Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!

Published : Jan 17, 2026, 12:35 AM IST
Bheemanna Khandre Passes Away

ಸಾರಾಂಶ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ವಯೋಸಹಜ ಕಾಯಿಲೆಯಿಂದ ಬೀದರ್‌ನಲ್ಲಿ ನಿಧನರಾಗಿದ್ದಾರೆ. 4 ಬಾರಿ ಶಾಸಕರಾಗಿ, ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, ಹೈದರಾಬಾದ್ ಕರ್ನಾಟಕ ವಿಮೋಚನೆ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಬೀದರ್ (ಜ.17): ಕರ್ನಾಟಕ ರಾಜಕಾರಣದ ಭೀಷ್ಮ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ಅವರು ಶನಿವಾರ ಮಧ್ಯರಾತ್ರಿ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಕಳೆದ 15 ದಿನಗಳಿಂದ ತೀವ್ರ ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಜ್ಯದ ಪ್ರಭಾವಿ ಸಚಿವ ಈಶ್ವರ ಖಂಡ್ರೆ ಅವರ ತಂದೆಯಾಗಿರುವ ಭೀಮಣ್ಣ ಖಂಡ್ರೆ ಅವರು, ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರು. 1923ರ ಜನವರಿ 8 ರಂದು ಹುಲಸೂರು ತಾಲೂಕಿನ ಗೊರ್ಟಾ(ಬಿ) ಗ್ರಾಮದಲ್ಲಿ ಶಿವಲಿಂಗಪ್ಪ ಖಂಡ್ರೆ ಮತ್ತು ಪಾರ್ವತಿಭಾಯಿ ದಂಪತಿಯ ಪುತ್ರನಾಗಿ ಜನಿಸಿದ ಇವರು, 100 ವರ್ಷಗಳ ಸುದೀರ್ಘ ಹಾಗೂ ಸಾರ್ಥಕ ಜೀವನ ನಡೆಸಿದರು.

ರಾಜಕೀಯ ಪಯಣ

1953ರಲ್ಲಿ ಭಾಲ್ಕಿ ಪುರಸಭೆಯ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಭೀಮಣ್ಣ ಖಂಡ್ರೆ ಅವರು ಮುಂದೆ ಅಪ್ರತಿಮ ನಾಯಕನಾಗಿ ಬೆಳೆದರು. ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ (1962, 1967, 1978 ಮತ್ತು 1983) ಶಾಸಕರಾಗಿ ಆಯ್ಕೆಯಾಗಿದ್ದರು. 1992 ರಲ್ಲಿ ಎಂ.ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಇವರು, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ (1994 ಮತ್ತು 2000) ಕಾರ್ಯನಿರ್ವಹಿಸಿದ್ದರು.

ಹೋರಾಟದ ಹಾದಿ

ಮಹಾತ್ಮ ಗಾಂಧೀಜಿಯವರ ತತ್ವಗಳಿಂದ ಪ್ರೇರಿತರಾಗಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿಶೇಷವಾಗಿ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭೀಮಣ್ಣ ಅವರ ಪಾತ್ರ ಹಿರಿದು. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಇವರು ನಡೆಸಿದ ಹೋರಾಟ ಐತಿಹಾಸಿಕವಾದದ್ದು. ಗಡಿ ನಾಡಿನಲ್ಲಿ ಕನ್ನಡದ ಡಿಂಡಿಮ ಬಾರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸಿಎಂ ಸಂತಾಪ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 'ಶರಣ ಚಿಂತನೆಗಳ ನೆರಳಿನಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಲು ಟೊಂಕಕಟ್ಟಿ ನಿಂತ ಅವರ ಬದುಕು ನಮಗೆಲ್ಲ ಪ್ರೇರಣೆ' ಎಂದು ಸ್ಮರಿಸಿದ್ದಾರೆ. ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ರಾಜ್ಯದ ಗಣ್ಯರು ಹಾಗೂ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡ ಸಾಹಿತ್ಯದ 8 ಜ್ಞಾನಪೀಠ ವಿಜೇತರ ಸಮಾಗಮದ ಫೋಟೋ ವೈರಲ್; ಏನಿದರ ಅಸಲಿಯತ್ತು?
ನಮ್ಮ ಮೆಟ್ರೋದಲ್ಲೊಂದು ಬಂಗಾರದ ಬಳೆ ಕಥೆ; ಒಂದು ಫೊಟೋ ಕೇಳಿದರೆ, ಕೈಬಳೆ ಬಿಚ್ಚಿಕೊಟ್ಟ ಅಪರಿಚಿತೆ!