ಜೀರ್ಣಾವಸ್ಥೆ ತಲುಪಿದ್ದ ವಸಾಹತುಶಾಹಿ ಕಾಲದ ‘ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ’ ರೈಲ್ವೆ ಮಾರ್ಗದಲ್ಲಿ ಬರುವ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ರೈಲ್ವೆ ನಿಲ್ದಾಣಗಳು ಪುನಃ ಜೀವಕಳೆ ಪಡೆದಿವೆ.
ಬೆಂಗಳೂರು (ಡಿ.26): ಜೀರ್ಣಾವಸ್ಥೆ ತಲುಪಿದ್ದ ವಸಾಹತುಶಾಹಿ ಕಾಲದ ‘ಬೆಂಗಳೂರು-ಚಿಕ್ಕಬಳ್ಳಾಪುರ-ಕೋಲಾರ’ ರೈಲ್ವೆ ಮಾರ್ಗದಲ್ಲಿ ಬರುವ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ರೈಲ್ವೆ ನಿಲ್ದಾಣಗಳು ಪುನಃ ಜೀವಕಳೆ ಪಡೆದಿವೆ. ಇದೇ ಮಾರ್ಗದಲ್ಲಿ ಬರುವ ನಂದಿ ಹಾಲ್ಟ್ ನಿಲ್ದಾಣದ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು, ಇನ್ನಾರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ.
ನೈಋತ್ಯ ರೈಲ್ವೆ ಬೆಂಗಳೂರು ವಲಯವು ಭಾರತೀಯ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಟ್ರಸ್ಟ್ (ಇನ್ಟ್ಯಾಕ್) ಸಹಯೋಗದಲ್ಲಿ ಪಾರಂಪರಿಕ ರೈಲ್ವೆ ನಿಲ್ದಾಣಗಳನ್ನು ನವೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ತಲೆಯೆತ್ತಿದ್ದ ಈ ನಿಲ್ದಾಣಗಳು 107 ವರ್ಷ ಪೂರೈಸಿವೆ. ಮದ್ರಾಸ್ ಮತ್ತು ದಕ್ಷಿಣ ಮರಾಠಾ ರೈಲ್ವೆ ಒಪ್ಪಂದದ ಜೊತೆಗೆ ಖಾಸಗಿ ಉದ್ಯಮದ ಸಹಯೋಗದಲ್ಲಿ 1908ರಲ್ಲಿ ನಿರ್ಮಾಣ ಆಗಿದ್ದ 62 ಕಿಮೀ ಉದ್ದದ ಮಾರ್ಗದಲ್ಲಿದ್ದ ಈ ಪಾರಂಪರಿಕ ಕಟ್ಟಡವನ್ನು ಪುನಃ ಬಳಸಿಕೊಳ್ಳಲು ಪುನರುಜ್ಜೀವನಗೊಳಿಸಲಾಗಿದೆ.
undefined
ಬೆಂಗಳೂರು ರೈಲ್ವೆ ವಿಭಾಗ 100% ವಿದ್ಯುದೀಕರಣ..!
ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಕಿತ್ತುಹೋಗಿದ್ದ ಗೋಡೆ, ಚಾವಣಿ, ನೆಲವನ್ನು ದುರಸ್ತಿ ಮಾಡಲಾಗಿದೆ. ಸಣ್ಣ ಹಾಲ್, ದಾಸ್ತಾನು ಕೊಠಡಿ, ಸುತ್ತಲಿನ ಪಡಸಾಲೆಯನ್ನು ಸುಸಜ್ಜಿತಗೊಳಿಸಲಾಗಿದೆ. ಹಿಂದಿನ ಮೈಸೂರು, ವರ್ನಾಕುಲಂ ಪಾರಂಪರಿಕ ವಾಸ್ತುಶೈಲಿಗೆ ಧಕ್ಕೆ ಬಾರದಂತೆ ನವೀಕರಣ ಮಾಡಲಾಗಿದೆ. ಈಗಿನ ಸಿಮೆಂಟ್, ಇಟ್ಟಂಗಿ, ಬಳಸದೇ ಹಿಂದೆ ಬಳಸುತ್ತಿದ್ದ ಸುಣ್ಣದ ಗಾರೆಯಿಂದ ಪ್ಲಾಸ್ಟರ್ ಮಾಡಲಾಗುತ್ತಿದೆ. ನೆಲಕ್ಕೆ ಕಡಪಾ ಕಲ್ಲು, ವಿದ್ಯುತ್‌ಗೆ ಆಗಿನ ಸ್ವಿಚ್‌ಬೋರ್ಡ್, ಚಾವಣಿಗೆ 1916ರ ಮಾಡೆಲ್‌ನ ಮಂಗಳೂರು ಹೆಂಚನ್ನು ಪುನಃ ಬಳಸಿಕೊಳ್ಳಲಾಗಿದೆ. ಪ್ರಸ್ತುತ ಭಿನ್ನ ವಿನ್ಯಾಸ, ಹೆಚ್ಚಿನ ವಿಸ್ತಾರ ಇರುವ ನಂದಿ ಹಾಲ್ಟ್ ರೈಲ್ವೆ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ.
ಎರಡನೇ ಹಂತದಲ್ಲಿ ದೊಡ್ಡಜಾಲದಲ್ಲಿ ಆರ್ಟ್ ಗ್ಯಾಲರಿ, ದೇವನಹಳ್ಳಿಯಲ್ಲಿ ರೈಲ್ವೆ ಕೋಚ್ ಲೈಬ್ರರಿ, ಆವತಿಹಳ್ಳಿಯಲ್ಲಿ ರೇಷ್ಮೇ ಆರ್ಟ್ ಗ್ಯಾಲರಿ ಹಾಗೂ ನಂದಿ ಹಾಲ್ಟ್‌ನಲ್ಲಿ ರೈಲ್ ಮ್ಯೂಸಿಯಂ ಮಾಡಲು ತೀರ್ಮಾನಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿಗಳು ತಿಳಿಸಿದರು.
ರಾಮ-ಸೀತಾಮಾತೆ ಜನ್ಮಸ್ಥಳ ಸಂಪರ್ಕಿಸಲು ಹೊಸ ರೈಲು, ಡಿ.30ರಂದು ಮೋದಿ ಚಾಲನೆ
ಪ್ರಯಾಣಿಕರ ಕೊರತೆ: ಈ ಮಾರ್ಗದಲ್ಲಿ ದೇವನಹಳ್ಳಿವರೆಗೆ ಸಂಚರಿಸುತ್ತಿದ್ದ ಆರು ರೈಲುಗಳನ್ನು ಕಳೆದ ಡಿ.11ರಿಂದ ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ದಂಡು ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5.10, ಸಂಜೆ 4 ಗಂಟೆ, ಕೆಎಸ್‌ಆರ್ ನಿಲ್ದಾಣದಿಂದ ಬೆಳಗ್ಗೆ 8.35 ಹಾಗೂ ಸಂಜೆ 6.10 ಮತ್ತು ಯಶವಂತಪುರ ನಿಲ್ದಾಣದಿಂದ ಬೆಳಗ್ಗೆ 10.10ಕ್ಕೆ ರೈಲುಗಳು ತೆರಳುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಈ ಮಾರ್ಗದ ರೈಲಿಗೆ ಹೆಚ್ಚಿನ ಪ್ರಯಾಣಿಕರು ಬರುವಂತೆ ಅಗತ್ಯ ಪ್ರಚಾರ ಕೈಗೊಳ್ಳಲಾಗುತ್ತಿದೆ. ಬೆಳಗ್ಗೆ 5.10ಕ್ಕಿರುವ ರೈಲನ್ನು ಇನ್ನೂ ಬೇಗ ಬಿಡುವಂತೆ ಪ್ರಯಾಣಿಕರ ಬೇಡಿಕೆ ಇದೆ. ಸಮಯ, ತಾಂತ್ರಿಕ ಅಂಶ ಗಮನಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಾರಂಪರಿಕ, ಸಾಂಸ್ಕೃತಿಕ ಪ್ರಾಮುಖ್ಯತೆ ಇರುವ ಈ ರೈಲ್ವೆ ನಿಲ್ದಾಣಗಳ ಸಂರಕ್ಷಣೆ ಅಗತ್ಯ ಮನಗಂಡು, ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ, ಮುಂದೆಯೂ ಬಳಸಿಕೊಳ್ಳುವ ದೃಷ್ಟಿಯಿಂದ ನವೀಕರಣ ಮಾಡಲಾಗಿದೆ ಎನ್ನುತ್ತಾರೆ ನೈಋತ್ಯ ರೈಲ್ವೆ ಎಡಿಆರ್‌ಎಂ ಕುಸುಮಾ ಹರಿಪ್ರಸಾದ್.