ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: SDPI ಸಂಘಟನೆ ಬ್ಯಾನ್ ಆಗುತ್ತಾ..?

By Suvarna NewsFirst Published Aug 20, 2020, 11:11 AM IST
Highlights

ಚಳಿಗಾಲದ ಅಧಿವೇಶನದ ಬಗ್ಗೆ ದಿನಾಂಕ‌ ನಿಗಧಿ ಮಾಡುವ ಸಂಬಂಧ ಚರ್ಚೆ| ಹಲವು ಮಹತ್ವದ ವಿಧೇಯಕಗಳ ಜಾರಿ ಕುರಿತು ಚರ್ಚೆ| ಕರ್ನಾಟಕ‌ ಭವನದ ಖಾಲಿ‌ ಹುದ್ದೆಗಳ ನೇಮಕಾತಿ| ಕರ್ನಾಟಕ ಸಿವಿಲ್ ಸೇವೆ ಕಾಯ್ದೆಗೆ ತಿದ್ದುಪಡಿ| ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ| ಸರ್ಕಾರಿ ವ್ಯಾಜ್ಯಗಳ ಕಾಯ್ದೆ ತಿದ್ದುಪಡಿ| 

ಬೆಂಗಳೂರು(ಆ.20): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು(ಬುಧವಾರ) ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

"

ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ? 

ಸಭೆಯಲ್ಲಿ ಪ್ರಮುಖವಾಗಿ ಚಳಿಗಾಲದ ಅಧಿವೇಶನದ ಬಗ್ಗೆ ದಿನಾಂಕ‌ ನಿಗಧಿ ಮಾಡುವ ಸಂಬಂಧ ಚರ್ಚೆ, ಹಲವು ಮಹತ್ವದ ವಿಧೇಯಕಗಳ ಜಾರಿ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಭೂ ಮಂಜೂರಾತಿ ವಿಧೇಯಕ, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿ, ಕರ್ನಾಟಕ‌ ಭವನದ ಖಾಲಿ‌ ಹುದ್ದೆಗಳ ನೇಮಕಾತಿ, ಕರ್ನಾಟಕ ಸಿವಿಲ್ ಸೇವೆ ಕಾಯ್ದೆಗೆ ತಿದ್ದುಪಡಿ, ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ, ಸರ್ಕಾರಿ ವ್ಯಾಜ್ಯಗಳ ಕಾಯ್ದೆ ತಿದ್ದುಪಡಿ, ಜಲ್ಲಿ ಕಲ್ಲು ಕ್ರಷರ್ ಪರವಾನಗಿ ಕುರಿತ ಕಾಯ್ದೆ ತಿದ್ದುಪಡಿಗೆ ಸಮ್ಮತಿ ಸಾಧ್ಯತೆ ಎಂದು ತಿಳಿದು ಬಂದಿದೆ. 

ಬೆಂಗ್ಳೂರು ಗಲಭೆ: ಕಿಂಗ್‌ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗ

ಕೋವಿಡ್‌ನಿಂದಾಗಿ ಸಹಕಾರಿ ಸಂಘಗಳಿಗೆ ಆಡಳಿತಾಧಿಕಾರಿಗಳ ನೇಮಕದ ಬಗ್ಗೆಯೂ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿವಿಧ ಠಾಣೆಗಳಲ್ಲಿರುವ 62 ಪ್ರಕರಣಗಳನ್ನ ವಾಪಸ್ ಪಡೆಯುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ. ಇನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಮೀಸಲಾತಿ, ಕೊಳಚೆ ಪ್ರದೇಶಗಳಲ್ಲಿ‌ ನೆಲೆಸಿರುವವರಿಗೆ ಹಕ್ಕುಪತ್ರ ನೀಡುವ ಬಗ್ಗೆ, ಬಿಡಿಎ ನಾಗರಿಕ ಸೌಲಭ್ಯಗಳ ಹಂಚಿಕೆಗೆ ಘಟನೋತ್ತರ ಅನುಮೋದನೆ, 65.84 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಭ್ರಮ ಕಿಟ್ ನೀಡುವ ಬಗ್ಗೆ ಚರ್ಚೆ ಸಾಧ್ಯತೆ ಎಂದು ತಿಳಿದು ಬಂದಿದೆ. 

ಬೆಂಗಳೂರು ಗಲಭೆ ನಡೆದು 10 ದಿನಗಳು ಕಳೆದಿವೆ. ಹೀಗಾಗಿ ರಾಜ್ಯ ಸರ್ಕಾರದಿಂದ ಕೆಲವೊಂದು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗಲಭೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಎಲ್ಲಾ ಸಂಘಟನೆಗಳನ್ನ ನಿಷೇಧಿಸುವ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಇಂದಿನ ಸಭೆ ತೀವ್ರ ಕುತೂಹಲ ಕೆರಳಿಸಿದೆ. 

ಬೆಂಗಳೂರು ಗಲಭೆ: ಕ್ಲೇಮ್‌ ಕಮಿಷನರ್‌ ನೇಮಕಕ್ಕೆ ಹೈಕೋರ್ಟ್‌ಗೆ ಸರ್ಕಾರದ ಅರ್ಜಿ

ಗಲಭೆ ಕುರಿತು ಪಡೆಯಲಾಗಿರುವ ಪ್ರಾಥಮಿಕ ಮಾಹಿತಿ ಅನ್ವಯ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಗಲಭೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸಂಘಟನೆಯನ್ನ ಬ್ಯಾನ್ ಮಾಡುವ ಬಗ್ಗೆ ಚರ್ಚೆ, ಪೊಲೀಸರು ನೀಡಿರುವ ಸಾಕ್ಷ್ಯಗಳ ಪ್ರಕಾರ ಬ್ಯಾನ್ ಬಗ್ಗೆ ಸಮಾಲೋಚನೆ ನಡೆಯಲಿದೆ.  SDPI ಸಂಘಟನೆಯನ್ನ ಬ್ಯಾನ್ ಮಾಡಲು ಇರುವ ಎಲ್ಲ ಅವಕಾಶಗಳ ಬಗ್ಗೆ ಚರ್ಚೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. SDPI ಬ್ಯಾನ್ ಮಾಡಲು ದೊರೆತಿರುವ ಸಾಕ್ಷಾಧಾರಗಳು ಸಮರ್ಪಕವಾದರೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕ್ಲೇಮ್ ಕಮೀಷನರ್ ನೇಮಕವಾಗದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನವನ್ನ ಗಮನಿಸಿ ಮುಂದಿನ ತಿರ್ಮಾನ ಕೈಗೊಳ್ಳುವ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಈ ಹಿಂದಿನ ಪ್ರಕರಣಗಳಲ್ಲಿ SDPI/ PFI ಭಾಗಿಯಾದ ಸಾಕ್ಷ್ಯಗಳನ್ನ ಇಟ್ಟುಕೊಂಡು ಬ್ಯಾನ್ ಮಾಡುವ ಬಗ್ಗೆ ಸಹ ನಿರ್ಣಯ ಸಾಧ್ಯತೆ ಇದ್ದು, ಎಲ್ಲಾ ಅವಕಾಶಗಳ ಬಗ್ಗೆಯೂ ಸಹ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ ಎಂದು ಹೇಳಲಾಗಿದೆ. 
 

click me!