
ಬೆಂಗಳೂರು (ಏ.17): ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಇದೇ ನಿಯಮವನ್ನು ಇಲ್ಲಿಯೂ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ನಿಯಮ ಮಹಾರಾಷ್ಟ್ರದಲ್ಲಿ ಮೇ 1ರಿಂದ ಜಾರಿಗೆ ಬರಲಿದೆ. ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ರಾಜ್ಯಾದ್ಯಂತ 59 ಆರ್‌ಟಿಒ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯದ ಚಾಲಕರ ಪರವಾನಗಿಗಳನ್ನು ರದ್ದುಗೊಳಿಸುವ ಕೆಲಸ ಆರಂಭಿಸಿರುವುದನ್ನು ಕರವೇ ಸ್ವಾಗತಿಸುತ್ತದೆ ಎಂದು ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಜೀವನ ನಿರ್ವಹಣೆಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವವರು ಆ ರಾಜ್ಯದ ಅಧಿಕೃತ ಭಾಷೆಯನ್ನು ಕಲಿಯುವುದು ಅತ್ಯಂತ ಮೂಲಭೂತ ಕರ್ತವ್ಯವಾಗಿದೆ. ತಮ್ಮ ಜೀವನಾಧಾರಕ್ಕಾಗಿ ಆ ರಾಜ್ಯದ ಮಣ್ಣು, ನೀರು ಮತ್ತು ಜನರನ್ನು ಅವಲಂಬಿಸುವಾಗ, ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನರೊಂದಿಗೆ ಬೆರೆಯುವುದು ಸಹಜವಾದ ನೈತಿಕ ಜವಾಬ್ದಾರಿಯಾಗಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರದ ಈ ತೀರ್ಮಾನ ಸಂಪೂರ್ಣವಾಗಿ ಸರಿಯಾಗಿದ್ದು ಇಂದಿನ ಅಗತ್ಯವಾದದ್ದು ಎಂದಿದ್ದಾರೆ.
ತಮಿಳುನಾಡಿನಲ್ಲೂ ಅಲ್ಲಿನ ಚಾಲಕರು ಪರವಾನಗಿ ಪಡೆಯುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯಲ್ಲಿ ಕನಿಷ್ಠ ಮಟ್ಟದ ಜ್ಞಾನ ಇದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ಕರ್ನಾಟಕ ಸರ್ಕಾರವೂ ತಕ್ಷಣ ಅನುಸರಿಸಬೇಕು. ಕನ್ನಡ ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಮತ್ತು ಇತರ ಸಾರಿಗೆ ವಾಹನ ಚಾಲಕರ ಪರವಾನಗಿ ರದ್ದುಗೊಳಿಸುವ ಸ್ಪಷ್ಟ ನಿಯಮಾವಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ