ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡದ ಸರ್ಕಾರ: ಹೈಕೋರ್ಟ್‌ಗೆ ಸಿಬಿಐ ಮೊರೆ

By Govindaraj SFirst Published Jan 6, 2023, 10:06 AM IST
Highlights

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.

ಬೆಂಗಳೂರು (ಜ.06): ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.

ಆಂಧ್ರಪ್ರದೇಶದ ಕರ್ನೂಲ್‌ ಮತ್ತು ತೆಲಂಗಾಣದ ಹೈದರಾಬಾದ್‌ ಮತ್ತು ರಂಗಾರೆಡ್ಡಿ ಜಿಲ್ಲೆಯಲ್ಲಿ ಗಳಿಸಿರುವ ಸುಮಾರು 19.14 ಕೋಟಿ ರು. ಬೆಲೆ ಬಾಳುವ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಸಾಕಷ್ಟುಪ್ರಯತ್ನ ಮಾಡುತ್ತಿದ್ದಾರೆ. ಅವುಗಳ ನೋಂದಣಿ ಮಾಡದಂತೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಿಜಿಸ್ಟ್ರಾರ್‌ಗೆ ಕೋರಲಾಗಿದೆ. ಇದೇ ವೇಳೆ ಈ ಆಸ್ತಿ ಜಪ್ತಿ ಮಾಡಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2022ರ ಆ.30ರಂದು ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಆ ಮನವಿಯನ್ನು ಈವರೆಗೂ ಸರ್ಕಾರ ಪರಿಗಣಿಸಿಲ್ಲ. ಹಾಗಾಗಿ, ತಮ್ಮ ಮನವಿಯನ್ನು ತುರ್ತಾಗಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಸಿಬಿಐ ಹೈಕೋರ್ಟ್‌ಗೆ ಕೋರಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಗಂಗಾವತಿ ದರ್ಗಾಕ್ಕೆ 6 ಕೋಟಿ ಅನುದಾನ: ಜನಾರ್ದನ ರೆಡ್ಡಿ ಭರವಸೆ

ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಓಬಳಾಪುರಂ ಮೈನಿಂಗ್‌ ಕಂಪೆನಿ ಲಿಮಿಟೆಡ್‌ ಮತ್ತು ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ ಲಿಮಿಟೆಡ್‌ನ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರ ವಿರುದ್ಧ 2015ರಲ್ಲಿ ಆರೋಪ ಪಟ್ಟಿಸಲ್ಲಿಸಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ರೆಡ್ಡಿ ರಾಜ್ಯದ ಬೊಕ್ಕಸಕ್ಕೆ 198 ಕೋಟಿ ರು. ನಷ್ಟಉಂಟು ಮಾಡಿದ್ದಾರೆ. 2015ರಲ್ಲಿ ರೆಡ್ಡಿಗೆ ಸೇರಿದ 65.05 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವನ್ನು ಇದೇ ಮಾದರಿಯಲ್ಲಿ ಕೋರಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಅನುಮತಿಸಿದ ಬಳಿಕ ಆ ಆಸ್ತಿಗಳ ಜಪ್ತಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲಾಗಿತ್ತು ಎಂದು ಸಿಬಿಐ ಅರ್ಜಿಯಲ್ಲಿ ವಿವರಿಸಿದೆ.

ಜನಾರ್ದನ ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನ: ಸಚಿವ ಶ್ರೀರಾಮುಲು

ಆದರೆ, ರೆಡ್ಡಿ ಮತ್ತು ಇತರೆ ಆರೋಪಿಗಳ ವಿರುದ್ಧದ ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿಯಿರುವುದರಿಂದ 2015ರಲ್ಲಿ ಜಪ್ತಿ ಆದೇಶ ಕೋರಿ ಸಲ್ಲಿಸಿದ್ದ ಮನವಿ ಬಾಕಿ ಉಳಿದಿತ್ತು. ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ 2022ರ ಮಾ.29ರಂದು ವಿಶೇಷ ನ್ಯಾಯಾಲಯ ಸಿಬಿಐನ ಆಸ್ತಿ ಜಪ್ತಿ ಕೋರಿಕೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುವಂತೆ ರೆಡ್ಡಿಗೆ ಆದೇಶಿಸಿತ್ತು. ಈ ಮಧ್ಯೆ ಸಿಬಿಐ ತನಿಖೆ ಮುಂದುವರಿಸಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ 219 ಹೆಚ್ಚುವರಿ ಆಸ್ತಿಗಳನ್ನು ಪತ್ತೆ ಮಾಡಿದೆ. ಇವುಗಳನ್ನು ಜಪ್ತಿ ಮಾಡಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ 2022ರ ಆ.30ರಂದು ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

click me!