ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್‌: ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆಂದು 5 ಲಕ್ಷ ವಂಚನೆ

By Kannadaprabha News  |  First Published Sep 20, 2023, 11:02 AM IST

ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ವಂಚಿಸಿದ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗಲೇ ಚೈತ್ರಾ ಕುಂದಾಪುರ ವಿರುದ್ಧ ಸೋಮವಾರ ಕೋಟ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.


ಕುಂದಾಪುರ (ಸೆ.20): ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ವಂಚಿಸಿದ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಾಗಲೇ ಚೈತ್ರಾ ಕುಂದಾಪುರ ವಿರುದ್ಧ ಸೋಮವಾರ ಕೋಟ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ. ಕೋಟದ ಯುವಕನೋರ್ವನಿಗೆ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ ಅವರಿಂದ ಸುಮಾರು ಐದು ಲಕ್ಷ ರು.ಪಡೆದು ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೀನುಗಾರಿಕೆ ವೃತ್ತಿ ನಡೆಸಿಕೊಂಡಿದ್ದ ಬ್ರಹ್ಮಾವರ ತಾಲೂಕು ಕೋಡಿ ಕನ್ಯಾನ ನಿವಾಸಿ ಸುದಿನ ಪೂಜಾರಿ ಎಂಬುವರಿಗೆ ಎಂಟು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. 

ತನಗೆ ಬಿಜೆಪಿಯಲ್ಲಿ ಉನ್ನತ ಸ್ಥಾನವಿದ್ದು, ಹಲವು ಮಂತ್ರಿಗಳು, ಸಚಿವರು ಹಾಗೂ ಶಾಸಕರ ಜೊತೆ ನಿಕಟ ಸಂಪರ್ಕವಿದೆ ಎಂದಿದ್ದ ಚೈತ್ರಾ, ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ಭರವಸೆ ನೀಡಿ, ಅವರಿಂದ 2018ರಿಂದ 2022ರ ವರೆಗೆ 5 ಲಕ್ಷ ರು.ಹಣ ಪಡೆದುಕೊಂಡಿದ್ದಳು ಎಂದು ಆರೋಪಿಸಲಾಗಿದೆ. ಈ ಪೈಕಿ ಸುಮಾರು 3 ಲಕ್ಷ ರು.ಗಳನ್ನು ವಿಜಯವಾಡ ಶಾಖೆಯ ಕೋಟಕ್ ಮಹಿಂದ್ರ ಬ್ಯಾಂಕ್ ಹಾಗೂ ಕರ್ಣಾಟಕ ಬ್ಯಾಂಕ್ ಸಾಸ್ತಾನ ಶಾಖೆಯ ಖಾತೆಯಿಂದ ಆಕೆಯ ಖಾತೆಗೆ ಹಣ ವರ್ಗಾಯಿಸಲಾಯಿದೆ. ಇನ್ನುಳಿದ ಮೊತ್ತವನ್ನು ನಗದು ರೂಪದಲ್ಲಿ 2023ರ ತನಕ ನೀಡಿದ್ದಾಗಿ ದೂರಿನಲ್ಲಿ ಸುದಿನ ತಿಳಿಸಿದ್ದಾರೆ.

Tap to resize

Latest Videos

undefined

ಅತ್ಯಾಚಾರ ಕೇಸು ದಾಖಲು ಬೆದರಿಕೆ: ಹಣ ನೀಡಿದ ಬಳಿಕ ಅಂಗಡಿಯ ಬಗ್ಗೆ ಕೇಳಿದಾಗ ಆಕೆ ಪ್ರತಿ ಬಾರಿಯೂ ಅಂಗಡಿ ಹಾಕುವ ಬಗ್ಗೆ ಈಗಾಗಲೇ ಸ್ಥಳೀಯ ಮುಖಂಡರಲ್ಲಿ ಮಾತುಕತೆ ನಡೆಸುತ್ತಿದ್ದು, ಅಂತಿಮ ಹಂತದಲ್ಲಿರುವುದಾಗಿ ಹೇಳುತ್ತಾ ಬಂದಿದ್ದಳು. ಪದೇ ಪದೇ ಕೇಳಿದಾಗ ಚುನಾವಣಾ ಪ್ರಚಾರ, ವಿವಿಧೆಡೆ ಭಾಷಣ-ಪ್ರವಚನ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪವಾಗಿಸಿ ದಿನಗಳನ್ನು ದೂಡುತ್ತಾ ಬಂದಿದ್ದು, ಮತ್ತಷ್ಟು ಹಣಕ್ಕೆ ಬೇಡಿಕೆಯನ್ನೂ ಇಟ್ಟಿದ್ದಳು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸುದಿನ, ಕೂಡಲೇ ಬಟ್ಟೆ ಅಂಗಡಿಯನ್ನು ಹಾಕಿ ಕೊಡುವಂತೆ, ಇಲ್ಲವಾದಲ್ಲಿ ಕೊಟ್ಟ ಹಣ ಸಂಪೂರ್ಣವಾಗಿ ಮರಳಿಸುವಂತೆ ದುಂಬಾಲು ಬಿದ್ದರು. ಇದರಿಂದ ಕೋಪಗೊಂಡ ಚೈತ್ರಾ, ಸುದಿನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.

ನಟ ಪ್ರಕಾಶ್ ರಾಜ್‌ಗೆ ಜೀವ ಬೆದರಿಕೆ ಹಾಕಿದ ಯೂಟ್ಯೂಬ್​ ವಾಹಿನಿ ವಿರುದ್ಧ ಎಫ್​ಐಆರ್‌: ಆರೋಪ ಏನು?

ಕೇಸರಿ ಶಾಲು ಮಾರಾಟ: ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸುದಿನ ಪೂಜಾರಿ, 2015ರಲ್ಲಿ ಗೋರಕ್ಷ ಸಮಾವೇಶದಲ್ಲಿ ಚೈತ್ರಾ ಪರಿಚಯವಾಗಿದ್ದು, ಆ ಬಳಿಕ ನನ್ನ ಮತ್ತು ಅವಳ ಮಧ್ಯೆ ಅಣ್ಣ-ತಂಗಿಯ ಬಾಂಧವ್ಯ ಇತ್ತು. 2018ರಲ್ಲಿ ಬಟ್ಟೆ ಅಂಗಡಿ ತೆಗೆಸಿಕೊಡುವುದಾಗಿ ಹೇಳಿದ್ದು, ಹಿಂದೂ ಸಮಾವೇಶಗಳಲ್ಲಿ ಬಂಟಿಂಗ್ಸ್, ಕೇಸರಿ ಶಾಲುಗಳು ಬೇಕಾಗುತ್ತವೆ. ಅವುಗಳನ್ನು ಪೂರೈಸಬಹುದು ಎಂದಿದ್ದಳು. ಬೇರೆ-ಬೇರೆ ರಾಜಕೀಯ ವ್ಯಕ್ತಿಗಳ ಬಳಿ ನನ್ನನ್ನು ಕರೆದುಕೊಂಡು ಹೋಗಿ ನನಗೆ ನಂಬಿಕೆ ಬರುವಂತೆ ಮಾಡಿದ್ದಳು. ಆ ಬಳಿಕ ಸ್ವಲ್ಪ-ಸ್ವಲ್ಪ ಹಣವನ್ನು ಆಕೆಯ ಖಾತೆಗೆ ಹಾಕಿದ್ದೇನೆ ಎಂದರು.

ಸರ್ಕಾರಿ ಜಾಗ ಒತ್ತುವರಿ ಪತ್ತೆಗೆ 'ಲ್ಯಾಂಡ್‌ ಆಡಿಟ್‌' ನಡೆಸಿ: ಸಿಎಂ ಸಿದ್ದರಾಮಯ್ಯ

ನನ್ನಲ್ಲಿರುವ ದಾಖಲೆಗಳನ್ನು ಈಗಾಗಲೇ ಪೊಲೀಸರಿಗೆ ನೀಡಿದ್ದೇನೆ. 3 ಲಕ್ಷ ರು.ಗಳನ್ನು ಆಕೆಯ ಖಾತೆಗೆ, ಇನ್ನುಳಿದ 2 ಲಕ್ಷ ರು.ಗಳನ್ನು ನಗದಾಗಿ ನೀಡಿದ್ದೇನೆ. ನನಗೆ ಬಟ್ಟೆ ಅಂಗಡಿ ಮಾಡಿಸಿಕೊಡುವುದಾಗಿ ನಂಬಿಸಿ, ಕೊನೆಗೆ ಅವಳೇ ಉಡುಪಿಯಲ್ಲಿ ಒಂದು ಬಟ್ಟೆ ಅಂಗಡಿ ಮಾಡಿಕೊಂಡಳು. ಇದನ್ನು ಪ್ರಶ್ನೆ ಮಾಡಿದಾಗ ನನಗೆ ಉಡುಪಿಯಲ್ಲಿ ಬೇರೊಂದು ಒಳ್ಳೆ ಬಟ್ಟೆ ಅಂಗಡಿ ಮಾಡಿಕೊಡುತ್ತೇನೆ ಎಂದು ನಂಬಿಸಿದ್ದಳು. ನನ್ನ ಮತ್ತೊಬ್ಬ ಸ್ನೇಹಿತ ಕೂಡ 1 ಲಕ್ಷ ರು. ಸಾಲ ಮಾಡಿ ಹಣ ನೀಡಿದ್ದಾನೆ. ಈಗ ಲೋನ್ ಅವನ ಹೆಸರಿನಲಿ ಇದ್ದು, ಹಣ ಮಾತ್ರ ಅವಳ ಬಳಿ ಇದೆ. ಇಂತಹ ಮೋಸದಲ್ಲಿ ತುಂಬಾ ಮಂದಿ ಸಿಕ್ಕಿಬಿದ್ದಿದ್ದಾರೆ. ಅವರೆಲ್ಲ ಬಂದು ದಾಖಲೆ ಸಮೇತ ದೂರು ನೀಡಬೇಕು ಎಂದರು.

click me!