ಕಾವೇರಿ ಜಲವಿವಾದ: ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಲಿ- ತಂಗಡಗಿ

By Kannadaprabha NewsFirst Published Sep 27, 2023, 2:32 AM IST
Highlights

ಬಿಜೆಪಿಯವರು ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದನ್ನು ಬಿಡಬೇಕು. ಕೇಂದ್ರದ ಮನವೊಲಿಸುವ ಪ್ರಯತ್ನ ಮಾಡಬೇಕು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಏಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಕೊಪ್ಪಳ (ಸೆ.27) :  ಬಿಜೆಪಿಯವರು ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದನ್ನು ಬಿಡಬೇಕು. ಕೇಂದ್ರದ ಮನವೊಲಿಸುವ ಪ್ರಯತ್ನ ಮಾಡಬೇಕು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಏಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದನ್ವಯ ನೀರು ಬಿಡಲಾಗಿದೆ. ಬಿಜೆಪಿಯವರು ಕೂಡಲೇ ಕೇಂದ್ರದ ಮೊರೆ ಹೋಗಿ, ಪ್ರಧಾನಿ ಮಧ್ಯಪ್ರವೇಶಿಸುವಂತೆ ಮಾಡಲಿ. ಈ ಮೂಲಕ ರಾಜ್ಯದ ಹಿತ ಕಾಯಲಿ ಎಂದರು.

 ಕಾವೇರಿ ವಿಚಾರದಲ್ಲಿ ನಮ್ಮಲ್ಲೇ ಒಗ್ಗಟ್ಟಿಲ್ಲ: ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ಮಾತುಕತೆ ಮಾಡಿದ್ದಾರೆ:

ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಾರೆ. ಇಂದಿರಾಗಾಂಧಿ ಕಾಲದಿಂದಲೂ ಇಂಥ ಸಮಸ್ಯೆಗಳು ಬಂದಾಗ ಮಾತುಕತೆ ಮಾಡಿ, ಬಗೆಹರಿಸಿದ ಉದಾಹರಣೆಗಳು ಇವೆ. ಈಗ್ಯಾಕೆ ಮಾಡುತ್ತಿಲ್ಲ? ಎಂದು ಕಿಡಿಕಾರಿದರು.

ಬಿಜೆಪಿಯ ಸಿ.ಟಿ. ರವಿ ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ರಾಜ್ಯದ ಹಿತಕ್ಕಾಗಿ ಕೇಂದ್ರದ ಮನವೊಲಿಸುವ ಪ್ರಯತ್ನ ಮಾಡಿದರೆ ಒಳ್ಳೆಯದು ಎಂದರು.

ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಏಕೆ ಹೇಳುತ್ತಿದ್ದಾರೆ? ತಮ್ಮದೇ ಸರ್ಕಾರ ಇದ್ದಾಗ ಕೈಬಿಟ್ಟು ಹೋದವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈಗ ಸುಳ್ಳು ಏಕೆ ಹೇಳುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಜೆಡಿಎಸ್ ಮುಳುಗುವ ಹಡಗು:

ಜೆಡಿಎಸ್ ಈಗ ಮುಳುಗುವ ಹಡಗು ಆಗಿದೆ. ಹೀಗಾಗಿ ಬಿಜೆಪಿಯವರು ಕೈಜೋಡಿಸುತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಆರೆಸ್ಸೆಸ್‌ನ್ನು ಕಟುವಾಗಿ ಟೀಕಿಸಿದ್ದರು. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದವರು ಹೇಗೆ ಮೈತ್ರಿ ಮಾಡಿಕೊಳ್ಳುತ್ತಾರೆ? ಎಂದರು. ಇಂಥ ಅಪವಿತ್ರ ಮೈತ್ರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದರು. 

ಕೋರ್ಟ್‌ ಹೊರಗೆ ಕಾವೇರಿ ಸಮಸ್ಯೆಪರಿಹಾರಕ್ಕೆ ನಾವು ಸಿದ್ಧ: ಸಿಎಂ

ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಚುನಾವಣೆ ಕುರಿತು ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಯತೀಂದ್ರ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದಾಗ್ಯೂ ಬಿಜೆಪಿಯವರು ಕೆಲಸ ಇಲ್ಲದೇ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ ಎಂದರು.

click me!