
ಗಿರೀಶ್ ಗರಗ
ಬೆಂಗಳೂರು(ಜ.07): ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸುವವರು ಇನ್ನು ಮೂರು ತಿಂಗಳ ನಂತರ ನಗದನ್ನು ತೆಗೆದುಕೊಂಡು ಹೋಗದಿದ್ದರೂ ಅರಾಮಾಗಿ ಬಸ್‌ನಲ್ಲಿ ಪ್ರಯಾಣಿಸಬಹುದು. ಏಕೆಂದರೆ ನಗದು ನೀಡುವ ಜಂಜಾಟದಿಂದ ಪ್ರಯಾಣಿಕರನ್ನು ಹೊರತರಲು ಮುಂದಾಗಿರುವ ಕೆಎಸ್ಸಾರ್ಟಿಸಿ, ಯುಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಮುಂತಾದವುಗಳ ಮೂಲಕ ‘ಕ್ಯಾಶ್ ಲೆಸ್’ (ನಗದು ರಹಿತ) ಟಿಕೆಟಿಂಗ್ ವ್ಯವಸ್ಥೆ ಜಾರಿ ಮಾಡುತ್ತಿದೆ.
ಎಲ್ಲೆಡೆ ಕ್ಯಾಶ್ ಲೆಸ್ ವಹಿವಾಟು ನಡೆಯುತ್ತಿದ್ದು, ಅದರಿಂದಾಗಿ ಜನರು ತಮ್ಮೊಂದಿಗೆ ನಗದು ಇಟ್ಟುಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಜನರ ಪರಿಪಾಠವನ್ನು ಅರಿತಿರುವ ಕೆಎಸ್ಸಾರ್ಟಿಸಿ, ತನ್ನ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಿದೆ. ಸದ್ಯ ಇರುವ ನಗದು ವ್ಯವಹಾರದ ಜತೆಗೆ ಕ್ಯಾಶ್ ಲೆಸ್ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೆಎಸ್ಸಾರ್ಟಿಸಿ, ಏಪ್ರಿಲ್ ಅಥವಾ ಮೇ ವೇಳೆಗೆ ನೂತನ ವ್ಯವಸ್ಥೆ ಜಾರಿಗೊಳಿಸಲಿದೆ. ಅದಕ್ಕಾಗಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ಸ್ಮಾರ್ಟ್ ಇಟಿಎಂ)ವನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಮುಂದಾಗಿದೆ.
ಮುಂಜಾನೆ ಕೊರೆಯುವ ಚಳಿಗೆ ಹೆಚ್ಚುತ್ತಿರುವ ಅಪಘಾತ; ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್ ನೀಡಲು KSRTC ನಿರ್ಧಾರ
10 ಸಾವಿರ ಸ್ಮಾರ್ಟ್ ಇಟಿಎಂ:
ಕೆಎಸ್ಸಾರ್ಟಿಸಿಯು 2006ರಲ್ಲಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕ ಟಿಕೆಟ್ ವಿತರಣೆ ವ್ಯವಸ್ಥೆ ಜಾರಿಗೊಳಿಸಿತ್ತು. ಅದರಲ್ಲಿ ಪ್ರಯಾಣಿಕರಿಂದ ನಗದು ಪಡೆದು ಮಾತ್ರ ಟಿಕೆಟ್ ನೀಡಲು ಸಾಧ್ಯವಾಗುತ್ತಿದೆ. ಆದರೆ, ಇದೀಗ ಟಿಕೆಟ್ ವಿತರಣೆಗೆ ಸ್ಮಾರ್ಟ್ ಇಟಿಎಂಗಳನ್ನು ಪರಿಚಯಿಸಲು ಮುಂದಾಗಿದೆ. ಸ್ಮಾರ್ಟ್ ಇಟಿಎಂಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದ್ದು, ಅದರ ಪೂರೈಕೆ ಮತ್ತು ನಿರ್ವಹಣೆ ಮಾಡುವವರಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಕೆಎಸ್ಸಾರ್ಟಿಸಿ ಒಟ್ಟು 10,245 ಸ್ಮಾರ್ಟ್ ಇಟಿಎಂಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುತ್ತಿದೆ. ಮುಂದಿನ 5 ವರ್ಷದಲ್ಲಿ 15 ಸಾವಿರ ಸ್ಮಾರ್ಟ್ ಇಟಿಎಂಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಮಾದರಿಯ ಕ್ಯಾಶ್‌ಲೆಸ್ ವ್ಯವಸ್ಥೆ:
ಸ್ಮಾರ್ಟ್ ಇಟಿಎಂಗಳ ಮೂಲಕ ಕೆಎಸ್ಸಾರ್ಟಿಸಿ ಕ್ಯಾಶ್‌ಲೆಸ್ ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಪ್ರಯಾಣಿಕರು ಯುಪಿಐ ಸೇರಿದಂತೆ ಇನ್ನಿತರ ಪೇಮೆಂಟ್ ಆ್ಯಪ್‌ಗಳ ಮೂಲಕ ಟಿಕೆಟ್ ಮೊತ್ತವನ್ನು ಪಾವತಿಸಲು ಸ್ಮಾರ್ಟ್ ಇಟಿಎಂಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಪ್ರದರ್ಶಿಸುವಂತೆ ಮಾಡಲಾಗುತ್ತದೆ. ಅದರ ಜತೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಜತೆಗೆ, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಮೂಲಕವೂ ಟಿಕೆಟ್ ಹಣ ಪಾವತಿಸುವಂತೆ ಸ್ಮಾರ್ಟ್ ಇಟಿಎಂಗಳನ್ನು ಅಭಿವೃದ್ಧಿಪಡಿಸಿ ನೀಡಬೇಕು ಎಂದು ಟೆಂಡರ್ ದಾಖಲೆಗಳಲ್ಲಿ ಕೆಎಸ್ಸಾರ್ಟಿಸಿ ಉಲ್ಲೇಖಿಸಿದೆ.
ಗ್ರಾಮೀಣ ಭಾಗದಲ್ಲಿKSRTC ನೂತನ ಐಷಾರಾಮಿ ಬಸ್ ಗಳ ಸೇವೆ
ಪ್ರತಿ ಮಾಹಿತಿಯೂ ಇಟಿಎಂನಲ್ಲಿ ನಮೂದು
ಟಿಕೆಟ್ ನೀಡುವುದು ಹಾಗೂ ಟಿಕೆಟ್ ಮೊತ್ತ ಪಡೆಯುವುದಷ್ಟೆ ಅಲ್ಲದೆ, ಕೆಎಸ್ಸಾರ್ಟಿಸಿ ಬಸ್‌ಗಳ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಸ್ಮಾರ್ಟ್ ಇಟಿಎಂನಲ್ಲಿ ನಮೂದಾಗುವಂತೆ ಮಾಡಲಾಗುತ್ತದೆ. ಯಾವುದೇ ಬಸ್‌ನ ಮಾರ್ಗ, ಮಾರ್ಗದ ಸಂಖ್ಯೆ, ಆ ಮಾರ್ಗದಲ್ಲಿನ ನಿಲುಗಡೆಗಳ ಸಂಖ್ಯೆಗಳು ಸ್ಮಾರ್ಟ್ ಇಟಿಎಂನಲ್ಲಿ ನಮೂದಾಗಿರಲಿದೆ. ಅದರ ಜತೆಗೆ ಬಸ್‌ನ ಕಾರ್ಯಾಚರಣೆ ಆರಂಭಿಸಿದ ಸಮಯ, ಮುಕ್ತಾಯದ ಸಮಯವನ್ನು ನಿರ್ವಾಹಕರು ನಮೂದಿಸುವ ವ್ಯವಸ್ಥೆಯನ್ನು ಇಟಿಎಂನಲ್ಲಿ ಮಾಡುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗುತ್ತದೆ. ಹಾಗೆಯೇ, ಬಸ್ ಕಾರ್ಯಾಚರಣೆಯಿಂದ ಬಂದ ಆದಾಯ, ವ್ಯಯವಾದ ಡೀಸೆಲ್ ಪ್ರಮಾಣ, ಮೈಲೇಜ್‌ಗಳನ್ನೂ ನಮೂದಿಸುವ ವ್ಯವಸ್ಥೆ ಇರಲಿದೆ.
ಶಕ್ತಿ ಯೋಜನೆಗೂ ಅನುಕೂಲ
ನೂತನ ಟಿಕೆಟಿಂಗ್ ವ್ಯವಸ್ಥೆಯಿಂದ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳೆಯರ ನಿಖರ ಲೆಕ್ಕ ಸಿಗಲಿದೆ. ಸದ್ಯ ಮಹಿಳಾ ಪ್ರಯಾಣಿಕರಿಗೆ ಯಾವುದೇ ರೀತಿಯ ಗುರುತಿನ ಚೀಟಿ ನೀಡಿಲ್ಲ. ಇನ್ನು ಮೂರು ತಿಂಗಳೊಳಗಾಗಿ ಗುರುತಿನ ಚೀಟಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಆ ಗುರುತಿನ ಚೀಟಿಯು ಚಿಪ್ ಆಧಾರಿತವಾಗಿರುವ ಸಾಧ್ಯತೆಗಳಿವೆ. ಒಂದು ವೇಳೆ ಚಿಪ್ ಆಧಾರಿತ ಗುರುತಿನ ಚೀಟಿಯನ್ನೇ ನೀಡಿದರೆ ಸ್ಮಾರ್ಟ್ ಇಟಿಎಂನಲ್ಲಿ ಅದನ್ನು ಸ್ವೈಪ್ ಮಾಡಿ ಟಿಕೆಟ್ ವಿತರಿಸಬಹುದಾಗಿದೆ. ಆಗ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಶಕ್ತಿ ಯೋಜನೆ ಅಡಿ ಎಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂಬುದು ತಿಳಿಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ