
ಬೆಂಗಳೂರು : ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ) ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಬೆಂಗಳೂರಿನಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ತುಮಕೂರು ರಸ್ತೆಯಿಂದ ಮೈಸೂರು ರಸ್ತೆಗೆ ವರ್ತುಲ ರೀತಿಯಲ್ಲಿ ಸಂಪರ್ಕ ಕಲ್ಪಿಸುವ 73 ಕಿಮೀ ಉದ್ದ ಮತ್ತು 100 ಮೀ. ಅಗಲದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ 948.14 ಎಕರೆ ಭೂಮಿ ಸ್ವಾಧೀನಕ್ಕೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ಅಕ್ಟೋಬರ್ 17ರಂದು ಬಿಡಿಎ ಹೊರಡಿಸಿದ್ದ ಅಧಿಸೂಚನೆಯಂತೆ ಭೂ ಮಾಲೀಕರಿಗೆ ಪರಿಹಾರ ನೀಡಲು ತೀರ್ಮಾನಿಸಲಾಯಿತು.
ಪೆರಿಫೆರಲ್ ರಿಂಗ್ ರಸ್ತೆ ಹೈ-ತೀರ್ಪು ಮತ್ತು ಬಿಡಿಎ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ಪಡೆಯಲು ಕೆಲ ಆಯ್ಕೆಗಳನ್ನು ನೀಡಲಾಗಿದೆ. 20 ಗುಂಟೆ ಒಳಗಿನ ಭೂಮಿಗೆ ಸರ್ಕಾರ ನಗದು ಪರಿಹಾರ ನೀಡಲಿದೆ. ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿರುವವರಿಗೆ ಪರಿಹಾರಕ್ಕಾಗಿ 4 ಆಯ್ಕೆ ನೀಡಲಾಗಿದೆ. ಅದರ ಪ್ರಕಾರ ನಗರ ಭಾಗದಲ್ಲಿನ ಭೂಮಿಗೆ ಮಾರುಕಟ್ಟೆ ದರಕ್ಕಿಂತ 2 ಪಟ್ಟು, ಗ್ರಾಮೀಣ ಭಾಗದಲ್ಲಿನ ಭೂಮಿಗೆ ಮಾರುಕಟ್ಟೆ ದರದ 3 ಪಟ್ಟು ಪರಿಹಾರ ನೀಡಲಾಗುತ್ತದೆ. ಅದನ್ನು ಒಪ್ಪದಿದ್ದರೆ ಟಿಡಿಆರ್ ಅಥವಾ ನೆಲ ವಿಸ್ತೀರ್ಣ ಅನುಪಾತ (ಎಫ್‌ಎಆರ್) ನೀಡುವುದು. ಅದಕ್ಕೂ ಭೂ ಮಾಲೀಕರು ನಿರಾಕರಿಸಿದರೆ ಭೂಮಿ ವಿಸ್ತೀರ್ಣದ ಶೇ.35ರಷ್ಟು ಭಾಗದ ವಾಣಿಜ್ಯ ಭೂಮಿ ಅಥವಾ ವಸತಿ ಪ್ರದೇಶದಲ್ಲಿ ಶೇ.40ರಷ್ಟು ಅಭಿವೃದ್ಧಿ ಹೊಂದಿದ ಭೂಮಿ ನೀಡಲಾಗುತ್ತದೆ. ಈ ಆದೇಶದಂತೆ ರೈತರಿಗೆ ಪರಿಹಾರ ನೀಡಿ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಬೆಂಗಳೂರು ಉಪನಗರ ಸಾರಿಗೆ ಯೋಜನೆಯ ಅಂದಾಜು ವೆಚ್ಚ ಹೆಚ್ಚಳಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 2 ಮತ್ತು 4ನೇ ಕಾರಿಡಾರ್‌ಗೆ ಈ ಹಿಂದೆ ಅಂದಾಜು ₹15 ಸಾವಿರ ಕೋಟಿ ವೆಚ್ಚ ನಿಗದಿ ಮಾಡಲಾಗಿತ್ತು. ಇದೀಗ ಅಂದಾಜು ವೆಚ್ಚವನ್ನು ₹16,879 ಕೋಟಿಗೆ ಹೆಚ್ಚಿಸಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರ ಅನುಮೋದನೆ ನೀಡಿರುವ ದೇವನಹಳ್ಳಿ ತಾಲೂಕಿನ ಗುಟ್ಟಹಳ್ಳಿ ಮತ್ತು ದೇವನಹಳ್ಳಿ ಗ್ರಾಮದಲ್ಲಿನ ವಸತಿ ಬಡಾವಣೆಯಲ್ಲಿ 3,300.16 ಚದರ ಮೀ. ವಿಸ್ತೀರ್ಣದ ಸಿಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ 30 ವರ್ಷ ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರ ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ