ಮೊದಲು ಜಾತಿ ಗಣತಿ ವರದಿ ಬಿಡುಗಡೆ ಆಗಲಿ. ಅದರಲ್ಲಿ ಏನಿದೆ ಎಂದು ಚರ್ಚೆ ಆಗಲಿ. ವರದಿಯನ್ನು ನೋಡದೇ, ತಿಳಿಯದೇ, ಸುಮ್ಮನೇ ಆರಂಭದಲ್ಲೇ ವಿರೋಧ ಮಾಡುತ್ತಿರುವುದು ಸರಿಯಲ್ಲ: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
ಮೈಸೂರು(ಡಿ.26): ಜಾತಿ ಗಣತಿ ವರದಿ ಸ್ವೀಕಾರಕ್ಕೆ ವೀರಶೈವ ಲಿಂಗಾಯತ ಸಮುದಾಯ ಯಾಕೆ ವಿರೋಧ ಮಾಡುತ್ತಿದಿಯೋ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜಾತಿ ಗಣತಿ ವರದಿ ಬಿಡುಗಡೆ ಆಗಲಿ. ಅದರಲ್ಲಿ ಏನಿದೆ ಎಂದು ಚರ್ಚೆ ಆಗಲಿ. ವರದಿಯನ್ನು ನೋಡದೇ, ತಿಳಿಯದೇ, ಸುಮ್ಮನೇ ಆರಂಭದಲ್ಲೇ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹಿಂದಿನ ಜಾತಿಗಣತಿ ವ್ಯವಸ್ಥಿತವಾಗಿ ನಡೆದಿಲ್ಲ; ಹೊಸದಾಗಿ ಸಮೀಕ್ಷೆ ಆಗಬೇಕು: ಬಿಎಸ್ ಯಡಿಯೂರಪ್ಪ
ಇದೇ ರೀತಿ ಅಂದು ಹಾವನೂರು ಆಯೋಗದ ವರದಿಯನ್ನು ಕೂಡ ಸಾಕಷ್ಟು ವಿರೋಧ ಮಾಡಿದ್ದರು. ಆದರೆ, ಅಂದಿನ ಸಿಎಂ ದೇವರಾಜ ಅರಸು ಅವರು ಎಲ್ಲರ ವಿರೋಧದ ನಡುವೇಯೂ ಹಾವನೂರು ವರದಿಯನ್ನು ಬಿಡುಗಡೆ ಮಾಡಿದರು. ಈಗಲೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಬೇಕು. ಈ ವಿಚಾರದಲ್ಲಿ ಯಾರ ಮುಲಾಜಿಗೂ ಒಳಗಾಗಬಾರದು ಎಂದು ಅವರು ಆಗ್ರಹಿಸಿದರು.
ವರದಿ ಬಿಡುಗಡೆಯಾದ ಬಳಿಕವೂ ಚರ್ಚೆ ನಡೆಯಲಿ. ಏನು ಇದೆ, ಏನಿಲ್ಲ ಎನ್ನುವುದನ್ನು ಚರ್ಚೆ ಮಾಡಲಿ. ಸುಮ್ಮನೇ ಈಗಲೇ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಹಿಜಾಬ್ ವಿಚಾರ ಕುರಿತು ಪ್ರಶ್ನೆಗೆ, ಆ ವಿಚಾರವನ್ನು ಈ ಸಮಯದಲ್ಲಿ ಮಾತನಾಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ಯಾವುದೇ ಪ್ರತಿಕ್ರಿಯೆ ನೀಡದೇ ಎಚ್. ವಿಶ್ವನಾಥ್ ಜಾರಿಕೊಂಡರು.