ಎರಡನೇ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕಾರಣಕ್ಕೆ ಆರು ಜನರ ವಿರುದ್ಧ ಮೋಸದಿಂದ ವಿವಾಹ ನೆರವೇರಿಸಿದ, ಪುರುಷನೊಂದಿಗೆ ಸ್ತ್ರೀಯನ್ನು ವಾಸಿಸುವಂತೆ ಮಾಡಿದ ಮತ್ತು ಗಂಡನು ಅಥವಾ ಹೆಂಡತಿ ಜೀವಿಸಿರುವಾಗ ಪುನಃ ಮದುವೆ ಮಾಡಿಸಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು (ಸೆ.02): ಎರಡನೇ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕಾರಣಕ್ಕೆ ಆರು ಜನರ ವಿರುದ್ಧ ಮೋಸದಿಂದ ವಿವಾಹ ನೆರವೇರಿಸಿದ, ಪುರುಷನೊಂದಿಗೆ ಸ್ತ್ರೀಯನ್ನು ವಾಸಿಸುವಂತೆ ಮಾಡಿದ ಮತ್ತು ಗಂಡನು ಅಥವಾ ಹೆಂಡತಿ ಜೀವಿಸಿರುವಾಗ ಪುನಃ ಮದುವೆ ಮಾಡಿಸಿದ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಲು ಬೆಳಗಾವಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದತಿಗೆ ಕೋರಿ ಮದುವೆಯಲ್ಲಿ ಹಾಜರಾಗಿದ್ದ ಆರು ಜನ ಮತ್ತು ಮದುವೆಯಾದ ವಧು-ವರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಮಾಡಿದೆ.
ಅಲ್ಲದೆ, ಎರಡನೇ ಮದುವೆಯಾದ ಮಹಿಳೆ ಮತ್ತು ಆತನ ಎರಡನೇ ಗಂಡ ವಿರುದ್ಧ ಮೋಸದಿಂದ ವಿವಾಹ ನೆರವೇರಿಸಿದ ಮತ್ತು ಮೋಸದಿಂದ ಸ್ತ್ರೀಯನ್ನು ತನ್ನೊಡನೆ ವಾಸಿಸುವಂತೆ ಮಾಡಿ ಸಂಭೋಗ ಹೊಂದುವಂತೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನೂ ಇದೇ ವೇಳೆ ಹೈಕೋರ್ಟ್ ರದ್ದುಪಡಿಸಿದೆ. ಆದರೆ, ಪತಿ ಬದುಕಿದ್ದರೂ ಹಾಗೂ ಆತನ ಜೊತೆಗಿನ ಮದುವೆ ಮಾನ್ಯತೆ ಹೊಂದಿದ್ದರೂ ಮತ್ತೊಬ್ಬನೊಂದಿಗೆ ಎರಡನೇ ವಿವಾಹವಾದ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆತನ ಎರಡನೇ ಗಂಡನ ವಿರುದ್ಧದ ಕ್ರಿಮಿನಲ್ ಪ್ರಕರಣ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸಿಎಂ ಸಿದ್ದರಾಮಯ್ಯ ಟಗರು, ಹುಲಿಯಿದ್ದಂತೆ ಭಯದ ಅಗತ್ಯವಿಲ್ಲ: ಸಚಿವ ಜಮೀರ್
ಪ್ರಕರಣವೇನು?: 2021ರಲ್ಲಿ ಬಿ.ಮೌಲಾಲಿ ಎಂಬುವರು ಬೆಳಗಾವಿ 4ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿ, ತನ್ನ ಪತ್ನಿ ಸಿಂಬ್ರನ್ 2020ರ ಮೇ 29ರಂದು ಕೆ.ಮೌಲಾಲಿ ಎಂಬಾತನೊಂದಿಗೆ 2021ರ ಮೇ 2ರಂದು 2ನೇ ಮದುವೆಯಾಗಿದ್ದಾರೆ. ಕೆ.ಎಸ್. ಬಸಿರಾ, ರಬ್ಬಾಣಿ, ರಜಿಯಾ, ರೇಹನಾ, ಆರ್.ಬಿ. ಬಸಿರಾ ಮತ್ತು ವಿಶ್ವನಾಥ ಎಸ್. ಹೆಗಡೆ ಸೇರಿಕೊಂಡು ತಮ್ಮ ಪತ್ನಿಗೆ 2ನೇ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 493, 494, 496ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಜೆಎಂಎಫ್‌ಸಿ ಕೋರ್ಟ್ 2022ರ ಮಾ.3ರಂದು ಆದೇಶಿಸಿತ್ತು. ಈ ಆದೇಶ ರದ್ದತಿಗೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಆದೇಶದಲ್ಲಿ ಏನಿದೆ?: ಭಾರತೀಯ ದಂಡ ಸಂಹಿತೆ ಸೆಕ್ಷನ್ 493 ಅಡಿಯಲ್ಲಿ ಪುರುಷನು ಕಾನೂನುಬದ್ಧವಾಗಿ ವಿವಾಹವಾಗಿದೆ ಎಂಬುದಾಗಿ ಸ್ತ್ರೀಗೆ ನಂಬಿಕೆ ಉಂಟು ಮಾಡಿ ತನ್ನೊಡನೆ ವಾಸಿಸುವಂತೆ ಮಾಡಿದ ಅಪರಾಧ ಮದುವೆಗೆ ಹಾಜರಾದವರ ಮೇಲೆ ಅನ್ವಯಿಸುವುದಿಲ್ಲ. 2ನೇ ಮದುವೆ (ಐಪಿಸಿ 494) ಮತ್ತು ಕಾನೂನುಬದ್ಧವಾಗಿ ವಿವಾಹ ನೆರವೇರದೇ ಮೋಸದಿಂದ ವಿವಾಹ ಸಮಾರಂಭ ನೆರವೇರಿಸಿದ (ಐಪಿಸಿ 496) ಅಪರಾಧ ನಡುವೆ ವ್ಯತ್ಯಾಸವಿದೆ. ಆರೋಪಿ ಮೊದಲೇ ಒಂದು ಮದುವೆಯಾಗಿದ್ದು, ಅದು ಊರ್ಜಿತವಾಗಿರುವ ಸಮಯದಲ್ಲಿಯೇ ಇತರೆ ಸಂಗಾತಿಯೊಂದಿಗೆ ಮದುವೆಯಾಗಿ, ಆ ಕುರಿತ ಸಮಾರಂಭ ನಡೆಸಿದ ಸಂದರ್ಭದಲ್ಲಿ ಐಪಿಸಿ ಸೆಕ್ಷನ್ 494 ಅಡಿಯಲ್ಲಿ ಎರಡನೇ ಮದುವೆ ಪ್ರಕರಣವಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಜೊತೆಗೆ, ಕಾನೂನುಬದ್ಧವಾಗಿ ಮದುವೆ ಸಮಾರಂಭ ನಡೆಯುತ್ತಿಲ್ಲ ಎಂಬ ತಿಳಿವಳಿಕೆ ಇದ್ದರೂ ಮೋಸದಿಂದ ಮದುವೆ ಸಮಾರಂಭವನ್ನು ನಡೆಸಿದರೆ, ಅದು ಐಪಿಸಿಯ ಸೆಕ್ಷನ್ 496ರ ಅಡಿಯಲ್ಲಿ ಮೋಸದಿಂದ ವಿವಾಹ ಸಮಾರಂಭ ನೆರವೇರಿಸಿದ ಅಪರಾಧವಾಗಿದೆ. ಹಾಗಾಗಿ, ಮದುವೆಗೆ ಹಾಜರಾದವರ ಮೇಲೆ ಐಪಿಸಿ ಸೆಕ್ಷನ್ 493, 494 ಮತ್ತು 496 ಅಡಿಯಲ್ಲಿ ಅಪರಾಧಗಳು ನಿಲ್ಲುವುದಿಲ್ಲ. ಹಾಗಾಗಿ, ಅವರ ವಿರುದ್ಧದ ಈ ಮೂರು ಸೆಕ್ಷನ್ ಅಡಿಯ ಪ್ರಕರಣಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಹೇಳಿದೆ. ಇನ್ನೂ ಪ್ರಕರಣದಲ್ಲಿ ಮೋಸದಿಂದ ತನ್ನೊಡನೆ ನೆಲೆಸುವಂತೆ ಮಾಡಿದ ಮತ್ತು ಸಂಭೋಗ ಹೊಂದುವಂತೆ ಮಾಡಿದ ಮತ್ತು ಮೋಸದಿಂದ ಮದುವೆ ನೆರವೇರಿಸಿದ ಆರೋಪ ಸಂಬಂಧ ಐಪಿಸಿ ಸೆಕ್ಷನ್ 493 ಮತ್ತು 496 ಅಡಿ ಅಪರಾಧ ಎಸಗಿರುವುದಕ್ಕೆ ಎರಡನೇ ಮದುವೆಯಾಗಿರುವ ಸಿಂಬ್ರನ್ ಮತ್ತು ಆತನ ಎರಡನೇ ಗಂಡ ವಿರುದ್ಧ ಮೇಲ್ನೊಟಕ್ಕೆ ಸಾಕ್ಷ್ಯವಿಲ್ಲ.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ 25 ಸಾಧಕರಿಗೆ ಮಲೇಷ್ಯಾ-ಇಂಡಿಯಾ ಐಕಾನಿಕ್ ಪ್ರಶಸ್ತಿ ಸಂಭ್ರಮ
ಇದರಿಂದ ಅವರ ವಿರುದ್ಧದ ಈ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲು ಹೊರಡಿಸಿರುವ ವಿಚಾರಣಾ ನ್ಯಾಯಾಲಯ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ವಿವರಿಸಿದೆ. ಆದರೆ, ದೂರುದಾರ ಬಿ.ಮೌಲಾಲಿಯೊಂದಿಗೆ ಸಿಂಬ್ರನ್ ಮೊದಲ ಮದುವೆಯಾಗಿದೆ. ಅದು ಮಾನ್ಯತೆ ಇರುವಾಗಲೇ ಕೆ.ಮೌಲಾಲಿ ಅವರೊಂದಿಗೆ ಎರಡನೇ ಮದುವೆಯಾಗಿರುವುದು ಅಪರಾಧವಾಗಿದೆ. ಅದರಂತೆ ಅವರ ವಿರುದ್ಧ ಐಪಿಸಿ ಸೆಕ್ಷನ್ 494 ಅಡಿಯ ಗಂಡನು ಅಥವಾ ಹೆಂಡತಿ ಜೀವಿಸಿರುವಾಗ ಪುನಃ ಮದುವೆಯಾದ ಅಪರಾಧ ದಡಿ ಪ್ರಕರಣ ಮುಂದುವರಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.