ವಿಧಾನಮಂಡಲ ಕಲಾಪಕ್ಕೆ ಇಂದು ಮುಹೂರ್ತ..?

Kannadaprabha News   | Asianet News
Published : Aug 20, 2020, 01:06 PM IST
ವಿಧಾನಮಂಡಲ ಕಲಾಪಕ್ಕೆ ಇಂದು ಮುಹೂರ್ತ..?

ಸಾರಾಂಶ

ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು ಎಂದು ಸಂವಿಧಾನ ತಿಳಿಸಿರುವುದರಿಂದ ಸೆಪ್ಟೆಂಬರ್‌ ಮೂರನೇ ನಾಲ್ಕನೇ ವಾರದೊಳಗಾಗಿ ಅಧಿವೇಶನ ನಡೆಸಬೇಕಾಗಿದೆ. ಹೀಗಾಗಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಂತೆ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.20): ಕೊರೋನಾ ಸೋಂಕು ಆತಂಕದ ನಡುವೆಯೇ ಸೆಪ್ಟೆಂಬರ್‌ ತಿಂಗಳಲ್ಲಿ ಮುಂಗಾರು ಅಧಿವೇಶನ ನಡೆಸಲು ಸಜ್ಜಾಗಿರುವ ರಾಜ್ಯ ಸರ್ಕಾರವು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ.

ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು ಎಂದು ಸಂವಿಧಾನ ತಿಳಿಸಿದೆ. ಹೀಗಾಗಿ ಸೆಪ್ಟೆಂಬರ್‌ ಮೂರನೇ ನಾಲ್ಕನೇ ವಾರದೊಳಗಾಗಿ ಅಧಿವೇಶನ ನಡೆಸಬೇಕಾಗಿದೆ. ಜೊತೆಗೆ ಬಜೆಟ್‌ಗೆ ಪೂರ್ಣ ಪ್ರಮಾಣದ ಅನುಮೋದನೆ ಪಡೆಯಬೇಕಾಗಿದೆ. ಹೀಗಾಗಿ ಕೊರೋನಾ ಸೋಂಕಿನ ಆತಂಕದ ನಡುವೆಯೂ ಅಧಿವೇಶನ ನಡೆಸುವ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಒಟ್ಟು 5 ದಿನಗಳ ಕಾಲ ಅಥವಾ 10 ದಿನಗಳ ಕಾಲ ಅಧಿವೇಶನದ ಕಲಾಪ ನಡೆಸುವ ಪ್ರಸ್ತಾಪವಿದೆ.

ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿಧಾನಮಂಡಲ ಅಧಿವೇಶನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಾಗಲೇ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ಥಳ ಮತ್ತು ದಿನಾಂಕ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಸೋಂಕು ತಡೆಯುವ ಸಂಬಂಧ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ವಿಧಾನಸೌಧದಲ್ಲಿಯೇ ಅಧಿವೇಶನ ನಡೆಸಲಾಗುತ್ತದೆಯೇ ಅಥವಾ ಪರ್ಯಾಯ ಸ್ಥಳದಲ್ಲಿ ನಡೆಸಬೇಕೇ ಎಂಬುದರ ಬಗ್ಗೆ ಕೆಲದಿನಗಳ ಹಿಂದೆ ಚರ್ಚೆ ನಡೆದಿದ್ದರೂ ಅಂತಿಮವಾಗಿ ವಿಧಾನಸೌಧದಲ್ಲೇ ನಡೆಸುವ ನಿಲುವಿಗೆ ಸಚಿವಾಲಯ ಬಂದಿದೆ.

'ಸಿದ್ದರಾಮಯ್ಯ ಮತ್ತೆಂದು ಸಿಎಂ ಆಗಲ್ಲ' : ಭವಿಷ್ಯ ನುಡಿದ ಮುಖಂಡ

ಆಸನಗಳು ಅಕ್ಕಪಕ್ಕ ಇರುವುದರಿಂದ ಅಂತರ ಕಾಪಾಡಲು ಅನುಕೂಲವಾಗುವಂತೆ ಫೈಬರ್‌ ಶೀಟ್‌ ಹಾಕಲು ನಿರ್ಧರಿಸಲಾಗಿದೆ. ಜೊತೆಗೆ ಶಾಸಕರಿಗೆ ಶೀಲ್ಡ್‌ ಹಾಗೂ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ಗಲಭೆ ಕುರಿತು ಸಂಪುಟದಲ್ಲಿ ಚರ್ಚೆ:

ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಗಲಭೆ ಪ್ರಕರಣ ಕುರಿತು ಸಹ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ತನಿಖೆ ಸೇರಿದಂತೆ ವಿವಿಧ ವಿಚಾರಗಳು ಪ್ರಸ್ತಾಪವಾಗಲಿವೆ. ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯ ಗಲಭೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಲದೇ, ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವ ಸಂಶಯ ಮೂಡಿದೆ. ಹೀಗಾಗಿ ಎಸ್‌ಡಿಪಿಐ ಸಂಘಟನೆ ನಿಷೇಧಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ಕೊರೋನಾ ಕುರಿತು ಸಮಾಲೋಚನೆ:

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ನಿಯಂತ್ರಣ ಮಾಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ರಾಜ್ಯದ ಇತರೆ ಜಿಲ್ಲೆಯಲ್ಲಿರುವ ಸೋಂಕಿನ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಇನ್ನು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ ಆ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮ ಮತ್ತು ಸ್ಥಳದಲ್ಲಿ ಸಂತ್ರಸ್ತರಿಗೆ ನೆರವಿಗೆ ಹಸ್ತ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಪ್ರವಾಹ ಪೀಡಿತ ಸ್ಥಳಗಳಲ್ಲಿ ಅನುದಾನ ಬಳಕೆ ಬಗ್ಗೆಯೂ ಚರ್ಚೆ, ಕೆಪಿಎಸ್‌ಸಿ ನೇಮಕಾತಿ ಕುರಿತು ಪಿ.ಸಿ.ಹೋಟಾ ಸಮಿತಿಯ ಬಾಕಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಂಭವವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ