ದಕ್ಷಿಣ ಧ್ರುವದಲ್ಲಿ ಅಮೂಲ್ಯ ಮಾಹಿತಿ ನೀಡಬಹುದು ಎಂದೆಣಿಸಲಾಗಿರುವ ನೀರು ಮತ್ತು ಇತರೆ ಧಾತುಗಳ ಪತ್ತೆಯ ಉದ್ದೇಶ ಹೊಂದಿರುವ ಉಡ್ಡಯನವು ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತು ಇಸ್ರೋಕ್ಕೆ 140 ಕೋಟಿ ಭಾರತೀಯರು, ಜಗತ್ತಿನ ಪ್ರಮುಖ ದೇಶಗಳು, ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.
‘ಇದು ಶಾಶ್ವತವಾಗಿ ಸ್ಮರಿಸಬೇಕಾದ ಕ್ಷಣವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಕಹಳೆ ಇಂದು ಮೊಳಗಿದೆ. ಆದರೆ ಇದು ಕೇವಲ ಭಾರತದ ಯಶಸ್ಸಲ್ಲ. ಇಡೀ ಮಾನವತೆಯ ಯಶಸ್ಸು. ನವ ಭಾರತದ ನವ ಹೋರಾಟವು ಇಂದು ಫಲ ನೀಡಿದೆ. ಭಾರತ ಹೊಸ ಇತಿಹಾಸ ಬರೆದಿದೆ ಹಾಗೂ ಹೊಸ ಯುಗದ ಉದಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಉಳಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಧನಕರ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಗಣ್ಯರು, ಉದ್ಯಮಿಗಳು ನಟ,ನಟಿಯರು, ಕ್ರೀಡಾರಂಗದ ಪ್ರಮುಖರು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚಂದ್ರಯಾನ-3 ಯಶಸ್ವಿಯಾಗಲಿ: ರಾಯಚೂರಿನ ಪುಟಾಣಿ ಮಕ್ಕಳಿಂದ ಶಿವಲಿಂಗಕ್ಕೆ ಹಾಲಿನ ಅಭಿಷೇಕ
ಹೊಸ ಇತಿಹಾಸ: ಜು.14ರಂದು ಶ್ರೀಹರಿಕೋಟದಿಂದ ಉಡ್ಡಯನಗೊಂದು 41 ದಿನಗಳ ಕಾಲ ಭೂಮಿ ಮತ್ತು ಚಂದ್ರನ ಕಕ್ಷೆಯಲ್ಲಿ ಸುತ್ತಿದ್ದ ರೋವರ್ ಅನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದ್ದ ವಿಕ್ರಂ ಲ್ಯಾಂಡರ್ ಬುಧವಾರ ಸಂಜೆ 5.44ಕ್ಕೆ 30 ಕಿ.ಮೀ ಎತ್ತರಪ್ರದೇಶದಿಂದ ಚಂದ್ರನತ್ತ ಹಂತಹಂತವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಅಂತಿಮವಾಗಿ 20 ನಿಮಿಷಗಳ ಆತಂಕದ ಕ್ಷಣವನ್ನು ಯಶಸ್ವಿಯಾಗಿ ಮೆಟ್ಟಿನಿಂತು 6.04ಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್‌್ಟಲ್ಯಾಂಡಿಂಗ್ ಮಾಡಿತು. ಇದಾದ ಬಳಿಕ ರಾತ್ರಿ 9.30ರ ವೇಳೆಗೆ ಲ್ಯಾಂಡರ್‌ನಿಂದ ರೋವರ್ ಹೊರಬಂದು ಚಂದ್ರನ ಭೂಮಿಯನ್ನು ಸ್ಪರ್ಶ ಮಾಡಿತು. ಎಲ್ಲಾ ದೃಶ್ಯಗಳನ್ನು ಲ್ಯಾಂಡರ್‌ನಲ್ಲಿದ್ದ ಕ್ಯಾಮೆರಾಗಳು ಸೆರೆಹಿಡಿದು ಭೂಮಿಗೆ ರವಾನಿಸಿದವು. ಬಳಿಕ ರೋವರ್ ಕೂಡ ಲ್ಯಾಂಡರ್‌ನ ಫೋಟೋ ಹಿಡಿದು ಭೂಮಿಗೆ ರವಾನಿಸುವ ಮೂಲಕ ಇಸ್ರೋ ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಿತು.