ಹಾಲಿ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ.. ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಬೆಂಗಳೂರು (ಮಾ.10): ಹಾಲಿ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ.. ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ರಾಜ್ಯದ ನೀರಿನ ಬಿಕ್ಕಟ್ಟು ವಿಚಾರವಾಗಿ ಬಿಜೆಪಿ ಆರೋಪಗಳಿಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬರಗಾಲ ಪರಿಸ್ಥಿತಿಯಲ್ಲಿ ನಮ್ಮ ಜನರಿಗೆ, ರೈತರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ, ಜೆಡಿಎಸ್ ಮುಖಂಡರಿಗೆ ಬುದ್ಧಿ ಭ್ರಮಣೆಯಾಗಿದೆ’ ಎಂದು ಆರೋಪಿಸಿದರು.
undefined
ಬೆಂಗಳೂರು ನೆಪವೊಡ್ಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಕಾಂಗ್ರೆಸ್ ಸರ್ಕಾರ: ಮಂಡ್ಯದ ಡಾ.ಇಂದ್ರೇಶ್ ಆಕ್ಷೇಪ
‘ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡುತ್ತಿದ್ದೇವೆ. ಬಿಜೆಪಿ ಮುಖಂಡರು, ಎಚ್.ಡಿ.ದೇವೇಗೌಡರು ಮೊದಲು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ. ಬಳಿಕ ಕಾವೇರಿ ವಿಚಾರ ಮಾತನಾಡಲಿ’ ಎಂದು ಸವಾಲೆಸೆದರು.
‘ಬೆಂಗಳೂರು ಜನರಿಗೆ ಪೂರೈಸಲೆಂದೇ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ ಅವರು, ‘ಬಿಜೆಪಿ ತನ್ನ ತಪ್ಪು ಮುಚ್ಚಿಕೊಳ್ಳಲು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ನಾವು ಈವರೆಗೂ ತಮಿಳುನಾಡು ಸರ್ಕಾರಕ್ಕೆ ಬಗ್ಗಿಲ್ಲ. ನಿರಂತರವಾಗಿ ಕಾನೂನು ಹೋರಾಟ ಮುಂದುವರಿಸಿದ್ದೇವೆ. ಆ ಮೂಲಕ ನಮ್ಮ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ನೀರು ಹರಿಸಿದ್ದೇವೆ. 66 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಬಿಜೆಪಿಯುವರು ಅನುಮತಿ ಕೊಡಿಸಿದರೆ ತಮಿಳುನಾಡಿನವರು ಕೇಳಿದಾಗ ನೀರು ಕೊಡಬಹುದು’ ಎಂದರು.
ತೀವ್ರ ಬರಗಾಲದ ನಡುವೆಯೂ ತಮಿಳನಾಡಿಗೆ ಮತ್ತೆ ಕಾವೇರಿ ನೀರು? ರಾಜ್ಯಸರ್ಕಾರದ ವಿರುದ್ಧ ಮಂಡ್ಯ ರೈತರು ಆಕ್ರೋಶ
ರೈತ ಮುಖಂಡರ ಆಕ್ರೋಶ
ಬೆಂಗಳೂರು ಜನರಿಗೆ ಕುಡಿಯುವ ನೀರು ಪೂರೈಸುವ ನೆಪದಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ ಎಂದು ಆರೋಪಿಸಿ ಸರ್‌ಎಂವಿ ಪ್ರತಿಮೆ ಎದುರು ರೈತ ಮುಖಂಡರು ಪ್ರತಿಭಟಿಸಿದರು. ಬೆಂಗಳೂರು–ಮೈಸೂರು ಹೆದ್ದಾರಿ ತಡೆದು, ಕಪ್ಪು ಬಾವುಟ ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಭಾನುವಾರ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಗರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.