ಸಂಪುಟ ಸರ್ಕಸ್‌ ತುಸು ವಿಳಂಬ: ದಿಲ್ಲಿಗೆ ಹೋದ ಸಿಎಂ ಬರಿಗೈಲಿ ವಾಪಸ್!

By Kannadaprabha NewsFirst Published Nov 19, 2020, 7:38 AM IST
Highlights

ಸಂಪುಟ ಸರ್ಕಸ್‌ ತುಸು ವಿಳಂಬ| ದಿಲ್ಲಿಗೆ ಹೋದ ಸಿಎಂ ಬರಿಗೈಲಿ ವಾಪಸ್‌| ಈಗ ತುರ್ತು ಏನಿದೆ: ಜೆ.ಪಿ.ನಡ್ಡಾ ಪ್ರಶ್ನೆ| ಬಿಎಸ್‌ವೈ ಭೇಟಿಗೆ ಸಿಗದ ಅಮಿತ್‌ ಶಾ

ಬೆಂಗಳೂರು(ನ.19): ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತು ತುಸು ವಿಳಂಬವಾಗುವ ಸಾಧ್ಯತೆಯಿದೆ. ಏಕೆಂದರೆ, ವಿಸ್ತರಣೆ ಬಗ್ಗೆ ರಾಜ್ಯ ನಾಯಕತ್ವಕ್ಕೆ ಇರುವ ಆತುರ ಬಿಜೆಪಿ ವರಿಷ್ಠರಲ್ಲಿ ಕಂಡುಬರುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಗೆ ದೌಡಾಯಿಸಿ ಸಾಧ್ಯವಾದ ಎಲ್ಲ ಪ್ರಯತ್ನ ನಡೆಸಿದರೂ ಹೈಕಮಾಂಡ್‌ ತಣ್ಣನೆಯ ಪ್ರತಿಕ್ರಿಯೆ ನೀಡಿದೆ. ಹೀಗಾಗಿ, ಸಂಪುಟ ವಿಸ್ತರಣೆ ವಿಚಾರ ತುಸು ಮುಂದೂಡಿಕೆ ಕಂಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಬುಧವಾರ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಸಂಪುಟ ವಿಸ್ತರಣೆ -ಪುನಾರಚನೆ ಬಗ್ಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಈಗ ಅಂಥ ತುರ್ತು ಏನಿದೆ ಎಂದು ನಡ್ಡಾ ಅವರು ಪ್ರಶ್ನಿಸಿ, ಈ ಬಗ್ಗೆ ಆಲೋಚನೆ ನಡೆಸಿ ಅನಂತರ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಯಡಿಯೂರಪ್ಪ ಅವರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಎಂದ ಶಾಸಕ

ಇದರಿಂದಾಗಿ ಬುಧವಾರದ ಮುಖ್ಯಮಂತ್ರಿಗಳ ದೆಹಲಿ ಪ್ರವಾಸವು ನಿರೀಕ್ಷೆಯಂತೆ ನಡೆದಿಲ್ಲ ಎನ್ನಲಾಗಿದೆ. ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಮಾಹಿತಿ ಹೊಂದಿರುವ ಪಕ್ಷದ ಹಿಂದಿನ ಅಧ್ಯಕ್ಷ ಹಾಗೂ ಹಾಲಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಪ್ರಯತ್ನಿಸಿದರಾದರೂ, ಅದು ಸಫಲವಾಗಲಿಲ್ಲ. ಉಪ ಚುನಾವಣೆಗೂ ಮುನ್ನ ಯಡಿಯೂರಪ್ಪ ಅವರು ಸಂಪುಟ ಕಸರತ್ತಿನ ಸಂಬಂಧ ದೆಹಲಿಗೆ ಹೋದಾಗಲೂ ಅಮಿತ್‌ ಶಾ ಭೇಟಿ ಸಾಧ್ಯವಾಗಿರಲಿಲ್ಲ.

ದೆಹಲಿಯಲ್ಲಿ ಯಡಿಯೂರಪ್ಪ:

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ನಡ್ಡಾ ಅವರಿಗೆ ಮನವರಿಕೆ ಮಾಡಿಕೊಟ್ಟಯಡಿಯೂರಪ್ಪ ಅವರು, ಸಂಪುಟ ಪುನಾರಚನೆಯ ಅಗತ್ಯವನ್ನು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದರು ಎನ್ನಲಾಗಿದೆ. ಇದೇ ವೇಳೆ ಯಡಿಯೂರಪ್ಪ ಅವರು ಸಚಿವ ಸ್ಥಾನದ ಆಕಾಂಕ್ಷಿಗಳ ಮಾಹಿತಿಯನ್ನು ಸಹ ನಡ್ಡಾ ಮುಂದಿಟ್ಟಿದ್ದಾರೆ. ಈ ಎಲ್ಲಾ ಮಾಹಿತಿ ಪಡೆದ ನಡ್ಡಾ ಅವರು ಮುಂದಿನ 3-4 ದಿನದಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಹೈಕಮಾಂಡ್‌ ತೀರ್ಮಾನ ಹೊರಬೀಳುವವರೆಗೂ ಸಚಿವ ಸ್ಥಾನಾಕಾಂಕ್ಷಿಗಳು ಕಾಯದೇ ಗತ್ಯಂತರವಿಲ್ಲ ಎಂದು ಹೇಳಲಾಗುತ್ತಿದೆ.

ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಎಂದ ಶಾಸಕ

3-4 ದಿನದಲ್ಲಿ ತೀರ್ಮಾನ: ಸಿಎಂ

ದಿಲ್ಲಿಯಲ್ಲಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚಿಸಿದ್ದೇನೆ. ಇತರೆ ಹಿರಿಯ ನಾಯಕರ ಜತೆ ಚರ್ಚಿಸಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ವಿಸ್ತರಣೆಯೋ, ಪುನಾರಚನೆಯೋ ಎಂಬ ಬಗ್ಗೆ 3-4 ದಿನದಲ್ಲಿ ಹೈಕಮಾಂಡ್‌ ತನ್ನ ತೀರ್ಮಾನ ತಿಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಬಳಿ ತಮ್ಮ ಅಭಿಪ್ರಾಯ ಹೇಳಿರುವುದಾಗಿ ತಿಳಿಸಿದ ಯಡಿಯೂರಪ್ಪ ಅವರು, ಅಮಿತ್‌ ಶಾ ಭೇಟಿ ಸಾಧ್ಯವಾಗಿಲ್ಲ ಎಂದರು.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

ಇನ್ನೂ 3 ಉಪಚುನಾವಣೆಗಳು ನಡೆಯಬೇಕಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಕನ್ನಡಪ್ರಭ ನ.12ರಂದೇ ವರದಿ ಮಾಡಿತ್ತು.

click me!