10 ವರ್ಷಗಳ ಬಳಿಕ ಇಂದು ಕಲಬುರಗೀಲಿ ಸಚಿವ ಸಂಪುಟ ಸಭೆ: ಗರಿಗೆದರಿದ ನಿರೀಕ್ಷೆಗಳು..!

By Kannadaprabha NewsFirst Published Sep 17, 2024, 4:29 AM IST
Highlights

ಹೈದರಾಬಾದ್‌ ವಿಮೋಚನೆಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷ ದಿನವಾದ ಸೆ.17ರಂದೇ ನಡೆಯುತ್ತಿರುವ ಈ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಸಂಪುಟ ದರ್ಜೆ ಸಚಿವರ ದಂಡೇ ಕಲಬುರಗಿಯತ್ತ ಹೆಜ್ಜೆ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಡಾ.ಮಹಾದೇವಪ್ಪ, ಬೈರತಿ ಸುರೇಶ್‌, ಕೆ.ಜೆ.ಜಾರ್ಜ್‌ ಅವರೊಂದಿಗೆ ಬೆಂಗಳೂರಿನಿಂದ ಸೋಮವಾರ ಸಂಜೆ ವಿಮಾನದ ಮೂಲಕ ಕಲಬುರಗಿಗೆ ಬಂದಿಳಿದಿದ್ದಾರೆ. 

ಕಲಬುರಗಿ(ಸೆ.17): ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ತೊಗರಿ ಕಣಜ ಕಲಬುರಗಿಯಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ದಶಕದ ಬಳಿಕ ಇಲ್ಲಿ ನಡೆಸುತ್ತಿರುವ ಈ ಸಂಪುಟ ಸಭೆಯಲ್ಲಿ ಕಲ್ಯಾಣ ನಾಡಿಗೆ ಪ್ರತ್ಯೇಕ ಸಚಿವಾಲಯ ಸೇರಿ ಹಲವು ಮಹತ್ವದ ಘೋಷಣೆಗಳ ನಿರೀಕ್ಷೆಗಳು ಗರಿಗೆದರಿವೆ.

ಹೈದರಾಬಾದ್‌ ವಿಮೋಚನೆಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷ ದಿನವಾದ ಸೆ.17ರಂದೇ ನಡೆಯುತ್ತಿರುವ ಈ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಸಂಪುಟ ದರ್ಜೆ ಸಚಿವರ ದಂಡೇ ಕಲಬುರಗಿಯತ್ತ ಹೆಜ್ಜೆ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಡಾ.ಮಹಾದೇವಪ್ಪ, ಬೈರತಿ ಸುರೇಶ್‌, ಕೆ.ಜೆ.ಜಾರ್ಜ್‌ ಅವರೊಂದಿಗೆ ಬೆಂಗಳೂರಿನಿಂದ ಸೋಮವಾರ ಸಂಜೆ ವಿಮಾನದ ಮೂಲಕ ಕಲಬುರಗಿಗೆ ಬಂದಿಳಿದಿದ್ದಾರೆ.

Latest Videos

ನಿಮಗೆ ಹನಿಟ್ರ್ಯಾಪ್ ಆಗಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ: ಸಚಿವ ಪ್ರಿಯಾಂಕ ಖರ್ಗೆ!

ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡು ಕಲಬುರಗಿಯಲ್ಲೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ 8.20 ರಿಂದ 12.30 ಗಂಟೆವರೆಗೆ ನಡೆಯಲಿರುವ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಳ್ಳುವರು. ಸರ್ದಾರ್‌ ಪಟೇಲ್‌ ವೃತ್ತದಲ್ಲಿರುವ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಪೊಲೀಸ್‌ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಬಹಿರಂಗ ಸಭೆಯಲ್ಲಿ ಮಾತನಾಡುವರು.

ಇದೇ ಮೈದಾನದಲ್ಲಿಯೇ ಕೆಕೆಆರ್‌ಡಿಬಿ ಸೇರಿ ಜಿಲ್ಲಾಡಳಿತದಿಂದ ಕೈಗೆತ್ತಿಕೊಂಡಿರುವ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು.

ಸಂಜೆ 4 ಗಂಟೆಗೆ ವಿಕಾಸಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ ತಮ್ಮ 19ನೇ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ನಡೆಸುತ್ತಿರುವ ಎರಡನೇ ಸಂಪುಟ ಸಭೆ ಇದಾಗಿದ್ದು, ಈ ಹಿಂದೆ 2014ರಲ್ಲಿ ಇದೇ ರೀತಿ ಸಂಪುಟ ಸಭೆ ನಡೆಸಿದ್ದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಸಂಪುಟ ಸಭೆಗೆ ಸಂಬಂಧಿಸಿದ ತಯಾರಿಯನ್ನು ನೋಡಿಕೊಂಡಿದ್ದಾರೆ. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌ ಅವರೂ ಸಂಪುಟ ಸಭೆ ಸಿದ್ಧತೆಗಳ ಉಸ್ತುವಾರಿಯಲ್ಲಿ ತೊಡಗಿದ್ದಾರೆ.

ಇಡೀ ಸರ್ಕಾರವೇ ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿಬಂದೋಬಸ್ತ್‌ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಈ ಸಂಪುಟ ಸಭೆ ಕುರಿತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ನಿರೀಕ್ಷೆ ಗರಿಗೆದರಿದ್ದು, ವಿಶೇಷ ಯೋಜನೆಗಳ ಘೋಷಣೆ ಕುರಿತು ಜನ ಎದುರು ನೋಡುತ್ತಿದ್ದಾರೆ.

ಅಮೆರಿಕ ಪ್ರವಾಸ ಮೊಟಕುಗೊಳಿಸಿ ಸಚಿವ ಸಂಪುಟ ಸಭೆಗೆ ಡಿಕೆಶಿ ಹಾಜರ್‌

ಕೆಲ ದಿನಗಳಿಂದ ಅಮೆರಿಕ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ಪ್ರವಾಸ ಮೊಟಕುಗೊಳಿಸಿ ರಾಜ್ಯಕ್ಕೆ ವಾಪಸಾಗಲಿದ್ದಾರೆ. ಕಲಬುರಗಿ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರೇ ಖುದ್ದು ಹೇಳಿಕೆ ನೀಡಿ ಡಿ.ಕೆ.ಶಿವಕುಮಾರ್‌ ಅವರು ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಸಂಪುಟ ದರ್ಜೆ ಸಚಿವರ ಪೈಕಿ ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಸುಧಾಕರ್‌ ವೈಯಕ್ತಿಕ ಕಾರಣಗಳಿಂದಾಗಿ ಸಭೆಗೆ ಗೈರಾಗುತ್ತಿರುವ ಕುರಿತು ಖುದ್ದು ಮುಖ್ಯಮಂತ್ರಿ ಬಳಿ ನಿವೇದನೆ ಮಾಡಿಕೊಂಡು ವಿನಾಯಿತಿ ಪಡೆದಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದೆಲ್ಲ ಸಂಪುಟ ದರ್ಜೆ ಸಚಿವರು ಈ ಐತಿಹಾಸಿಕ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಸಭೆ ಹಿನ್ನೆಲೆಯಲ್ಲಿ ವಿಕಾಸಭವನದ 3ನೇ ಮಹಡಿಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣ ಸುಣ್ಣಬಣ್ಣ ಬಳಿದು ಮುಖ್ಯಮಂತ್ರಿ ಸೇರಿ ರಾಜ್ಯದ ಕ್ಯಾಬಿನೆಟ್‌ ಅನ್ನು ಸ್ವಾಗತಿಸಲು ಸಜ್ಜುಗೊಳಿಸಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಬಗ್ಗೆ ಚರ್ಚಿಸಲಾಗುವುದು. ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಘೋಷಿಸಿರುವ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

click me!