
ಬೆಂಗಳೂರು (ಜ.06): ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು 2024ರ ಜನವರಿ 26ಕ್ಕೆ ಲೋಕಾರ್ಪಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ಹೊಸಕೋಟೆ ಬಳಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಗುರುವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಈ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು 2024ರ ಮಾರ್ಚ್ ತನಕ ಗಡುವಿದೆ. ಒಟ್ಟು 262 ಕಿ.ಮೀ. ಹೆದ್ದಾರಿ ಮಾರ್ಗದಲ್ಲಿ ಸದ್ಯ 231 ಕಿ. ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 31 ಕಿ. ಮೀ ಮಾರ್ಗದಲ್ಲಿ ಅರಣ್ಯ ಭೂಮಿ ಇದ್ದು, ಅದರ ಸ್ವಾಧೀನ ಸಂಬಂಧ ರಾಜ್ಯ ಸರ್ಕಾರದಿಂದ ಅನುಮತಿ ದೊರಕಬೇಕಿದೆ. ಇದೆಲ್ಲವೂ ಸಿಕ್ಕರೆ 2024ರ ಜನವರಿ 26ರಂದೇ ಲೋಕಾರ್ಪಣೆ ಮಾಡಲಾಗುವುದು ಎಂದರು.
ಸದ್ಯ ಬೆಂಗಳೂರು - ಚೆನ್ನೈ ನಡುವೆ 300 ಕಿ.ಮೀ ದೂರದ ರಸ್ತೆಯಲ್ಲಿ ಸಾಗಲು 5 ಗಂಟೆ ಬೇಕಾಗುತ್ತಿದೆ. ಹೊಸ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಾರ್ಗ ಬದಲಿಸಿರುವುದರಿಂದ 262 ಕಿ.ಮೀ.ಗೆ ಇಳಿಕೆಯಾಗಿದೆ. 8 ಪಥದ ಈ ರಸ್ತೆಯಲ್ಲಿ ಹೊಸಕೋಟೆಯಿಂದ ಆರಂಭವಾಗಿ ಚೆನ್ನೈ ಹೊರ ವರ್ತುಲ ರಸ್ತೆ ತನಕ ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನಗಳು ಚಲಿಸಬಹುದು. 262 ಕಿ.ಮೀ ದೂರವನ್ನು 2 ಗಂಟೆ 15 ನಿಮಿಷಗಳಲ್ಲೇ ತಲುಪಬಹುದು ಎಂದು ಹೇಳಿದರು.
ಬೆಂಗಳೂರು-ಮೈಸೂರು ಹೈವೇ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಪೈಕಿ ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರ ಪ್ರದೇಶದಲ್ಲಿ 85 ಕಿ.ಮೀ ಹಾಗೂ ತಮಿಳುನಾಡಿನಲ್ಲಿ 106 ಕಿ.ಮೀ ಇದೆ. ಒಟ್ಟಾರೆ 17, 000 ಕೋಟಿ ರು. ಮೊತ್ತದ ಯೋಜನೆಯಲ್ಲಿ ಕರ್ನಾಟಕ ಭಾಗದ ರಸ್ತೆಗೆ 5,069 ಕೋಟಿ ರು. ವೆಚ್ಚವಾಗುತ್ತಿದೆ. ಮಾರ್ಗ ಮಧ್ಯೆ 3ರಿಂದ 5 ಎಕರೆ ಜಾಗ ಇರುವ ಕಡೆ ಅಮೃತ ಮಹೋತ್ಸವ ಪಕ್ಷಿ ಧಾಮ ಮತ್ತು ಅಮೃತ ಸರೋವರ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಸಾಗಣೆ ವೆಚ್ಚ ಶೇ. 10ಕ್ಕಿಂತ ಕಡಿಮೆ: ಭಾರತದಲ್ಲಿ ಉತ್ಪಾದನಾ ವೆಚ್ಚದಲ್ಲಿ ಶೇ.16ರಷ್ಟುಸಾಗಣೆ ವೆಚ್ಚವಾಗಿದೆ. ಆದರೆ, ಚೀನಾದಲ್ಲಿ ಶೇ 10ರಷ್ಟು, ಅಮೆರಿಕದಲ್ಲಿ ಶೇ.12ರಷ್ಟುಇದೆ. ಈ ವೆಚ್ಚ ಕಡಿಮೆ ಮಾಡಲು ಈ ರೀತಿಯ ರಸ್ತೆಗಳು ನೆರವಾಗಲಿವೆ. ಚೆನ್ನೈ-ಬೆಂಗಳೂರು ನಡುವಿನ ಹೊಸ ಹೆದ್ದಾರಿ ಕಾರ್ಯಾರಂಭಗೊಂಡರೆ ಈ ಭಾಗದ ಸರಕು ಸಾಗಣೆ ವೆಚ್ಚ ಶೇ.10ಕ್ಕಿಂತ ಕಡಿಮೆಯಾಗಲಿದೆ ಎಂದರು.
ಸ್ಥಳೀಯರ ಬಳಕೆಗೂ ಅನುವು ಮಾಡಿಕೊಡಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಂತಹ ಸ್ಥಳೀಯ ಪಟ್ಟಣಗಳ ಜನರ ಬಳಕೆಗೂ ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಹೆದ್ದಾರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ಹೆಸರು ಇಡಬೇಕು ಎಂದು ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರಿ ಬಳಿ ಸಿಕ್ತು 10 ಲಕ್ಷ ಕ್ಯಾಶ್: ಪಿಡಬ್ಲ್ಯುಡಿ ಎಂಜಿನಿಯರ್ ಬಂಧನ
ಕಾಂಗ್ರೆಸ್‌ನ ಪರಿಷತ್ ಸದಸ್ಯರಾದ ಮಧು ಮಾದೇಗೌಡ, ಮರಿತಿಬ್ಬೇಗೌಡ ಅವರ ಜತೆಯಲ್ಲಿ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಮನವಿ ಪತ್ರ ನೀಡಿರುವ ಅವರು, ಹೆದ್ದಾರಿಯ ಎರಡೂ ಕಡೆಗಳಲ್ಲಿ ಹಾಕಿರುವ ಫೆನ್ಸಿಂಗ್ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಇವುಗಳನ್ನು ಹೊಸದಾಗಿ ಅಳವಡಿಸಬೇಕು. ರಸ್ತೆಗಳಲ್ಲಿ ಉಬ್ಬು ತಗ್ಗುಗಳನ್ನು ಸರಿಪಡಿಸಬೇಕು, ಮೇಲ್ಸೇತುವೆಗಳಲ್ಲಿ ಮಳೆ ಗಾಲದಲ್ಲಿ ನೀರು ನಿಂತುಕೊಳ್ಳುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಸ್ತೆಯ ಎರಡೂ ಕಡೆ ಒಳಚರಂಡಿಯ ವ್ಯವಸ್ಥೆ ಮಾಡಬೇಕು. ಮೈಸೂರು-ಬೆಂಗಳೂರು ಮಧ್ಯ ಭಾಗದಲ್ಲಿ ಶೌಚಾಲಯ ವುಳ್ಳ ವಿಶ್ರಾಂತಿ ತಂಗುದಾಣ ನಿರ್ಮಾಣ ಮಾಡಬೇಕೆಂದು ಮನವಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ