ಬರದ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯಸರ್ಕಾರದ ವಿರುದ್ಧ ಕಾವೇರಿ ರೋಷಾಗ್ನಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಂಡ್ಯ/ರಾಮನಗರ (ಸೆ.25): ಬರದ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ರೋಷಾಗ್ನಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ, ಇದಕ್ಕೆ ಪೂರಕವಾಗಿ ಅಂದು ರಾಮನಗರ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಮಳವಳ್ಳಿ ತಾಲೂಕು ಬಂದ್ ನಡೆಸಲೂ ನಿರ್ಧರಿಸಲಾಗಿದೆ. ಕರ್ನಾಟಕ ಜಲಸಂರಕ್ಷಣಾ ಸಮಿತಿ ಹಾಗೂ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್ ಮಾಡಲು ನಿರ್ಧರಿಸಿವೆ.
ಬೆಂಗಳೂರಿಗರ ಈ ಬಂದ್‌ಗೆ ಬೆಂಬಲ ನೀಡುವ ಸಲುವಾಗಿ ರಾಮನಗರ ಜಿಲ್ಲೆ, ಮಳವಳ್ಳಿ, ಕೆ.ಆರ್.ಪೇಟೆ ಬಂದ್‌ಗೂ ವಿವಿಧ ಸಂಘಟನೆಗಳು ಭಾನುವಾರ ಸಭೆ ನಡೆಸಿ ತೀರ್ಮಾನಿಸಿವೆ. ಇನ್ನು ಶನಿವಾರವಷ್ಟೇ ಬಂದ್‌ಗೆ ಸಾಕ್ಷಿಯಾಗಿದ್ದ ಮಂಡ್ಯ ನಗರ ಮತ್ತು ಮದ್ದೂರು ತಾಲೂಕಿನಲ್ಲೂ ಅಂದು ಪ್ರತಿಭಟನೆ ನಡೆಸಿ ಬೆಂಗಳೂರಿಗರ ಹೋರಾಟಕ್ಕೆ ಬೆಂಬಲ ನೀಡಲು ವಿವಿಧ ಸಂಘಟನೆಗಳಿಂದ ನಿರ್ಧಾರವಾಗಿದೆ. ಜತೆಗೆ, ಮಂಡ್ಯದಿಂದ ಒಂದಷ್ಟು ಹೋರಾಟಗಾರರು ಬೆಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಲು ತೀರ್ಮಾನಿಸಲಾಗಿದೆ.
undefined
ಕಾವೇರಿದ ಕಾವೇರಿ ಕಿಚ್ಚು: ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ?
ಹಳೆ ಮೈಸೂರಲ್ಲಿ ನಿಲ್ಲದ ಹೋರಾಟ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ರಾಜ್ಯ ಸರ್ಕಾರದ ವಿರುದ್ಧ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾನುವಾರವೂ ಪ್ರತಿಭಟನೆ ಮುಂದುವರಿದಿದೆ. ಮಂಡ್ಯ, ಚಾಮರಾಜನಗರ, ರಾಮನಗರದಲ್ಲಿ ಪ್ರತಿಭಟನೆ ನಡೆಸಿದ ರೈತಪರ ಸೇರಿದಂತೆ ವಿವಿಧ ಸಂಘಟನೆಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಆದೇಶ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬಾರುಕೋಲ್ ಚಳವಳಿ ನಡೆಸಿ ಕೆಲಕಾಲ ತಮಿಳುನಾಡಿನ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದರೆ, ಮಂಡ್ಯದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಕಾವೇರಿ ನದಿ ನೀರಿನ ರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಮತ್ತು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಸ್ಥಾಪಕ ಗಿರೀಶ್ ಶಿವಾರ್ಚಕ ನೇತೃತ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಹೆದ್ದಾರಿಯಲ್ಲಿ ಮಲಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಮನಗರ ಹಾಗೂ ಕೊಳ್ಳೇಗಾಲದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು.
ಭತ್ತದ ಬೆಳೆಗೆ ಭದ್ರಾ ನೀರಿಗಾಗಿ ರೈತರ ಆಗ್ರಹ: ಇಂದು ದಾವಣಗೆರೆ ಜಿಲ್ಲೆ ಬಂದ್!
ಹೇಮಾವತಿ ಡ್ಯಾಂಗೆ ಮುತ್ತಿಗೆ ಇಂದು: ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಸೋಮವಾರ ಬೆಳಗ್ಗೆ 10.30ಕ್ಕೆ ಗೊರೂರಿನ ಹೇಮಾವತಿ ಅಣೆಕಟ್ಟೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾಹಿತಿ ನೀಡಿದ್ದಾರೆ.