
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಸೆ.12): ಚಾಮರಾಜನಗರದಲ್ಲಿ ಕೊರೋನಾ ಸಂದರ್ಭದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತದಲ್ಲಿ ಮೃತಪಟ್ಟ ಕುಟುಂಬ ವರ್ಗದವರಲ್ಲಿ ಕೊನೆಗೂ ಭರವಸೆಯ ಬೆಳಕು ಮೂಡಿದೆ. ಸಂತ್ರಸ್ತರ ಕರುಣಾಜನಕ ಜೀವನ ಸರ್ಕಾರದ ಕಣ್ಣು ತೆರೆಸಿದೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲು ಮುಂದಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದ ಆಕ್ಸಿಜನ್ ಕೊರತೆಯ ದುರಂತ ಹಲವು ಕುಟುಂಬಗಳ ಬದುಕನ್ನೇ ಮೂರಾಬಟ್ಟೆಯಾಗಿಸಿತ್ತು. ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 36 ಜನ ಕೊನೆಯುಸಿರು ಎಳೆದಿದ್ದರು.
ಮನೆಗೆ ಆಧಾರ ಸ್ತಂಭವಾಗಿದ್ದವರನ್ನು ಕಳೆದುಕೊಂಡು 36 ಕುಟುಂಬಗಳ ಜೀವನ ನರಕಮಯವಾಗಿತ್ತು. ಬದುಕು ಸಾವಿಸುವುದೇ ದುಸ್ತರವಾಗಿತ್ತು. ಈ ವೇಳೆ ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ನೀಡಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೃತರ ಕುಟುಂಬ ವರ್ಗದವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಹ ಸರ್ಕಾರಿ ಉದ್ಯೋಗದ ಆಶ್ವಾಸನೆ ನೀಡಿದ್ದರು. ಕಾಂಗ್ರೆಸ್ ಸರ್ಕಾರವೇನೋ ಬಂತು ಆದರೆ ಭರವಸೆ ಮಾತ್ರ ಈಡೇರಲಿಲ್ಲ. ಸಂತ್ರಸ್ತರ ಪರವಾಗಿ ಹಲವು ಹೋರಾಟಗಳು ನಡೆದರೂ ಪ್ರಯೋಜನವಾಗಿರಲಿಲ್ಲ.
ಈ ನಡುವೆ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಸಂತ್ರಸ್ತರ ಸಂಪೂರ್ಣ ವಿವರ ತರಿಸಿಕೊಂಡ ಸರ್ಕಾರ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಕಂಪದ ಆಧಾರದಲ್ಲಿ ಸಂತ್ರಸ್ತರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಲು ಅನುಮೋದನೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ಹಲವಾರು ರೀತಿಯ ಹೋರಾಟ ನಡೆಸಿದ್ದ ಸಂತ್ರಸ್ತರು ಹೈರಾಣಾಗಿಹೋಗಿದ್ದರು. ಸರ್ಕಾರಿ ಉದ್ಯೋಗದ ಭರವಸೆಯನ್ನೇ ಕಳೆದುಕೊಂಡಿದ್ದರು.
ಇದೀಗ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸಚಿವ ಸಂಪುಟದ ತೀರ್ಮಾನ ಸಂತ್ರಸ್ತರ ಬದುಕಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಮೊದಲ ಹಂತದಲ್ಲಿ 21 ಮಂದಿಗೆ ಬಳಿಕ ತಾಂತ್ರಿಕ ಸಮಸ್ಯೆ ನಿವಾರಿಸಿ ಉಳಿದವರಿಗೆ ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸರ್ಕಾರಕ್ಕೆ ಹಾಗೂ ನಮ್ಮ ಜೊತೆಗೆ ನಿಂತ ಎಲ್ಲರಿಗೂ ಆಕ್ಸಿಜನ್ ದುರಂತದ ಸಂತ್ರಸ್ತರ ಧನ್ಯವಾದ ಹೇಳ್ತಿವಿ. ಸಂತ್ರಸ್ತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ. 36 ಜನರ ಬಲಿ ಪಡೆದ ಆಕ್ಸಿಜನ್ ಕೊರತೆಯ ದುರಂತದ ತಪ್ಪಿತಸ್ತರಿಗು ಶಿಕ್ಷೆಯಾಗಬೇಕಿದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ