
ಬೆಂಗಳೂರು : ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2ರಲ್ಲಿ ಮತ್ತೆ ಇಂಥ ಲೋಪಗಳಾಗದಂತೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.
ನೋಡಲ್ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಆ ಕೇಂದ್ರದ ಪ್ರಾಂಶುಪಾಲರ ಮೇಲೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಅಪ್/ ಯೂಟ್ಯೂಬ್/ ಇನ್‌ಸ್ಟಾಗ್ರಾಂ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬಹಿರಂಗ, ಪ್ರಸಾರ ಮಾಡಿದಲ್ಲಿ ವಿದ್ಯಾರ್ಥಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಕಾಲೇಜುಗಳು ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣವಾದರೆ ಕಾಲೇಜಿನ ಅನುದಾನ ಹಿಂಪಡೆಯಲು, ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ಕೇಂದ್ರದಲ್ಲಿ ನಡೆದರೆ ಅಂಥ ಕೇಂದ್ರವನ್ನೇ ರದ್ದುಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು(ಡಿಡಿಪಿಯು) ಒಂದೇ ಐಪಿ ವಿಳಾಸ ಮತ್ತು ಒಂದೇ ಗಣಕ ಯಂತ್ರದಲ್ಲಿ ಮಾತ್ರವೇ ಡೌನ್‌ಲೋಡ್ ಮಾಡಬೇಕು. ತಪ್ಪಿದರೆ ಸಂಬಂಧಿಸಿದ ಉಪನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ತಮ್ಮ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣಾಲಯವನ್ನು ಡಿಡಿಪಿಯು ಮೊದಲೇ ಗುರುತಿಸಬೇಕು. ಮುದ್ರಣ ಕಾರ್ಯ ಆರಂಭವಾದ ಬಳಿಕ ಖಾಸಗಿ ಮುದ್ರಣ ಚಟುವಟಿಕೆ ನಡೆಸುವಂತಿಲ್ಲ, ಖಾಸಗಿ ವ್ಯಕ್ತಿಗಳು ಅಲ್ಲಿಗೆ ಪ್ರವೇಶಿಸುವಂತಿಲ್ಲ. ಕೇವಲ ಸರ್ಕಾರಿ ಪಿಯು ಕಾಲೇಜುಗಳನ್ನು ಮಾತ್ರ ನೋಡಲ್ ಕೇಂದ್ರವಾಗಿ ಗುರುತಿಸಿ ಆ ಕೇಂದ್ರದ ಪ್ರಾಂಶುಪಾಲರು ಮತ್ತು ಒಬ್ಬ ಉಪನ್ಯಾಸಕರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಿಸಿ ಪ್ರಶ್ನೆ ಪತ್ರಿಕೆ ಸಂರಕ್ಷಣೆ ನಿರ್ವಹಣೆ ಜವಾಬ್ದಾರಿ ವಹಿಸಬೇಕು.
ನೋಡಲ್ ಕೇಂದ್ರದ ಕಾಲೇಜು ಕೋಡ್ ಅನ್ನು ವಾಟರ್ ಮಾರ್ಕ್ ಆಗಿ ಹೊಂದಿರುವ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಬೇಕು. ಆ ಪ್ರಶ್ನೆ ಪತ್ರಿಕೆಗಳ ಮುದ್ರಣ, ಪ್ಯಾಕಿಂಗ್ ಅನ್ನು ಬದಲಾಯಿಸಲಾಗದ ಸೀಲ್ ಬಳಸಿ ನಿಯೋಜಿತ ಮುದ್ರಣಾಲಯದಲ್ಲೇ ಸೀಲಿಂಗ್ ಕಾರ್ಯ ಮುಗಿಸಬೇಕು. ಸೀಲ್ ಮಾಡಿರುವ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಉಪನಿರ್ದೇಶಕರ ಕಚೇರಿಯಲ್ಲಿ ನೋಡಲ್ ಕೇಂದ್ರದ ಪ್ರಾಂಶುಪಾಲರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರಿಗೆ ಹಸ್ತಾಂತರಿಸಬೇಕು. ನಂತರ ಪ್ರಶ್ನೆ ಪತ್ರಿಕೆ ಸಂಪೂರ್ಣ ಜವಾಬ್ದಾರಿ ನೋಡಲ್ ಕೇಂದ್ರದವರದ್ದಾಗಿರುತ್ತದೆ ಎಂದು ಸೂಚಿಸಲಾಗಿದೆ.
ನೋಡಲ್ ಕೇಂದ್ರದ ಒಂದು ಕೋಣೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿಟ್ಟು ಸೀಲ್ ಮಾಡಬೇಕು. ಪ್ರತಿ ದಿನ ಬೆಳಗ್ಗೆ 8.30ಕ್ಕೆ ಆಯಾ ದಿನದ ಪರೀಕ್ಷಾ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಮೊದಲ ದಿನವೇ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜುಗಳಿಗೆ ನೀಡುವಂತಿಲ್ಲ. ಕಾಲೇಜಿನ ಪ್ರಾಂಶುಪಾಲರು ಪ್ರಶ್ನೆ ಪತ್ರಿಕೆ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ತೆರೆಯಬೇಕು. ಈ ಸಂಬಂಧ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪ್ರಮಾಣೀಕರಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ