ಬೆಂಗಳೂರು (ಸೆ.10): ಎರಡು ದಿನಗಳ ದೆಹಲಿ ಪ್ರವಾಸವು ಬಹಳ ಫಲಪ್ರದವಾಗಿದ್ದು, ವಿವಿಧ ಇಲಾಖೆಯಲ್ಲಿನ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಆರ್.ಟಿ.ನಗರದ ನಿವಾಸ ಬಳಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಹೊರವಲಯದ ದಾಬಸ್‌ಪೇಟೆಯಿಂದ ಹೊಸೂರುವರೆಗಿನ ಉಪನಗರ ರಿಂಗ್‌ರೋಡ್ ಅನ್ನು ಭಾರತ್ ಮಾಲಾ ಮೊದಲನೇ ಯೋಜನೆಯಡಿ ಕೈಗೊಳ್ಳಲಾಗಿದೆ. ಅದರ ಭೂಸ್ವಾಧೀನ ವಿವಾದವನ್ನು ಬಗೆಹರಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ರಸ್ತೆ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ಅದೇ ರೀತಿ ವಿಜಯಪುರ-ಸಂಕೇಶ್ವರ ಹೆದ್ದಾರಿ ವಿಸ್ತರಣೆಗೆ ಒಪ್ಪಿಕೊಳ್ಳಲಾಗಿದ್ದು, ಡಿಪಿಆರ್ ನಡೆಯುತ್ತದೆ. ಅಲ್ಲದೆ, ಇನ್ನೂ ನಾಲ್ಕು ಹೆದ್ದಾರಿಗಳನ್ನು ಭಾರತ್ ಮಾಲಾ ಎರಡನೇ ಹಂತದಲ್ಲಿ ತೆಗೆದುಕೊಳ್ಳಲು ಕೇಂದ್ರವು ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಇದ್ದಾರೆ. ಏನ್ ಸಮಾಚಾರ?
ಶಿರಾಡಿಘಾಟ್ ರಸ್ತೆ ಕುರಿತು ಮಾತುಕತೆ ನಡೆಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಅದನ್ನು ಸಹ ಮಾಡಿಕೊಡಲು ಕೇಂದ್ರ ಸಚಿವ ಗಡ್ಕರಿ ಆಶ್ವಾಸನೆ ನೀಡಿದ್ದಾರೆ. ಚತುಷ್ಪಥ ಮಾರ್ಗ ನಿರ್ಮಾಣದ ಬಗ್ಗೆ ಆದಷ್ಟುಬೇಗ ಕಾಮಗಾರಿ ಪ್ರಾರಂಭಿಸಲು ಮಾತುಕತೆ ನಡೆಸಲಾಗಿದೆ ಎಂದರು.
ರೈಲ್ವೆ ಯೋಜನೆ, ಜಿಎಸ್‌ಟಿ ಪರಿಹಾರ:
ಉಪನಗರ ರೈಲ್ವೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣದ ಕಾಮಗಾರಿ ಕೂಡಲೇ ತೆಗೆದುಕೊಳ್ಳಲು ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ. ಪ್ರಮುಖ ಮಾರ್ಗಗಳ ಕುರಿತು ಸಹ ಚರ್ಚೆ ನಡೆಸಲಾಗಿದೆ. ತುಮಕೂರಿನಿಂದ ದಾವಣಗೆರೆ, ಹುಬ್ಬಳ್ಳಿಯಿಂದ ಬೆಳಗಾವಿ, ಬೀದರ್-ಕಲಬುರಗಿ ಮಾರ್ಗಗಳನ್ನು ಆದಷ್ಟುಬೇಗ ಕಾರ್ಯಗತ ಮಾಡಬೇಕು ಎಂದು ಮನವಿ ಮಾಡಲಾಗಿದೆ. ರಾಜ್ಯದಿಂದ ಭೂಮಿ ನೀಡಬೇಕಾಗಿದ್ದು, ಶೇ.50ರಷ್ಟುವೆಚ್ಚ ಭರಿಸಲು ನಾವು ಸಿದ್ಧರಿದ್ದೇವೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಜಿಎಸ್‌ಟಿ ಪರಿಹಾರವನ್ನು ಮತ್ತೆ ಮುಂದುವರಿಸಬೇಕು. ನಬಾರ್ಡ್ ಯೋಜನೆಯನ್ನು ಕರ್ನಾಟಕಕ್ಕೆ ವಿಶೇಷ ಅನುಷ್ಠಾನ ಮಾಡಬೇಕು ಎಂದು ಕೋರಲಾಗಿದೆ. ಈ ಸಂಬಂಧ ಒಂದು ಸಭೆ ಮಾಡಲಾಗಿದ್ದು, ಮತ್ತೊಂದು ಸಭೆ ನಡೆಸಿ ಅವರೇ ಬಂದು ಪ್ರಾರಂಭಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಆರ್‌ಸಿ ಜೊತೆ ಫಲಪ್ರದ ಮಾತುಕತೆ:
ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ವಿಶೇಷ ಕಾರ್ಯಕ್ರಮ ನೀಡುವ ಕುರಿತು ಚರ್ಚಿಸಲಾಗಿದೆ. ಡಿಜಿಟೈಸೇಶನ್ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾತುಕತೆ ನಡೆಸಿ ಮುಂದುವರಿಯಬೇಕು ಎಂದಿದ್ದಾರೆ. ಬೆಂಗಳೂರು ಮತ್ತು ಕೋಲಾರ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಪಾರ್ಕ್ ಅನ್ನು 400 ಎಕರೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಜಾಲವನ್ನು ವಿಸ್ತರಣೆ ಮಾಡುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ. ಸ್ಕಿಲ್ ವಿಶ್ವವಿದ್ಯಾಲಯ ಮಾಡಬೇಕು ಎನ್ನುವ ಉದ್ದೇಶ ಅವರಿಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
400 ಕೋಟಿ ರು. ಬಿಡುಗಡೆ:
ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 400 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಇನ್ನು 1,500 ಕೋಟಿ ರು. ಬಿಡುಗಡೆಯಾಗಬೇಕು. ರಾಜ್ಯದಿಂದ ಕೆಲವು ವಿವರಣೆ ಕೊಡಬೇಕಿದೆ. ಅದು ಮುಗಿದ ಬಳಿಕ ಬಿಡುಗಡೆ ಮಾಡಲಿದ್ದಾರೆ ಎಂದರು.
ಕಲಬುರಗಿಗೆ ಬಿಜೆಪಿ ಮೇಯರ್
ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಬಗ್ಗೆ ಇನ್ನೂ ಮಾತುಕತೆ ಆರಂಭಿಕ ಹಂತದಲ್ಲಿದೆ. ಆದರೆ, ಅಲ್ಲಿ ಬಿಜೆಪಿಯವರೇ ಮೇಯರ್ ಆಗಲಿದ್ದಾರೆ ಎನ್ನುವ ವಿಶ್ವಾಸ ಇಟ್ಟುಕೊಳ್ಳಿ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ