Hijab Row ಮುಸ್ಲಿಂ ವಿದ್ಯಾರ್ಥಿಗಳಿಗೊಂದು ಮನವಿ ಮಾಡಿದ ಚೈತ್ರಾ ಕುಂದಾಪುರ

By Suvarna News  |  First Published Mar 1, 2022, 6:00 PM IST

* ಚೈತ್ರಾ ಕುಂದಾಪುರ ಅವರನ್ನ ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರಾಕರಿಸಿದ ಪೊಲೀಸ್ರು
* ಆಳಂದ ಚಲೋ ಕಾರ್ಯಕ್ರಮದಲ್ಲಿ ಭಾ‍ಷಣ ಮಾಡಲು ಚೈತ್ರಾ ಕುಂದಾಪುರ ಆಗಮಿಸುತ್ತಿದ್ದರು
* ಮುಸ್ಲಿಂ ವಿದ್ಯಾರ್ಥಿಗಳಿಗೊಂದು ಮನವಿ ಮಾಡಿದ ಚೈತ್ರಾ ಕುಂದಾಪುರ


ಯಾದಗಿರಿ, (ಮಾ.01): ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆಯ ಮಹಿಳಾ ಪೋಲಿಸರು ವಶಕ್ಕೆ ಪಡೆದುಕೊಂಡು, ಯಾದಗಿರಿ ಜಿಲ್ಲೆಗೆ ವಾಪಸ್‌ ಕಳುಹಿಸಿದ್ದಾರೆ. 

ಮಂಗಳವಾರ ನಡೆಯಲಿದ್ದ ಆಳಂದ ಚಲೋ ಕಾರ್ಯಕ್ರಮದ ಹಿನ್ನಲೆಯಲ್ಲಿ ಚೈತ್ರಾ ಕುಂದಾಪುರ ಕಲಬುರಗಿಗೆ ಭಾ‍ಷಣ ಮಾಡಲು ಆಗಮಿಸುತ್ತಿದ್ದರು. ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ಆಗಮಿಸುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ, ಅವರನ್ನು ಯಾದಗಿರಿ ಜಿಲ್ಲೆಗೆ ವಾಪಸ್‌ ಕಳುಹಿಸಿದ್ದಾರೆ.

Latest Videos

undefined

Kalaburagi: ಆಳಂದ ಚಲೋಗೆ ಪಟ್ಟು: ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ಇನ್ನು ಈ ಬಗ್ಗೆ ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಸ್ಲಿಮರು ದೇಶದ ಕಾನೂನು ಪಾಲನೆ ಮಾಡುವುದಿಲ್ಲ. ಕಾನೂನು ಪಾಲನೆ ಮಾಡದಿದ್ದರೆ ಅಧಿಕಾರಿಗಳು ಕಾನೂನು ಫಾಲೋ ಮಾಡಿಸಬೇಕು. ಹಿಂದೂಗಳಿಗೆ ಮಾತ್ರ ನಿಷೇಧ ಹಾಕುವ ಗಡ್ಸು, ಧೈರ್ಯ ಅಧಿಕಾರಿಗಳಿಗೆ ಇದೆ. ಆದರೆ, ಮುಸ್ಲಿಂರಿಗೆ ಕಾನೂನು ಪಾಲನೆ ಮಾಡಲು ಹೇಳುವ ಗಡ್ಸ್, ಧೈರ್ಯ ಅಧಿಕಾರಿಗಳಿಗೆ ಇಲ್ಲವಾ..? ಎಂದು ಪ್ರಶ್ನಿಸಿದರು.

ಹಿಜಾಬ್ ವಿವಾದದ ತೀರ್ಪು ಬರುವರೆಗೂ ಕಾಯಬೇಕಿದೆ. ಕೋರ್ಟ್ ತೀರ್ಪು ತಡವಾದರೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ನಷ್ಟ ಆಗುವ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ನನ್ನ ಅನುಕಂಪ ಇದೆ. ಯಾಕೆಂದರೆ ಅವರು ಗೊಂಬೆ  (ಪಪೆಟ್ಸ್) ತರಹ ಆಗಿದ್ದಾರೆ. ಅವರು ಕೇವಲ ಹಿಂದುಗಡೆ ನಿಂತು ಆಡಿಸುವರ ಮೌತ್ ಫೀಸ್ ಆಗಿದ್ದಾರೆ ಎಂದರು. 

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ವಂತ ಯೋಚನಾ ಶಕ್ತಿ ಇಲ್ಲ. ಅಲಂಕಾರಿಕ ವಸ್ತುಗಳಿಗೂ ಹಾಗೂ ಶಾಲೆ ಸಮವಸ್ತ್ರಗಳಿಗೂ ಇರುವ ವ್ಯತ್ಯಾಸ ಮುಸ್ಲಿಂ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಕುಂಕುಮ ಇಡಬೇಡಿ ಮತ್ತೊಂದು ಮಾಡಬೇಡಿ ಅಂದ್ರೆ ನೀವು ಹೇಳಿದಂಗೆ ಕೇಳಲು ಹಿಂದೂಗಳು ಇರುವಂತಹದ್ದು ಅಲ್ಲ. ಅದು ಯಾವತ್ತೂ ನಡೆಯುವದಿಲ್ಲ. ಒಂದು ವಿರೋಧಕ್ಕೆ ಮತ್ತೊಂದು ವಿರೋಧ ಮಾಡುತ್ತಿದ್ದಾರೆ ಹೊರತು,ಕಾಮನ್ ಸೆನ್ಸ್ ಇಟ್ಟುಕೊಂಡು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಹಿಜಾಬ್ ಬಗ್ಗೆ ಮುಸ್ಲಿಂ ಹೆಣ್ಮಕ್ಕಳು ಜಾಗೃತರಾಗಲಿ. ನಾನು ಒಬ್ಬ ಮಹಿಳೆಯಾಗಿ ಹೇಳುತ್ತೇನೆ. ಪ್ರತಿ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯ. ಎಲ್ಲಾ ಹೆಣ್ಣುಮಕ್ಕಳು ಲೌಕಿಕವಾಗಿ ವಿದ್ಯಾರ್ಜನೆ ಪಡೆಯಬೇಕು. ಶಿಕ್ಷಣವು ಬದುಕಿಗೆ ಬೇಕು. ನಿಮಗೆ  ಧರ್ಮ ಮುಖ್ಯ ಅಂದ್ರೆ, ನೀವು ಮದರಸಾಗಳಿಗೆ ಹೋಗಬೇಕು. ವಿದ್ಯಾರ್ಥಿಗಳೇ ಧರ್ಮ ಮುಖ್ಯನೋ ಶಿಕ್ಷಣ ಮುಖ್ಯನೋ ನಿರ್ಧಾರ  ಮಾಡಲಿ ಎಂದು ಹೇಳಿದರು.

ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ
ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 27ರಿಂದ ಮಾರ್ಚ್ 3ರ ವರೆಗೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ ಇಬ್ಬರೂ ಕಲಬುರಗಿ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಭಾನುವಾರ ಆದೇಶ ಹೊರಡಿಸಿದ್ದರು.

ಆಳಂದ ಪಟ್ಟಣದಲ್ಲಿ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮ ಇದ್ದು, ಅದೇ ದಿನ ಮಹಾಶಿವರಾತ್ರಿ ಇರುವುದರಿಂದ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮ ಮತ್ತು ಆಳಂದ ಚಲೋ ಕಾರ್ಯಕ್ರಮಕ್ಕೆ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದರು.

ಇದರಿಂದ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಕಾರಣ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆಗೆ ಪ್ರವೇಶಿಸದಂತೆ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರು ಆಳಂದ ತಾಲೂಕಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರ ಮೇಲೆ ಸಿಆರ್‌ ಪಿಸಿ ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ಅನ್ವಯ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ.

click me!